- ಈ ಯೋಜನೆಗೆ ₹20 ಕೋಟಿ ಮೀಸಲಿಟ್ಟ ಬಿಬಿಎಂಪಿ
- ರಸ್ತೆಗಳ ನಿರ್ವಹಣೆಗೆ ಟಿಪ್ಪರ್ ಬಳಸಲು ಟೆಂಡರ್‌ನಲ್ಲಿ ಸೂಚನೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳ ಉದ್ದಕ್ಕೂ ತ್ಯಾಜ್ಯ ಸುರಿಯುವುದು, ಫುಟ್‌ಪಾತ್ ಹದಗೆಟ್ಟಿರುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ನಿಮ್ಮ ಗಮನಕ್ಕೆ ಬಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕೂಡಲೇ ದೂರು ನೀಡಿ. ದೂರು ನೀಡಲು ಹಿಂಜರಿಯಬೇಡಿ. ಏಕೆಂದರೆ, ವಾರ್ಷಿಕ ನಿರ್ವಹಣಾ ಒಪ್ಪಂದದ ಅಡಿಯಲ್ಲಿ 1,344 ಕಿ.ಮೀ ರಸ್ತೆಯ ನಿರ್ವಹಣೆಯನ್ನು ಪಾಲಿಕೆ ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡುತ್ತಿದೆ.
“ಒಟ್ಟು ಉದ್ದದ ಪೈಕಿ 799 ಕಿ.ಮೀ ಪ್ರಮುಖ ರಸ್ತೆಗಳನ್ನು ವಾರ್ಷಿಕ ನಿರ್ವಹಣೆ ಒಪ್ಪಂದ (ಎಎಂಸಿ) ಅಡಿ ತರಲಾಗಿದ್ದು, ಪ್ರತಿ ಕಿಲೋಮೀಟರ್ ನಿರ್ವಹಣೆಗೆ ವರ್ಷಕ್ಕೆ ₹2.3 ಲಕ್ಷ ಪಾವತಿಸಲು ಬಿಬಿಎಂಪಿ ಯೋಜಿಸಿದೆ. ಉಳಿದ 545 ಕಿ.ಮೀ ರಸ್ತೆಗಳು ನಿರ್ಮಾಣ ಹಂತದಲ್ಲಿವೆ ಅಥವಾ ದೋಷ ಹೊಣೆಗಾರಿಕೆ ಅವಧಿಯ (ಡಿಎಲ್‌ಪಿ) ವ್ಯಾಪ್ತಿಯಲ್ಲಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ ನಿರ್ವಹಣಾ ಒಪ್ಪಂದದಡಿಯಲ್ಲಿ, ರಸ್ತೆಗಳನ್ನು ಕಟ್ಟಡಗಳ ಅವಶೇಷಗಳಿಂದ ಮುಕ್ತ ಮಾಡಬೇಕು. ಚರಂಡಿಗಳು ಸ್ವಚ್ಛವಾಗಿರಬೇಕು. ಫುಟ್‌ಪಾತ್‌ಗಳು ಜನರು ನಡೆಯಲು ಯೋಗ್ಯವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಲ್ಲುಗಳು ಹಾಗೂ ರಸ್ತೆ ಬದಿ ಬೆಳೆದ ಹುಲ್ಲುಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಈ ಖಾಸಗಿ ಸಂಸ್ಥೆಯು ಹೊಂದಿದೆ. ಆದರೆ, ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ತುಂಬುವುದು ಒಪ್ಪಂದದ ಭಾಗವಾಗಿಲ್ಲ. ಒಟ್ಟಾರೆ, ಈ ಯೋಜನೆಗೆ ಬಿಬಿಎಂಪಿ ₹20 ಕೋಟಿ ಮೀಸಲಿಟ್ಟಿದೆ. ಈ ಯೋಜನೆಯನ್ನು ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ನಿರ್ವಹಿಸುತ್ತಿದ್ದಾರೆ.
“ಪ್ರಸ್ತುತ ವಾರ್ಡ್‌ಗಳಲ್ಲಿ ನಡೆಯುವ ಕಾಮಗಾರಿಗಳಿಗಾಗಿ ವಾರ್ಡ್ ಎಂಜಿನಿಯರ್‌ಗಳು ಟ್ರ್ಯಾಕ್ಟರ್ ಮತ್ತು ಕೆಲಸಗಾರರನ್ನು ಹೊಂದಿದ್ದಾರೆ. ವಾರ್ಡ್ ಕಾಮಗಾರಿಗೆ ಇರುವ ಟ್ರ್ಯಾಕ್ಟರ್‌ಗಳನ್ನು ಪ್ರಮುಖ ರಸ್ತೆಗಳಿಗೆ ಬಳಸಬಾರದು. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗೆ ಟಿಪ್ಪರ್ ಲಾರಿಗಳನ್ನು ಬಳಸಲು ಟೆಂಡರ್‌ನಲ್ಲಿ ಸೂಚಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹದೇವಪುರ ಕಾರ್ಯಪಡೆಯ ಸಕ್ರಿಯ ಸದಸ್ಯ ಜಯಕುಮಾರ್ ಮಾತನಾಡಿ, “ಎಎಂಸಿ ಮಾದರಿ ಉತ್ತಮವಾಗಿದ್ದು, ಭವಿಷ್ಯದಲ್ಲಿ ವಾರ್ಡ್ ರಸ್ತೆಗಳು ಸೇರಿದಂತೆ ಎಲ್ಲ ರಸ್ತೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಬೇಕು. ರಸ್ತೆಯ ಇಕ್ಕೆಲಗಳಲ್ಲಿ ಹೂಳು ಮತ್ತು ಅವಶೇಷಗಳು ಸಂಗ್ರಹವಾಗುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೆಟ್ರೋದಲ್ಲಿ ವೃದ್ಧನ ಸಾವು ಪ್ರಕರಣ; ಆರೋಪ ನಿರಾಕರಿಸಿದ ಬಿಎಂಆರ್‌ಸಿಎಲ್
“ಕಳಪೆ ಅನುಷ್ಠಾನದ ಅಪಾಯವಿದೆ. ಬಿಬಿಎಂಪಿಯು ಪ್ರತಿ ಸ್ಟ್ರೀಟ್‌ನಲ್ಲಿ ಇಂಜಿನಿಯರ್ ಮತ್ತು ರಸ್ತೆ ನಿರ್ವಹಣೆಯ ಉಸ್ತುವಾರಿ ಸಂಸ್ಥೆಯ ಸಂಪರ್ಕ ವಿವರಗಳನ್ನು ಪ್ರದರ್ಶಿಸುವ ಬೋರ್ಡ್‌ಗಳನ್ನು ಹಾಕಬೇಕು. ಆ ಪಟ್ಟಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಚೆಕ್ ಮತ್ತು ಬ್ಯಾಲೆನ್ಸ್‌ಗಳನ್ನು ಖಾತ್ರಿಪಡಿಸಿಕೊಂಡ ನಂತರ ಬಿಬಿಎಂಪಿಯು ಎಲ್ಲ ರಸ್ತೆಗಳನ್ನು ನಿಯಮಿತವಾಗಿ ನಿರ್ವಹಿಸಲು ಯೋಜನೆಯನ್ನು ರೂಪಿಸಬೇಕು” ಎಂದು ತಿಳಿಸಿದರು.