ಸೆಪ್ಟೆಂಬರ್ ಕ್ರಾಂತಿಯ ಕುತೂಹಲ ಹೆಚ್ಚಾಗಿದೆ. ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು ಕೇಳಿಬಂದಿದೆ. ಸಂಪುಟ ವಿಸ್ತರಣೆ, ಸಿಎಂ-ಕೆಪಿಸಿಸಿ ಅಧ್ಯಕ್ಷಗಾದಿ ಬದಲಾವಣೆ- ಹೀಗೆ ಹಲವು ಊಹಾಪೋಹಗಳಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿಕೆ ಪುಷ್ಟಿ ನೀಡಿದೆ.
ರಾಜ್ಯ ರಾಜಕಾರಣದಲ್ಲಿ ಮತ್ತೆ ಬದಲಾವಣೆಯ ಕೂಗು ಕೇಳಿಬಂದಿದೆ. ‘ಸೆಪ್ಟೆಂಬರ್ ಕ್ರಾಂತಿ’ ಬಗ್ಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ನೀಡಿದ ಹೇಳಿಕೆ ಬೆನ್ನಲ್ಲೇ ಸಂಪುಟ ವಿಸ್ತರಣೆ, ಮುಖ್ಯಮಂತ್ರಿ ಬದಲಾವಣೆ, ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ -ಹೀಗೆ ತರತರದ ಚರ್ಚೆಗಳು ನಡೆಯುತ್ತಿವೆ. ‘ರಾಜಣ್ಣನ ಹೇಳಿಕೆಯನ್ನು ನಿರ್ಲಕ್ಷಿಸುವುದೇ ಒಳ್ಳೆಯದು’ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ ಕ್ಯಾಬಿನೆಟ್ ಸಚಿವರು ನೀಡುವ ಹೇಳಿಕೆಯನ್ನು ಕಡೆಗಣಿಸಲು ಹೇಗೆ ಸಾಧ್ಯ?
“ನೀವು ಮೇ ಕ್ರಾಂತಿ, ಆಗಸ್ಟ್ ಕ್ರಾಂತಿ ಎಂದೆಲ್ಲ ಕೇಳಿರುವಂತೆ ಸೆಪ್ಟೆಂಬರ್ ಕ್ರಾಂತಿ ನಡೆಯಲಿದೆ. ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗಲಿದ್ದು, ಅದು ಪಕ್ಷದ ವಿಚಾರದಲ್ಲೋ ಅಥವಾ ಸರ್ಕಾರದಲ್ಲಿಯೋ ಎಂಬುದನ್ನು ಕಾದು ನೋಡಿ” ಎಂಬುದು ಗುರುವಾರ(ಜೂನ್ 26) ರಾಜಣ್ಣ ನೀಡಿರುವ ಹೇಳಿಕೆ. ಜೊತೆಗೆ ನವೆಂಬರ್‌ನಲ್ಲಿ ಬದಲಾವಣೆ ನಡೆಯಲಿದೆ, ಆದರೆ ಗಣನೀಯ ಬದಲಾವಣೆ ಏನಲ್ಲ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಿ ಆರ್ ಪಾಟೀಲ್ ನೆಪದಲ್ಲಿ ಸರ್ಕಾರದ ವಿರುದ್ಧ ಅಪಸ್ವರ ಎತ್ತಿರುವ ಶಾಸಕರು ನೈತಿಕತೆ ಉಳಿಸಿಕೊಂಡಿದ್ದಾರೆಯೇ?
ಇದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಈ ಹೇಳಿಕೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಲು ಮುಖ್ಯ ಕಾರಣ ಸಿಎಂ ಸಿದ್ದರಾಮಯ್ಯ ಅವರ ಇತ್ತೀಚಿನ ಹೈಕಮಾಂಡ್ ಭೇಟಿ. ರಾಜಣ್ಣ ಅವರ ಹೇಳಿಕೆ ಮಾಧ್ಯಮಗಳಲ್ಲಿ ವಿಶ್ಲೇಷಣೆಗೊಳಗಾಗಿರುವ ನಡುವೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ತೇಪೆ ಹಾಕುವ ಕಾರ್ಯಕ್ಕೆ ಇಳಿದಿದ್ದಾರೆ.
