ಇಸ್ಲಾಮಿಕ್ ಸ್ಟೇಟ್(ಐಸಿಸ್)ನ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ಮತ್ತು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ(ಸಿಮಿ) ಮಾಜಿ ಪದಾಧಿಕಾರಿ ಸಕ್ವಿಬ್ ನಾಚನ್ ಶನಿವಾರ ಮಧ್ಯಾಹ್ನ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಆತನಿಗೆ 57 ವರ್ಷ ವಯಸ್ಸಾಗಿತ್ತು.
ದೆಹಲಿ ಮತ್ತು ಮಹಾರಾಷ್ಟ್ರದ ಪಡ್ಘಾ ಪ್ರದೇಶವನ್ನು ವ್ಯಾಪಿಸಿರುವ ಐಸಿಸ್ ಭಯೋತ್ಪಾದಕ ಘಟಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನಾಚನ್ ಬಂಧನ ಮಾಡಿತ್ತು. ನಾಚನ್ 2023ರಿಂದ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಆರೋಗ್ಯ ಹದಗೆಟ್ಟ ನಂತರ ಮಂಗಳವಾರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನು ಓದಿದ್ದೀರಾ? ಅಫ್ಘಾನಿಸ್ತಾನ | ಗುಂಡಿನ ದಾಳಿಗೆ 15 ನಾಗರಿಕರು ಬಲಿ, ಹೊಣೆ ಹೊತ್ತ ಐಸಿಸ್
ಆಸ್ಪತ್ರೆಗೆ ದಾಖಲಾದ ಸ್ವಲ್ಪ ಸಮಯದಲ್ಲೇ ನಾಚನ್‌ಗೆ ಮೆದುಳಿನ ರಕ್ತಸ್ರಾವ ಇರುವುದನ್ನು ವೈದ್ಯರು ದೃಢಪಡಿಸಿದ್ದರು. ಆತ ನಾಲ್ಕು ದಿನಗಳ ಕಾಲ ವೈದ್ಯಕೀಯ ವೀಕ್ಷಣೆಯಲ್ಲಿದ್ದು, ಶನಿವಾರ ಬೆಳಿಗ್ಗೆ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಮಧ್ಯಾಹ್ನ 12:10ಕ್ಕೆ ನಿಧನಗೊಂಡಿದ್ದಾನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಸಕ್ವಿಬ್ ಅಬ್ದುಲ್ ಹಮೀದ್ ನಾಚನ್ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಡ್ಘಾ ಪಟ್ಟಣದವನು. 1990ರ ದಶಕದ ಅಂತ್ಯ ಮತ್ತು 2000ರ ದಶಕದ ಆರಂಭದಲ್ಲಿ ನಿಷೇಧಿತ SIMIಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ. ಮುಂಬೈ ಸೆಂಟ್ರಲ್, ವಿಲೇ ಪಾರ್ಲೆ ಮತ್ತು ಮುಲುಂಡ್ ನಿಲ್ದಾಣದಲ್ಲಿ ನಡೆದ ಸ್ಫೋಟಗಳು ಸೇರಿದಂತೆ 2002 ಮತ್ತು 2003ರಲ್ಲಿ ಮುಂಬೈನಾದ್ಯಂತ ನಡೆದ ಸರಣಿ ಬಾಂಬ್ ಸ್ಫೋಟಗಳ ತನಿಖೆಯ ಸಮಯದಲ್ಲಿ ನಾಚನ್ ಹೆಸರು ಬೆಳಕಿಗೆ ಬಂದಿತ್ತು. ಈ ದಾಳಿಗಳಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
AK-56 ರೈಫಲ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದಡಿಯಲ್ಲಿ ಆತನನ್ನು ಅಂತಿಮವಾಗಿ ದೋಷಿ ಎಂದು ಘೋಷಿಸಲಾಗಿತ್ತು. ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿಲಾಗಿತ್ತು. 2017ರಲ್ಲಿ ಜೈಲು ಶಿಕ್ಷೆ ಪೂರ್ಣಗೊಳ್ಳುವುದಕ್ಕೂ ಐದು ತಿಂಗಳಿಗೂ ಮುನ್ನ ಉತ್ತಮ ನಡವಳಿಕೆ ಆಧಾರದಲ್ಲಿ ಬಿಡುಗಡೆಗೊಂಡಿದ್ದ.
2023ರಲ್ಲಿ ದೇಶದಲ್ಲಿ ಐಸಿಸ್ ಭಯೋತ್ಪಾದಕ ಸಂಪರ್ಕದ ಆರೋಪದಲ್ಲಿ ಎನ್‌ಐಎ ನಾಚನ್ ಬಂಧನ ಮಾಡಿತ್ತು. ದೆಹಲಿ-ಪಡ್ಘಾ ಐಸಿಸ್ ಭಯೋತ್ಪಾದನಾ ಪ್ರಕರಣದಲ್ಲಿ ಆತನನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.
