ಶಿವಮೊಗ್ಗ ಚೆಸ್‌ನಲ್ಲಿ ಒತ್ತಡದಲ್ಲಿ ಯೋಚನೆ ಮಾಡುವ ಶಕ್ತಿಯಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಗುಣವಿದೆ. ಪ್ರತಿ ಹಂತದಲ್ಲೂ ಸಮಸ್ಯೆಯನ್ನೆದುರಿಸುವ ಸಂದರ್ಭವಿದೆ. ಇಂತಹ ಸಮಸ್ಯೆ ಮೂಲಕವೇ ಸಮರ್ಪಕ ಉತ್ತರ ಕಂಡುಕೊಳ್ಳುವ ಆಟ ಚೆಸ್ ಆಗಿದೆ ಎಂದು ಜೆಸಿಐ ಇಂಡಿಯಾದ ಝೋನ್-೨೪ರ ಅಧ್ಯಕ್ಷ ಗೌರೀಶ್ ಭಾರ್ಗವ್ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಆರಂಭವಾದ ೧೯ರ ಒಳಗಿನವರ ರಾಜ್ಯಮಟ್ಟದ ಚೆಸ್ ಚಾಂಪಿಯನ್ ಶಿಪ್‌ಟೂರ್ನಿಯನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದರು. ಚೆಸ್ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕನಾಗುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಇದರಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಯಾವೆಲ್ಲ ಗುಣಗಳು ಬೇಕೋ ಅವೆಲ್ಲವೂ ಇವೆ. ಈ ಆಟದ ಮೂಲಕ ಹೆಸರುಗಳಿಸಿ ದೇಶವನ್ನು ಪ್ರತಿನಿಧಿಸುವಂತಾಗಬೇಕು ಎಂದರು.
ವಿದ್ಯಾರ್ಥಿ ದೆಸೆಯಿಂಸಲೇ ಉತ್ತಮ ಹವ್ಯಾಸದ ಆಟಗಳನ್ನು ರೂಢಿಸಿಕೊಂಡು ಸ್ಪರ್ಧಾ ಮನೋಭಾವದಿಂದ ಆಡುವುದು ಮುಖ್ಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿದ್ದ ವಿನೋಬನಗರ ಸಿಪಿಐ ಡಿ ಕೆ ಸಂತೋಷ್‌ಕುಮಾರ್, ಚೆಸ್ ಉತ್ತಮ ಹವ್ಯಾಸದ ಆಟ. ಮನಸ್ಸನ್ನು ಕೇಂದ್ರೀಕರಿಸಲು ಇದು ಅತ್ಯಗತ್ಯ ಎಂದರು.
ಕ್ರೀಡಾ ಮತ್ತು ಸ್ಪರ್ಧಾ ಮನೋಭಾವದಿಂದ ಆಟವನ್ನು ಆಡಿದರೆ ಯಶಸ್ಸು ಸಾಧ್ಯ. ಮಕ್ಕಳು ಬಾಲ್ಯದಿಂದಲೇ ಇಂತಹ ಆಟದ ಮೂಲಕ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ಜೆಸಿಐ ಝೋನ್-೨೪ರ ಸಂಭಾವ್ಯ ಉಪಾಧ್ಯಕ್ಷ ಪ್ರಮೋದ ಶಾಸ್ತ್ರಿ, ಚಾಣಕ್ಯ ಚೆಸ್ ಸ್ಕೂಲ್ ಮುಖ್ಯಸ್ಥ ವಿಲ್ಸನ್ ಅಂದ್ರಾದೆ, ಮುಖ್ಯ ತೀರ್ಪುಗಾರ ಪ್ರಾಣೇಶ್ ಯಾದವ್, ಶಿವಮೊಗ್ಗ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಸಚಿನ್, ಕುಂದಾಪುರದ ಕಾಶ್ವಿ ಚೆಸ್ ಸ್ಕೂಲ್‌ನ ನರೇಶ್, ಚಿರಂತನ್ ಜೆಸಿಐನ ಕಾರ್ಯದರ್ಶಿ ವೈಷ್ಣವಿ, ಚಾಣಕ್ಯ ಚೆಸ್‌ನ ಆಶಾ ಅಂದ್ರಾದೆ ಉಪಸ್ಥಿತರಿದ್ದರು.