ಇಡೀ ಜೀವಸಂಕುಲವನ್ನೇ ನಾಶ ಮಾಡುವಂತಹ ಯುದ್ಧಗಳು ಕೊನೆಗಾಣಬೇಕು, ಜಾಗತಿಕ ಶಾಂತಿ ನೆಲೆಸಬೇಕು ಎಂಬ ಆಶಯವನ್ನು ಪ್ರತಿಪಾದಿಸಲು ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಎಡ ಪಕ್ಷಗಳ ನೇತೃತ್ವದಲ್ಲಿ ಯುದ್ಧ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್), ಎಸ್ ಯು ಸಿ ಐ (ಸಿ), ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಪಕ್ಷಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಜಗತ್ತಿನಲ್ಲಿ ಸರ್ವಾಧಿಕಾರಿ ಧೋರಣೆ ಮೆರೆಯುತ್ತಿರುವ ಕೆಲವು ಬಲಾಢ್ಯ ಬಂಡವಾಳಶಾಹಿ ದೇಶಗಳು ದುರ್ಬಲ ರಾಷ್ಟ್ರಗಳ ಮೇಲೆ ಅಕ್ರಮಣ ನಡೆಸಿ ತಮ್ಮ ವ್ಯಾಪಾರ ಮತ್ತು ವಾಣಿಜ್ಯ ವಹಿವಾಟಿನ ಹಿತಾಸಕ್ತಿಗಾಗಿ ಅಣ್ವಸ್ತ್ರಗಳನ್ನು ಬಳಸಿ ಸಾವು ನೋವುಗಳನ್ನು ಸೃಷ್ಟಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಪ್ಯಾಲೆಸ್ತೀನ್ ಜನರ ಮೇಲೆ ತೀವ್ರ ದಾಳಿ ನಡೆಸಿ ಮುಗ್ಧ ಅಮಾಯಕ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯ ಜನಸಮೂಹವನ್ನು ಹತ್ಯೆಗೈದಿರುವ ಇಸ್ರೇಲ್ ಇದೀಗ ಇರಾನ್ ಮೇಲೆ ಯುದ್ಧ ಹೂಡಿ ಅಪಾರ ಪ್ರಮಾಣದಲ್ಲಿ ಸಾವು ನೋವುಂಟು ಮಾಡಿದೆ. ಇಂತಹ ಅಕ್ರಮಣಕಾರಿ ಯುದ್ಧಕ್ಕೆ ಅಮೆರಿಕವು ಇಸ್ರೇಲ್ ನಂತಹ ಯುದ್ಧಕೋರ ರಾಷ್ಟ್ರಗಳಿಗೆ ಸರ್ವ ರೀತಿಯ ಸಹಕಾರ ಬೆಂಬಲ ನೀಡುತ್ತಿರುವುದು ಅತ್ಯಂತ ಅಮಾನವೀಯ ನಿಲುವಾಗಿದೆ. ಇಂತಹ ಅಕ್ರಮ ಯುದ್ಧಗಳಿಂದ ಕೇವಲ ಒಂದೆರಡು ದೇಶಗಳಿಗೆ ಮಾತ್ರ ಕಷ್ಟ ನಷ್ಟ ಉಂಟು ಮಾಡದೆ, ಇಡೀ ಜಗತ್ತಿನ ಬೇರೆ ಬೇರೆ ದೇಶಗಳ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕತೆ, ಜನಜೀವನ ಹಾಗೂ ಪರಿಸರದ ಮೇಲೆ ಗಂಭೀರ ದುಷ್ಪರಿಣಾಮಗಳು ಬೀರುತ್ತಿವೆ.
ಯುದ್ಧಗಳನ್ನು ತಡೆಗಟ್ಟಲು ಹಾಗೂ ಜಾಗತಿಕ ಶಾಂತಿ ಸ್ಥಾಪಿಸುವ ಸದುದ್ದೇಶದಿಂದ ಸ್ಥಾಪಿತವಾಗಿರುವ ವಿಶ್ವಸಂಸ್ಥೆಯು ಸಹ ಇತ್ತೀಚಿನ ದಿನಮಾನಗಳಲ್ಲಿ ಯುದ್ಧಗಳನ್ನು ತಡೆಯಲು ವಿಫಲವಾಗುತ್ತಿದೆ. ಕಾರಣ ವಿಶ್ವಸಂಸ್ಥೆಯಲ್ಲಿ ಸದಸ್ಯರಾಗಿರುವ ಕೆಲವು ಸರ್ವಾಧಿಕಾರಿ ಧೋರಣೆಯ ಬಲಾಢ್ಯ ರಾಷ್ಟ್ರಗಳ ಯುದ್ಧಕೋರ ನೀತಿಯು ವಿಶ್ವಸಂಸ್ಥೆಯನ್ನು ಅಸಹಾಯಕತೆಗೆ ತಳ್ಳುತ್ತಿದೆ.
ಭಾರತವು ಸಹ ಎಂದೆಂದಿಗೂ ಯುದ್ಧ ವಿರೋಧಿ ನಿಲುವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಬಲಾಢ್ಯ ರಾಷ್ಟ್ರಗಳ ಪ್ರಭಾವಕ್ಕೊಳಗಾಗದೆ ಯುದ್ಧಗಳನ್ನು ತಡೆಯುವ ಮೂಲಕ ವಿಶ್ವ ಶಾಂತಿಗಾಗಿ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಎಡಪಕ್ಷಗಳು ಭಾರತ ಸರ್ಕಾರವನ್ನು ಆಗ್ರಹಿಸುತ್ತವೆ. ಇಸ್ರೇಲ್‍ನ ದಮನಕಾರಿ ನಿಲುವನ್ನು ಮತ್ತು ಯುದ್ಧವನ್ನು ಪ್ರಚೋದಿಸುತ್ತಿರುವ ಅಮೆರಿಕದ ಸರ್ವಾಧಿಕಾರಿ ಧೋರಣೆಯನ್ನು ಸಹ ಬಲವಾಗಿ ಖಂಡಿಸಬೇಕೆಂದು ಭಾರತದ ಎಡ ಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಪ್ರತಿಭಟನೆಯನ್ನು ಉದ್ದೇಶಿಸಿ CPI ರಾಜ್ಯ ಸಹ ಕಾರ್ಯದರ್ಶಿ ಕಾಂ.ಅಮ್ಜದ್, CPIM ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಮಹಂತೇಶ್, CPIML ಮುಖಂಡರಾದ ಅತ್ರಿಕಾ, SUCI(C) ರಾಜ್ಯ ಮುಖಂಡರಾದ ರಾಜಶೇಖರರವರು ಮಾತನಾಡಿದರು. ಪ್ರತಿಭಟನೆಯಲ್ಲಿ ಎಡ ಪಕ್ಷಗಳ ಹಲವಾರು ಜಿಲ್ಲಾ ಮತ್ತು ರಾಜ್ಯ ಮುಖಂಡರು ಭಾಗವಹಿಸಿದ್ದರು.