ನಿಗದಿ ಪಡಿಸಿದ ದರಕ್ಕಿಂತ ಅಧಿಕ ದರ ವಸೂಲಿ ಮಾಡುತ್ತಿರುವ ಹಾಗೂ ಬಾಡಿಗೆಗೆ ತೆರಳಲು ನಿರಾಕರಿಸುವ ಆಟೊಗಳ ಪರ್ಮಿಟ್ ರದ್ದುಪಡಿಸಿ, ಸಂಬಂಧಪಟ್ಟ ಚಾಲಕರು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದಲ್ಲಿರುವ ಆಪ್ ಆಧಾರಿತ ಹಾಗೂ ಇತರೆ ಆಟೊ ಚಾಲಕರು ನಿಗದಿಗಿಂತ ಅಧಿಕ ದರಕ್ಕೆ ಬೇಡಿಕೆ ಇಡುವುದು, ಅಧಿಕ ಬಾಡಿಗೆ ನೀಡಲು ನಿರಾಕರಿಸಿದರೆ ಪ್ರಯಾಣ ರದ್ದುಗೊಳಿಸುವುದು ಹಾಗೂ ಅತಿ ಹೆಚ್ಚು ದರ ವಸೂಲಿ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಇಂತಹ ದೂರುಗಳಿಗೆ ತಕ್ಷಣ ಸ್ಪಂದಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.
ಬಾಡಿಗೆಗೆ ತೆರಳಲು ನಿರಾಕರಿಸುವ ಹಾಗೂ ಅಧಿಕ ಪ್ರಯಾಣ ದರಕ್ಕೆ ಬೇಡಿಕೆ ಇಡುವ ಆಟೋ ಚಾಲಕರ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಿದ್ದಾರೆ. ಆದಾಗ್ಯೂ, ಸಾರ್ವಜನಿಕರಿಂದ ದೂರುಗಳು ಬರುತ್ತಲೇ ಇವೆ. ಇತ್ತೀಚೆಗೆ ರ‍್ಯಾಪಿಡೋ ಆ್ಯಪ್‌ನಲ್ಲಿಆಟೊ ಬುಕ್ ಮಾಡಿದ ಪ್ರಯಾಣಿಕರಿಂದ ಪ್ರತಿ ಕಿ.ಮೀ ಗೆ 100.89 ರೂ., ಓಲಾ ಆ್ಯಪ್‌ನಲ್ಲಿ4 ಕಿ.ಮೀ ದೂರದ ಪ್ರಯಾಣಕ್ಕೆ 184.19 ರೂ. ಪಡೆಯಲಾಗಿದೆ. ಈ ರೀತಿಯ ಹಗಲು ದರೋಡೆ ಅಕ್ಷಮ್ಯ. ಇಂತಹ ಆಟೋಗಳ ಪರ್ಮಿಟ್ ರದ್ದುಗೊಳಿಸಿ ಚಾಲಕರು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?
ಬೆಂಗಳೂರಿನಲ್ಲಿ ಮೀಟರ್ ಹಾಕದೇ ದುಬಾರಿ ಹಣ ಕೇಳುತ್ತಿರುವ ಆಟೋ ಚಾಲಕರ ವಿರುದ್ಧ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. 2-3 ಕಿ.ಮೀ ದೂರದ ಹತ್ತಿರದ ಸ್ಥಳಗಳಿಗೂ ಆಟೋ ಚಾಲಕರು 200 300 ರೂಗಳನ್ನು ಕೇಳುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.
ಅಲ್ಲದೆ ಮೀಟರ್ ಇದ್ದರೂ ಮೀಟರ್ ಹಾಕದೇ ಬಾಯಿಗೆ ಬಂದ ಹಾಗೆ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇಂತಹ ದೂರುಗಳ ಹಿನ್ನಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.