ಮಂಗಳೂರು ನಗರದ ಕುಡುಪು ಎಂಬಲ್ಲಿ 2025ರ ಏಪ್ರಿಲ್ 27ರಂದು ನಡೆದಿದ್ದ ಕೇರಳದ ಮುಸ್ಲಿಂ ಯುವಕ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರ ತಂಡವು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಸತ್ಯಶೋಧನಾ ವರದಿಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.
ಸತ್ಯಶೋಧನಾ ಸಮಿತಿಯು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಂಪು ಹತ್ಯೆಗೊಳಗಾದ ಅಶ್ರಫ್ ಅವರ ಸಹೋದರ ಅಬ್ದುಲ್ ಜಬ್ಬಾರ್ ಕೂಡ ಭಾಗವಹಿಸಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “2025ರ ಏಪ್ರಿಲ್ 27ರಂದು ನಡೆದಿದ್ದ ನನ್ನ ಸಹೋದರನನ್ನು ಗುಂಪು ಹತ್ಯೆ ನಡೆಸಿ ಕೊಲ್ಲಲಾಗಿತ್ತಾದರೂ, ನಮ್ಮ ಕುಟುಂಬಕ್ಕೆ ಮಾಹಿತಿ ಸಿಕ್ಕಿದ್ದು ಏಪ್ರಿಲ್ 29ರಂದು. ಮಂಗಳೂರಿನ ಗುಜರಿ ವ್ಯಾಪಾರಿಯಾಗಿರುವ ಸಯೀದ್ ಎನ್ನುವವರ ಅಂಗಡಿಗೆ ತಾನು ಹೆಕ್ಕುತ್ತಿದ್ದ ಎಲ್ಲ ಗುಜರಿಗಳನ್ನು ನನ್ನ ಸಹೋದರ ನೀಡುತ್ತಿದ್ದ. ಪೊಲೀಸರು ವಿವರ ಕಲೆ ಹಾಕುತ್ತಿದ್ದ ವೇಳೆ ಈ ಸಂಗತಿ ಅವರಿಗೆ ಗೊತ್ತಾಯಿತು. ಸಯೀದ್ ಅವರ ಮೂಲಕ ಕೇರಳದಲ್ಲಿರುವ ನಮ್ಮ ಕುಟುಂಬದ ಸದಸ್ಯರೋರ್ವರಿಗೆ ವಿಚಾರ ಗೊತ್ತಾಯಿತು” ಎಂದು ವಿವರಿಸಿದರು.
“ಅಶ್ರಫ್ ಕೊಲೆಯಾದ ವಿಚಾರವನ್ನು ಪೊಲೀಸರ ಮೂಲಕ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಷಡ್ಯಂತ್ರ ನಡೆದಿತ್ತು. ಮಂಗಳೂರಿನ ನೂತನ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಅವರು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂಬ ಹೆಸರು ಇರುವುದರಿಂದ ನಮ್ಮ ಸಹೋದರನಿಗೆ ನ್ಯಾಯ ಸಿಗುವ ನಂಬಿಕೆ ಇದೆ” ಎಂದು ಜಬ್ಬಾರ್ ತಿಳಿಸಿದರು.

” ಗುಂಪು ಹತ್ಯೆಯ ಬಗ್ಗೆ ಕರ್ನಾಟಕದ ಕೆಲವು ಮಾನವ ಹಕ್ಕು ಸಂಘಟನೆಗಳು ಸತ್ಯಶೋಧನಾ ವರದಿಯನ್ನು ನಡೆಸಿದೆ. ಅದರಲ್ಲಿ ಕೂಡ ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ನಮಗೆ ಹಲವು ಮಾಹಿತಿ ಸಿಕ್ಕಿದೆ. ಅಶ್ರಫ್ ಗುಂಪು ಹತ್ಯೆ ಬಗ್ಗೆ ಕೇರಳ ಸರ್ಕಾರ ಕೂಡ ಕರ್ನಾಟಕ ಸರ್ಕಾರಕ್ಕೆ ಹೆಚ್ಚು ಒತ್ತಡ ಹಾಕಿಲ್ಲ ಎಂಬುದು ಕೂಡ ನಮಗಿರುವ ಮಾಹಿತಿ. ಉತ್ತರ ಪ್ರದೇಶದಲ್ಲಿ ಗುಂಪು ಹತ್ಯೆಯಾದ ಅಖ್ಲಾಕ್ ವಿಚಾರಗಳನ್ನೆಲ್ಲ ಪ್ರಸ್ತಾಪಿಸಿ ಕೇರಳದಲ್ಲಿ ಪಿಣರಾಯಿ ಸರ್ಕಾರ ಅಧಿಕಾರಕ್ಕೆ ಬಂದಿತ್ತಾದರೂ, ಮಲಯಾಳಿಯಾಗಿರುವ ಅಶ್ರಫ್ ಗುಂಪು ಹತ್ಯೆಯ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರಿಲ್ಲ ಎಂಬುದು ವಾಸ್ತವ” ಎಂದು ಬೇಸರಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು ಗುಂಪು ಹತ್ಯೆ | ಸತ್ಯಶೋಧನಾ ವರದಿ ಬಿಡುಗಡೆ; 2 ತಿಂಗಳಾದರೂ ಸರ್ಕಾರಿ ವಕೀಲರನ್ನೇ ನೇಮಿಸದ ರಾಜ್ಯ ಸರ್ಕಾರ!
“ಇದೇ ಕಟ್ಟಕಡೆಯ ಗುಂಪು ಹತ್ಯೆಯಾಗಬೇಕು. ಇನ್ನು ಯಾವತ್ತೂ ಯಾರನ್ನೂ ಥಳಿಸಿ ಕೊಲ್ಲಬಾರದು. ಅಶ್ರಫ್ ಅವರನ್ನು ಥಳಿಸಿ ಕೊಂದವರೆಲ್ಲರೂ ತಮ್ಮ ಅಪರಾಧಕ್ಕೆ ಶಿಕ್ಷೆ ಅನುಭವಿಸಬೇಕು. ಜಾತಿ-ಧರ್ಮ ನೋಡಿ ಕೊಲ್ಲುವುದು ದೇಶದ್ರೋಹ. ಸಹೋದರನಿಗೆ ನ್ಯಾಯ ಸಿಗಬೇಕೆಂಬುದೇ ನಮ್ಮ ಆಗ್ರಹವಾಗಿದೆ. ಅಶ್ರಫ್‌ನನ್ನು ಕೊಂದ ಬಳಿಕವೂ ಕ್ರಿಕೆಟ್ ಆಡಿದ್ದ ಮನೋಭಾವದ ವಿರುದ್ಧವಾಗಿದೆ ನಮ್ಮ ಹೋರಾಟ. ಸಹೋದರನಿಗೆ ನ್ಯಾಯ ಸಿಗಲಿದೆ ಎಂಬುದು ನಮಗೆ ನಂಬಿಕೆ ಇದೆ” ಎಂದು ಗುಂಪು ಹತ್ಯೆಗೊಳಗಾದ ಅಶ್ರಫ್ ಅವರ ಸಹೋದರ ಅಬ್ದುಲ್ ಜಬ್ಬಾರ್ ತಿಳಿಸಿದರು.
