ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ವೇಳೆ ಗರ್ಭಿಯ ಹೊಟ್ಟೆಗೆ ವೈದ್ಯರು ವೈದ್ಯಕೀಯ ಜೆಲ್ ಬದಲಾಗಿ ಹೈಡ್ರೋಕ್ಲೋರಿಕ್ ಆ್ಯಸಿಡ್ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಭೋಕರ್ದನ್‌ನಲ್ಲಿ ನಡೆದಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೋಕರ್ದನ್‌ನ ಸರ್ಕಾರಿ ಗ್ರಾಮೀಣ ಆಸ್ಪತ್ರೆಯಲ್ಲಿ ಶುಕ್ರವಾರ ಘಟನೆ ನಡೆಸಿದೆ. ಘಟನೆಯಲ್ಲಿ ಮಹಿಳೆಗೆ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹೆರಿಗೆಗಾಗಿ ಗರ್ಭಿಣಿ ಶೀಲಾ ಭಲೇರಾವ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಹೆರಿಗೆ ಮಾಡಿಸಲು ಸಿದ್ಧತೆ ನಡೆಸುವಾಗ ನರ್ಸ್‌ವೊಬ್ಬರು ಹೆರಿಗೆ ಪ್ರಕ್ರಿಯೆಯಲ್ಲಿ ಬಳಸುವ ವೈದ್ಯಕೀಯ ಜೆಲ್ ಎಂದು ಭಾವಿಸಿ ಹೈಡ್ರೋಕ್ಲೋರಿಕ್ ಆ್ಯಸಿಡ್‌ಅನ್ನು ಗರ್ಭಿಣಿಯ ಹೊಟ್ಟೆಗೆ ಹಚ್ಚಿಸಿದ್ದಾರೆ. ಇದರಿಂದ, ಗರ್ಭಿಯ ಹೊಟ್ಟೆಯ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ನರ್ಸ್‌ಎಸಗಿದ ಗಂಭೀರದ ಲೋಪಗಳ ಹೊರತಾಗಿಯೂ ಶೀಲಾ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯಕರವಾಗಿದೆ. ಆದರೆ, ಶೀಲಾ ಅವರು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ನೈರ್ಮಲ್ಯ ಕಾರ್ಮಿಕರು ಕಣ್ತಪ್ಪಿನಿಂದ ಔಷಧಿ ಟ್ರೇನಲ್ಲಿ ಶುಚಿಗೊಳಿಸುವ ಉದ್ದೇಶಕ್ಕೆ ಬಳಸುವ ಆ್ಯಸಿಡ್‌ಅನ್ನು ಇರಿಸಿದ್ದರು. ಪರಿಣಾಮ, ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಸಿವಿಲ್ ಸರ್ಜನ್ ಡಾ. ಆರ್.ಎಸ್ ಪಾಟೀಲ್, “ಇದು ನಿರ್ಲಕ್ಷ್ಯದ ಗಂಭೀರ ಪ್ರಕರಣ. ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.