ಇತ್ತೀಚೆಗೆ ವಸತಿ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕೈಗಾರಿಕಾ ಸಚಿವ ಬಿ.ಆರ್. ಪಾಟೀಲ್ ಅವರು ನೀಡಿದ ಹೇಳಿಕೆಯ ಬಳಿಕ ಈ ಎಲ್ಲಾ ಪ್ರಹಸನ ನಡೆದಿದೆ. ತಮ್ಮ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಲಂಚ, ಭ್ರಷ್ಟಾಚಾರದ ಆರೋಪವನ್ನು ಪಾಟೀಲ್ ಮಾಡುತ್ತಿದ್ದಂತೆ, ಇನ್ನೊಂದೆಡೆ ಕಾಗವಾಡ ಶಾಸಕ ರಾಜು ಕಾಗೆ, ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂಬ ತಮ್ಮ ಕೊರಗನ್ನು ಮುಂದಿಟ್ಟರು. ಜೊತೆಗೆ ಪಾಟೀಲ್ ಹೇಳಿಕೆಗೆ ಬೆಂಬಲವನ್ನೂ ನೀಡಿದ್ದರು. ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಹಾಗೂ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡಾ ಬೆಂಬಲ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ನಡೆಯುತ್ತಿರುವಾಗಲೇ ಹೈಕಮಾಂಡ್ ಕರೆಗೆ ಓಗೊಟ್ಟು ಸಿಎಂ ದೆಹಲಿಗೆ ಪ್ರಯಾಣಿಸಿದ್ದರು.
ಹೈಕಮಾಂಡ್‌ನಲ್ಲಿ ಏನು ಚರ್ಚೆ ನಡೆದಿದೆ ಎಂಬುದು ಬಹಿರಂಗವಾಗಿಲ್ಲ. ಆದರೆ ದೆಹಲಿಯಿಂದ ಬೆಂಗಳೂರಿಗೆ ತಲುಪಿದ ಕೂಡಲೇ ಸಿಎಂ, ಬಿ.ಆರ್. ಪಾಟೀಲ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಶಾಸಕ ರಾಜು ಕಾಗೆ ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ. ಭೇಟಿ ವೇಳೆ ಈ ರೀತಿ ಬಹಿರಂಗ ಹೇಳಿಕೆ ನೀಡದಂತೆ, ಏನೇ ಆರೋಪಗಳಿದ್ದರೂ ಮೊದಲು ತಮ್ಮೊಳಗೆ ಮಾತನಾಡಿಕೊಳ್ಳುವಂತೆ, ಚರ್ಚಿಸುವಂತೆ ಸಿಎಂ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಇವೆಲ್ಲವುದರ ನಡುವೆ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಕೆ ಎನ್ ರಾಜಣ್ಣ ಅವರು ನೀಡಿದ ಹೇಳಿಕೆ ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಸಿಎಂ ಬದಲಾವಣೆಯಾಗುತ್ತಾ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಈಗಾಗಲೇ ಎರಡು ವರ್ಷ ಕಳೆದಿದ್ದು, ನವೆಂಬರ್ ವೇಳೆಗೆ ಎರಡೂವರೆ ವರ್ಷವಾಗಲಿದೆ. ವರ್ಷ ಕಳೆಯುತ್ತಿದ್ದಂತೆ ಸಂಪುಟ ವಿಸ್ತರಣೆಯ ಕೂಗು ಕೇಳಿಬಂದಿತ್ತು. ಮೇ ತಿಂಗಳಲ್ಲೂ ಹಲವು ವದಂತಿಗಳು ಹರಿದಾಡಿತ್ತು. ವಿಪಕ್ಷ ಬಿಜೆಪಿಯಂತು ಮನಸ್ಸು ಬಂದಾಗಲೆಲ್ಲಾ ಸಿಎಂ ಬದಲಾಗುತ್ತಾರೆ ಎಂಬ ಸುದ್ದಿ ಹರಡುತ್ತಿತ್ತು. ಆದರೆ ಇದೀಗ ಕಾಂಗ್ರೆಸ್ ನಾಯಕರ ಹೇಳಿಕೆಯೇ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಹುಟ್ಟುವಂತೆ ಮಾಡಿದೆ.
