ಬಿಕ್ಕೇಗುಡ್ಡ ಕುಡಿಯುವ ನೀರಿನ ಯೋಜನೆ ಶೇಕಡಾ 80 ರಷ್ಟು ಕೆಲಸ ನಡೆದಿದ್ದು ಭೂಮಿ ವಶಕ್ಕೆ ಹಾಗೂ ಪರಿಹಾರ ಒದಗಿಸುವಲ್ಲಿ ಕೆಲ ಸಮಸ್ಯೆ ಕಂಡು ಎಲ್ಲವೂ ಬಗೆಹರಿದಿದೆ. ಗುತ್ತಿಗೆದಾರರಿಗೆ ಹೆಚ್ಚುವರಿ ಎರಡು ಕೋಟಿ ಬಿಡುಗಡೆ ಮಾಡಿ ಕೆಲಸ ನಡೆದಿದೆ. ವಿಶೇಷ ಪೈಪ್ ಗಳು ಹೈದರಾಬಾದ್ ನಿಂದ ತಂದು ಕೆಲಸ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಭರವಸೆ ನೀಡಿದರು.
ತಾಲ್ಲೂಕಿನ ಎಂ.ಎಚ್.ಪಟ್ಟಣ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 7 ಕೋಟಿ ಅನುದಾನದ ಮಣ್ಣಮ್ಮದೇವಿ ದೇವಸ್ಥಾನದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಹಾಗಲವಾಡಿ ಕೆರೆಗೆ ನೀರು ಹರಿಸುವ ಕಾಮಗಾರಿ ಸಹ ಅಂತಿಮ ಸ್ವರೂಪದಲ್ಲಿದೆ. ಇಬ್ಬರು ರೈತರ ಸಮಸ್ಯೆಯನ್ನು ಸ್ಥಳಕ್ಕೆ ತೆರಳಿ ಬಗೆಹರಿಸಿ ಈ ವರ್ಷದಲ್ಲಿ ಹಾಗಲವಾಡಿ ಕೆರೆಗೆ ನೀರು ಹರಿಸಲಾಗುವುದು. ಒಟ್ಟಾರೆ ಪ್ರಮುಖ ಮೂರು ನೀರಾವರಿ ಯೋಜನೆ ಈ ವರ್ಷದಲ್ಲಿ ಪೂರ್ಣಗೊಂಡು ನೀರು ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೇಮಾವತಿ ಲಿಂಕ್ ಕೆನಾಲ್ ವಿರೋಧದ ಹೋರಾಟಕ್ಕೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ತಾರ್ಕಿಕ ಅಂತ್ಯ ಕಾಣಿಸಲಿದ್ದಾರೆ. ನಾನು ಸಹ ಇಬ್ಬರ ಬಳಿ ಚರ್ಚೆ ನಡೆಸಿ ಮುಖ್ಯ ನಾಲೆ ಅಗಲೀಕರಣ ಮಾಡಿ ಕುಣಿಗಲ್ ಕೆರೆಗೆ ನೀರು ಹರಿಸಿಕೊಳ್ಳಲು ಪ್ರಸ್ತಾಪ ಮಾಡಿದ್ದೇನೆ ಎಂದ ಅವರು ಸಂಸದರು ನನ್ನ ಜೊತೆ ಎರಡು ಬಾರಿ ಮಾತನಾಡಿದ್ದಾರೆ. ಇದೇ ತಿಂಗಳ 30 ರ ಸಭೆ ಮುಂದೂಡಲು ತಿಳಿಸಿದ್ದರು. ಜುಲೈ 4 ರಂದು ಸಭೆ ಆಯೋಜನೆಗೆ ಹೇಳಿದ್ದರು. ಆದರೆ ನಾನು ಸಹ ಪ್ರವಾಸ ತೆರಳುವ ಕಾರ್ಯಕ್ರಮ ಇದೆ. ಒಟ್ಟಾರೆ ಸಭೆ ನಡೆಸಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸುತ್ತಾರೆ ಎಂದರು.
ಕಳೆದ ಐದು ದಿನದ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೇಮಾವತಿ ಹೋರಾಟ ವಿಚಾರ ಪ್ರಸ್ತಾಪಿಸಿದ್ದೇನೆ. ಉಪ ಮುಖ್ಯಮಂತ್ರಿಗಳಿಗೆ ಇಲ್ಲಿನ ವಾಸ್ತವ ಚಿತ್ರಣ ತಾಲ್ಲೂಕಿಗೆ ಬಂದಾಗ ವಿವರಿಸಿದ್ದೇನೆ. ಒಮ್ಮತದ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದ ಅವರು ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ. ನಾನು ಪಕ್ಷದ ಚೌಕಟ್ಟಿನಲ್ಲಿ ಅಷ್ಟೇ ಮಾತನಾಡುತ್ತೇನೆ. ಮಾಧ್ಯಮ ಜೊತೆ ಚರ್ಚಿಸುವ ಅಗತ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಮಾತನಾಡುವ ಮಟ್ಟಕ್ಕೆ ನಾನಿಲ್ಲ. ಪಕ್ಷ ಹೇಳಿದಷ್ಟೇ ಕೆಲಸ ಮಾಡುತ್ತೇನೆ ಅಷ್ಟೇ ಎಂದ ಅವರು ತಾಲ್ಲೂಕಿನಲ್ಲಿ ಅಭಿವೃದ್ದಿ ಕೆಲಸ ಈಗಾಗಲೇ 200 ಕೋಟಿ ಚಾಲನೆಯಲ್ಲಿದೆ. ಇನ್ನೂ ಅನೇಕ ಕೆಲಸಗಳ ಪೂಜೆ ಕಾರ್ಯ ನಿರಂತರ ನಡೆಯಲಿದೆ. ಕೆಲಸ ಮಾಡಿಲ್ಲ ಎನ್ನುವವರು ಇವೆಲ್ಲವನ್ನೂ ನೋಡಬೇಕು ಎಂದರು.
ಈ ಸಂದರ್ಭದಲ್ಲಿ ಬಗರ್ ಹುಕುಂ ಸಮಿತಿ ಸದಸ್ಯ ನರಸಿಂಹಯ್ಯ, ಗ್ರಾಪಂ ಅಧ್ಯಕ್ಷ ಯೋಗೀಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ನಾಗೇಶ್, ರಾಮಕ್ಕ, ಬೋರಯ್ಯ, ಹನುಮಕ್ಕ, ಅನಿತಾ, ಗೌಡಣ್ಣ, ನೇಮರಾಜ್, ಲೋಕೋಪಯೋಗಿ ಇಲಾಖೆ ಎಇಇ ಯೋಗೀಶ್, ಗುತ್ತಿಗೆದಾರ ಅಶೋಕ್, ಪಿಡಿಓ ಶೇಖರ್ ಇತರರು ಇದ್ದರು.