ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಗುರುವಾರ ಸಂಜೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಯಶಸ್ವಿಯಾಗಿ ಡಾಕಿಂಗ್ ಆಗಿದೆ.
ಈ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ತಲುಪಿದ ಪ್ರಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರರಾಗಿದ್ದಾರೆ.
ಬುಧವಾರ ಆ್ಯಕ್ಸಿಯಮ್ 4 ಮಿಷನ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿತ್ತು. 28 ಗಂಟೆಗಳ ಹಾರಾಟದ ಬಳಿಕ ಡ್ರ್ಯಾಗನ್ ಕ್ಯಾಪ್ಸುಲ್ ಗುರಿಯನ್ನು ತಲುಪಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರಸ್ಥರು ಅನ್ನ ತಿನ್ನುವವರೇ ಆದರೆ, ಭೂ ಸ್ವಾಧೀನ ಕೈಬಿಡಲಿ
41 ವರ್ಷದ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಬಾಹ್ಯಾಕಾಶವನ್ನು ತಲುಪಿದ 2ನೇ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ಇದಾದ 4 ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ 2ನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ.
ನಾಲ್ವರು ಗಗನಯಾನಿಗಳು 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಇರಲಿದ್ದಾರೆ. ಶುಕ್ಲಾ ಅವರು ಐಎಸ್‌ಎಸ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಿದ್ದಾರೆ.