ಬಡ ರೋಗಿಗಳಿಗೆ, ಅಗತ್ಯವುಳ್ಳವರಿಗೆ ಬಳಕೆಯಾಗಬೇಕಾದ ಲಕ್ಷಾಂತರ ರೂಪಾಯಿ ಮೌಲ್ಯದ ಮಾತ್ರೆಗಳು, ಬಳಕೆಯಾಗದೇ ಆಸ್ಪತ್ರೆಲ್ಲಿ ಹಾಗೆಯೇ ಉಳಿದಿದ್ದು, ಇದೀಗ ರಸ್ತೆ ಬದಿಯ ತಿಪ್ಪೆ ಸೇರಿವೆ.
ಚಿತ್ರದುರ್ಗಯ ಪ್ರಾದೇಶಿಕ ಸಾರಿಗೆ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಅವಧಿ ಮೀರಿದ ಲಕ್ಷಾಂತರ ರೂ. ಮೌಲ್ಯದ ಮಾತ್ರಗಳು ಮತ್ತು ಔಷಧಿಗಳು ಪತ್ತೆಯಾಗಿವೆ. ಅಲ್ಲದೆ, ಕೆಲವು ಮಾತ್ರಗಳ ಅವಧಿ ಇನ್ನೂ ಒಂದು ವರ್ಷವಿದ್ದರೂ ಕೂಡ, ಅವುಗಳೂ ತಿಪ್ಪೆ ಸೇರಿವೆ.
ಶೀತ, ಕೆಮ್ಮು, ಅಲರ್ಜಿಯಂತಹ ಸಮಸ್ಯೆಗಳಿಗೆ ನೀಡಲಾಗುವ ಸಿಟ್ರಿಜನ್ ಮಾತ್ರೆಗಳು ಅಧಿಕವಾಗಿ ತಿಪ್ಪೆಯಲ್ಲಿ ಬಿದ್ದಿವೆ. ಅವುಗಳ ಮೇಲೆ, ಕರ್ನಾಟಕ ಸರ್ಕಾರ, ನಾಟ್ ಫಾರ್ ಸೇಲ್ (ಮಾರಾಟಕ್ಕಲ್ಲ) ಎಂದು ಬರೆಯಲಾಗಿದೆ. ಅವುಗಳಲ್ಲಿ ಹಲವು ಮಾತ್ರಗಳ ಅವಧಿ 2024ರವರೆಗೆ ಇದ್ದರೂ, ಅವುಗಳನ್ನು ಎಸೆಯಲಾಗಿದೆ. ಸರ್ಕಾರ ಬಡ ರೋಗಿಗಳಿಗೆ ಉಚಿತವಾಗಿ ವಿತರಣೆಗಾಗಿ ಕೊಟ್ಟಿದ್ದ ಮಾತ್ರೆಗಳನ್ನು ರಸ್ತೆ ಬದಿಯ ಕಸ ಮಾಡಲಾಗಿದೆ.
“ಸರ್ಕಾರದ ಮಾತ್ರೆಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿರುವುದರ ಹಿಂದೆ, ಹೊಸದಾಗಿ ಮಾತ್ರೆಗಳನ್ನು ಖರೀದಿಸಿ, ಮಾತ್ರೆ ತಯಾಕರು ಹಾಗೂ ಸರಬರಾಜು ದಾರರಿಗೆ ಅನುಕೂಲ ಮಾಡಿಕೊಡುವ ದುರುದ್ದೇವೆ ಇರುವಂತೆ ಕಾಣುತ್ತಿದೆ” ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
“ಈ ಹಿಂದೆಯೂ ಅವಧಿ ಮೀರಿದ ಮಾತ್ರೆಗಳನ್ನು ಬಿಸಾಡಲಾಗಿತ್ತು. ನಿಯಮಗಳ ಪ್ರಕಾರ, ಅಂತಹ ಮಾತ್ರೆಗಳನ್ನು ಯಾರಿಗೂ ಸಿಗದಂತೆ ಗುಂಡಿಯಲ್ಲಿ ಮುಚ್ಚಬೇಕು. ಆದರೆ, ಈ ರೀತಿ ರಸ್ತೆ ಬದಿಯಲ್ಲಿ ಬಿಸಾಡಿರುವುದು ಹಲವು ರೀತಿಯ ಅನುಮಾನಗಳನ್ನು ಹುಟ್ಟುಹಾಕುತ್ತಿವೆ” ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.
“ಮಾತ್ರೆಗಳನ್ನು ಯಾರು ಬಿಸಾಡಿದರು, ಯಾಕೆ ಬಿಸಾಡಿದರು ಎಂಬ ಬಗ್ಗೆ ಆರೋಗ್ಯ ಅಧಿಕಾರಿಗಳು ತನಿಖೆ ನಡೆಸಬೇಕು. ದುರುದ್ದೇಶದಿಂದ ಬಿಸಾಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ನಗರ ವಾಸಿಗಳು ಆಗ್ರಹಿಸಿದ್ದಾರೆ.