ಭದ್ರಾ ನಾಲೆಯನ್ನು ಸೀಳಿ ಭದ್ರಾ ಡ್ಯಾಂ ಸಮೀಪ ನೆಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸಿ ರೈತ ಒಕ್ಕೂಟ ಹಾಗೂ ದಾವಣಗೆರೆ ಜಿಲ್ಲಾ ರೈತ ಮೋರ್ಚಾ ಕರೆ ಕೊಟ್ಟಿದ್ದ ದಾವಣಗೆರೆ ಬಂದ್ ಭಾಗಶಃ ಮಾತ್ರ ಯಶಸ್ವಿಯಾಗಿದೆ. ದಾವಣಗೆರೆ ನಗರದ ಕೇಂದ್ರ ಭಾಗದಲ್ಲಿ ಅಲ್ಲಲ್ಲಿ ಮಾತ್ರ ಬಂದ್ ಆಗಿತ್ತು. ಜನಜೀವನ ಎಂದಿನಂತೆ ಇತ್ತು. ಆಟೋ, ವಾಹನಗಳು, ಬಸ್ ಸಂಚಾರ, ಹೊಟೇಲ್ ಸೇರಿದಂತೆ ಎಲ್ಲವೂ ಎಂದಿನಂತೆ ಸಹಜ ಸ್ಥಿತಿಯಲ್ಲಿ ಮುಂದುವರಿಯಿತು.

ಬಿಜೆಪಿ ಮುಖಂಡರು ಬೆಳಿಗ್ಗೆಯಿಂದಲೇ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಜನರು, ವರ್ತಕರು ಬೆಳಿಗ್ಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹನ್ನೆರಡು ಗಂಟೆಯ ನಂತರ ಸಹಜವಾಗಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು.
ರೈತರಿಗಾಗಿ ಬಂದ್ ಗೆ ಬೆಂಬಲ ನೀಡುವಂತೆ ವರ್ತಕರು, ಬಸ್, ಲಾರಿ ಮತ್ತು ಆಟೋ ಮಾಲೀಕರು ಹಾಗೂ ಚಾಲಕರು, ಹೋಟೆಲ್ ಮತ್ತು ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್, ಕೊಳೇನಹಳ್ಳಿ ಸತೀಶ್ ಸೇರಿದಂತೆ ಹಲವರು ಮನವಿ ಮಾಡಿದರು.

ವ್ಯಾಪಾರ ವಹಿವಾಟುಗಳು ನಗರದ ಕೇಂದ್ರ ಭಾಗದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಸ್ಥಗಿತಗೊಂಡಿದ್ದವು. ಆದರೆ ಜನಜೀವನಕ್ಕೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಮುಂದುವರೆದವು. ಇದರಿಂದಾಗಿ ಜಿಲ್ಲಾ ರೈತ ಒಕ್ಕೂಟ ಕರೆ ನೀಡಿದ ದಾವಣಗೆರೆ ನಗರ ಸಂಪೂರ್ಣ ಯಶಸ್ವಿಯಾಗಲಿಲ್ಲ. ಸ್ವಲ್ಪ ಮಟ್ಟಿಗೆ ಪ್ರತಿಕ್ರಿಯೆ ಮಾತ್ರ ಇತ್ತು. ಲೋಕಿಕೆರೆ ನಾಗರಾಜ್, ಬಿ. ಜಿ. ಅಜಯ್ ಕುಮಾರ್, ರೇಣುಕಾಚಾರ್ಯ ಮತ್ತು ಕಾರ್ಯಕರ್ತರು ಬೆಳ್ಳಂಬೆಳಿಗ್ಗೆಯೇ ಪ್ರಮುಖ ವೃತ್ತಗಳಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಖಾಸಗಿ ಬಸ್ ಗಳ ಚಾಲಕರು, ಆಟೋಚಾಲಕರಿಗೆ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಖಾಂತರ ನೀರು ಬಿಡಲು ಭದ್ರಾ ಬಲದಂಡೆ ನಾಲೆಗೆ ಪೈಪ್ ಲೈನ್ ಕಾಮಗಾರಿ ಮಾಡಲಾಗುತ್ತಿದೆ. ಬಿಜೆಪಿ ರೈತ ಮೋರ್ಚಾ ಹಾಗೂ ಜಿಲ್ಲಾ ರೈತ ಒಕ್ಕೂಟದ ವತಿಯಿಂದ ಯೋಚನೆ ಅವೈಜ್ಞಾನಿಕವಾಗಿದ್ದು ಇದರಿಂದ ದಾವಣಗೆರೆ ಭಾಗದ ರೈತರಿಗೆ ಅನ್ಯಾಯವಾಗಲಿದೆ. ಕೂಡಲೇ ಕಾಮಗಾರಿ ನಿಲ್ಲಿಸಿ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಬಂದ್ ಗೆ ಕರೆ ನೀಡಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸಿ ರಾಜಕೀಯ ಮಾಡುವುದು ಬೇಡ; ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ
ಯೋಜನೆ ವಿರೋಧಿಸಿ ದಾವಣಗೆರೆ ನಗರ ಬಂದ್ ಮಾಡಲಾಗಿತ್ತು. ಮುಂಬರುವ ದಿನಗಳಲ್ಲಿ ಭದ್ರಾ ಅಚ್ಚುಕಟ್ಟು ತಾಲೂಕುಗಳಲ್ಲಿ ಬಂದ್ ನಡೆಸುವ ಕುರಿತಂತೆ ಚರ್ಚೆ ನಡೆಸಲಾಗಿದೆ. ಬಂದ್ ವೇಳೆ ಯಾವುದೇ ರೀತಿಯಲ್ಲೂ ಸಾರ್ವಜನಿಕರಿಗೆ ತೊಂದರೆಯಾಗಲಿಲ್ಲ. ಸಂಪೂರ್ಣವಾಗಿ ಶಾಂತಿಯುತವಾಗಿ ನಡೆದಿದೆ.