ತನ್ನ ಇಬ್ಬರು ಅಪ್ರಾಪ್ತ ಮಕ್ಕಳ ಮೇಲೆ ತಂದೆಯೇ ಐದು ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವ ಅಮಾನುಷ, ಪೈಶಾಚಿಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ, ಬಾಲಕಿಯರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಬಾಲಕಿಯರನ್ನು ಅವರ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಕ್ಕಳು ಹೊಟ್ಟೆನೋವು ಮತ್ತು ಮಾನಸಿಕವಾಗಿ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಬಾಲಕಿಯರನ್ನು ವೈದ್ಯರು ವಿಚಾರಿಸಿದಾಗ, ಬಾಲಕಿಯರು ತಮ್ಮ ಮೇಲೆ ಕಾಮುಕ ತಂದೆ ಎಸಗಿದ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
ದೌರ್ಜನ್ಯಗಳ ಬಗ್ಗೆ ತಿಳಿದ ತಾಯಿ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯರು ಮತ್ತು ಅವರ ತಾಯಿಯ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.
“ಆರೋಪಿ ತಂದೆಯು ತನ್ನ ಅಪ್ರಾಪ್ತ ಮಕ್ಕಳ ಮೇಲೆಯೇ ಐದು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಅಮಿತ್ ಕುಮಾರ್ ತಿಳಿಸಿದ್ದಾರೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.