ಇದನ್ನು ಓದಿದ್ದೀರಾ? ಬಿಜೆಪಿಯವರ ಭ್ರಷ್ಟಾಚಾರಕ್ಕೆ ಜನರಿಂದ ಸರಿಯಾದ ಪಾಠ: ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಸಿಎಂ ಆಗಿ 2.5 ವರ್ಷ ನವೆಂಬರ್‌ನಲ್ಲಿ ಆಗಲಿದೆ. ಆದ್ದರಿಂದ ಈಗ ಬದಲಾವಣೆ ನಡೆಯಬಹುದು ಎಂಬ ಸುದ್ದಿಗಳಿವೆ. ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ಹರಿದಾಡಿದ ಪ್ರತಿ ಬಾರಿಯೂ ಹೈಕಮಾಂಡ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿಎಂ ಬದಲಾಗಲ್ಲ ಎಂದೂ ಹೇಳಿಲ್ಲ, ಬದಲಾಗುತ್ತಾರೆ ಎಂಬುದನ್ನು ತಿಳಿಸಿಲ್ಲ. ಐದು ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ. ಈ ಮೌನಕ್ಕೂ ಇತ್ತೀಚಿನ ಸಿಎಂ ದೆಹಲಿ ಭೇಟಿಗೂ, ಸಿದ್ದರಾಮಯ್ಯ ಆಪ್ತ ರಾಜಣ್ಣ ಹೇಳಿಕೆಗೂ ಇರುವ ಚುಕ್ಕಿಗಳಿಗೆ ಗೆರೆ ಎಳೆದು ಒಂದಕ್ಕೊಂದು ಜೋಡಿಸಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷಗಾದಿ ಕಳೆದುಕೊಳ್ಳುತ್ತಾರಾ ಡಿಕೆಶಿ?
ಸಿಎಂ ಬದಲಾವಣೆ ಮಾತ್ರವಲ್ಲ ಡಿಕೆಶಿ ಕೆಪಿಸಿಸಿ ಅಧ್ಯಕ್ಷಗಾದಿಯನ್ನು ಕಳೆದುಕೊಳ್ಳುವ ಬಗ್ಗೆಯೂ ಚರ್ಚೆ ಶುರುವಾಗಿದೆ. ಡಿಕೆಶಿ ಈ ಸ್ಥಾನ ಪಡೆದು ಐದು ವರ್ಷಗಳಾಗುತ್ತಾ ಬಂದಿದೆ. ಹಾಗಾಗಿ ಇದೀಗ ಕಾಂಗ್ರೆಸ್‌ನಲ್ಲೂ ನಾಯಕತ್ವ ಬದಲಾವಣೆಯ ಸದ್ದು ಎದ್ದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಂದಾಗ ಸಚಿವ ಸತೀಶ್ ಜಾರಕಿಹೊಳಿ ಮತ್ತು ಈಶ್ವರ್ ಖಂಡ್ರೆ ಹೆಸರು ಪದೇ ಪದೇ ಕೇಳಿಬರುತ್ತಿದೆ. ಈ ಬಗ್ಗೆಯೂ ಸಿಎಂ ಭೇಟಿ ವೇಳೆ ಚರ್ಚೆ ನಡೆದಿದೆ ಎನ್ನಲಾಗಿದೆ.
2023ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಸರ್ಕಾರ ರಚನೆಯಾದಾಗಿನಿಂದ ಡಿಕೆಶಿಯನ್ನು ನಾಯಕತ್ವದಿಂದ ಇಳಿಸಿ ಬೇರೊಬ್ಬರ ಕೈಗೆ ಅಧಿಕಾರ ಹಸ್ತಾಂತರ ನಡೆಯಲಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ಕೆಪಿಸಿಸಿ ಅಧ್ಯಕ್ಷಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ ಪಟ್ಟವನ್ನೂ ಪಡೆದರು. ಆದರೆ ಇದೀಗ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಸಮೀಪಿಸುತ್ತಿರುವ ಕಾರಣ ಡಿಕೆಶಿ ಅನಿವಾರ್ಯವಾಗಿ ನಾಯಕತ್ವವನ್ನು ಬಿಟ್ಟುಕೊಡಬೇಕಾಗಬಹುದು.
ಸಚಿವ ಸಂಪುಟ ವಿಸ್ತರಣೆ?
ಇವೆಲ್ಲ ಬದಲಾವಣೆಗೂ ಮುಖ್ಯವಾಗಿ ಸಚಿವ ಸಂಪುಟ ವಿಸ್ತರಣೆ ಹೆಚ್ಚು ಸುದ್ದಿಯಾಗುತ್ತಿದೆ. ಸಂಪುಟ ವಿಸ್ತರಣೆ ವೇಳೆ ಸಿಎಂ ಬದಲಾವಣೆಯೂ ನಡೆಯುತ್ತಾ ಅಥವಾ ಬರೀ ಸಂಪುಟ ವಿಸ್ತರಣೆಯಾಗುತ್ತಾ ಎಂಬುದು ಖಚಿತವಿಲ್ಲ. ನೈಜವಾಗಿ ಸಂಪುಟ ವಿಸ್ತರಣೆಯೂ ಅಧಿಕೃತವಾಗಿಲ್ಲ. ಆದರೆ ಕೆ ಎನ್ ರಾಜಣ್ಣ ಅವರ ‘ಸೆಪ್ಟೆಂಬರ್ ಕ್ರಾಂತಿ’ ಹೇಳಿಕೆ ಮತ್ತೆ ಸಂಪುಟ ವಿಸ್ತರಣೆಯತ್ತ ಚರ್ಚೆಯನ್ನು ತಿರುಗಿಸಿದೆ.
ಅಷ್ಟಕ್ಕೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಎರಡು ವರ್ಷ ತುಂಬುತ್ತಿದ್ದಂತೆ ಸಂಪುಟ ವಿಸ್ತರಣೆ, ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆದಿತ್ತು. ಹಲವು ಮಂದಿ ತಮ್ಮ ಆಕಾಂಕ್ಷೆಯನ್ನು ಹೊರಹಾಕಿದ್ದರು, ಸಚಿವ ಸ್ಥಾನದ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಸುದ್ದಿಗಳ ಸದ್ದು ಒಮ್ಮೆ ತಾರಕಕ್ಕೆ ಏರಿತ್ತು. ಯಾವುದಾವುದೋ ಕಾರಣಕ್ಕೆ ಹಿನ್ನೆಲೆಗೆ ಸರಿದಿತ್ತು. ಈಗ ಸಂಪುಟ ವಿಸ್ತರಣೆ ಎಂಬ ಸುದ್ದಿಯನ್ನು ಕೆ ಎನ್ ರಾಜಣ್ಣ ಎತ್ತಿದಾಗ, ಮತ್ತೆ ಎಳೆದು ಮುನ್ನೆಲೆಗೆ ತಂದು ನಿಲ್ಲಿಸಿದೆ.
ಬೇರೆ ಯಾವುದೇ ಸಚಿವರು ಬದಲಾವಣೆ ಕುರಿತು ಹೇಳಿಕೆ ನೀಡಿದ್ದರೆ ಇಷ್ಟು ಚರ್ಚೆಯಾಗುತ್ತಿತ್ತೋ ಇಲ್ಲವೋ ತಿಳಿಯದು. ಆದರೆ ಜಾರಕಿಹೊಳಿ ಮತ್ತು ರಾಜಣ್ಣ ಸಿಎಂ ಆಪ್ತರಾಗಿರುವ ಕಾರಣ ಅವರಿಬ್ಬರ ಹೇಳಿಕೆ ಅತಿ ಮಹತ್ವ ಪಡೆದಿದೆ. ಇಬ್ಬರೂ ಬೇರೆ ಬೇರೆ ತಿಂಗಳುಗಳ ಉಲ್ಲೇಖ ಮಾಡಿದ್ದರೂ ಸೆಪ್ಟೆಂಬರ್ ಕ್ರಾಂತಿ ಅಥವಾ ನವೆಂಬರ್ ಕ್ರಾಂತಿಯ ಕುತೂಹಲ ಹೆಚ್ಚಾಗಿದೆ. ಇವೆಲ್ಲದಕ್ಕೆ ತೆರೆ ಎಳೆಯಬೇಕಾಗಿದ್ದು ಕಾಂಗ್ರೆಸ್ ಹೈಕಮಾಂಡ್. ಸದ್ಯ ಚಿತ್ತ ಹೈಕಮಾಂಡ್‌ನತ್ತ ನೆಟ್ಟಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.