ಗಡಿ ಭಾಗದಲ್ಲಿ ಕನ್ನಡ ಅಸ್ಮಿತೆಗಾಗಿ ಶ್ರಮಿಸಿದ ಪ್ರಭುರಾವ ಕಂಬಳಿವಾಲೆ ಮತ್ತು ಡಾ.ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ಸರ್ಕಾರದಿಂದ ರಚಿಸಬೇಕೆಂಬ ಉದ್ದೇಶಿತ ಟ್ರಸ್ಟ್ ನನೆಗುದಿಗೆ ಬಿದ್ದಿರುವುದು ಈ ಭಾಗದ ಕನ್ನಡಪರ ಹೋರಾಟಗಾರರು, ಸಾಹಿತಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕನ್ನಡ ನಾಡು-ನುಡಿಗಾಗಿ ಬದುಕಿನುದ್ದಕ್ಕೂ ಹೋರಾಡಿದ ಈ ಇಬ್ಬರು ಮಹನೀಯರ ಹೆಸರಿನಲ್ಲಿ ಟ್ರಸ್ಟ್ ರಚಿಸಿ, ಗಡಿ ಭಾಗದಲ್ಲಿ ಅವರ ಆಶಯದಂತೆ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ದಶಕಗಳ ಬೇಡಿಕೆ 2023ರಲ್ಲಿ ಮುನ್ನೆಲೆಗೆ ಬಂದಿತು. 2023ರ ನವೆಂಬರ್ 7ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ್ ರಚನೆಗೆ ನಿರ್ಣಯ ಕೈಗೊಳ್ಳಲಾಯಿತು.
ಬೀದರ್ ಜಿಲ್ಲಾಡಳಿತವು 2023ರ ಡಿಸೆಂಬರ್ 5ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಇಬ್ಬರ ಹೆಸರಿನಲ್ಲಿ ಟ್ರಸ್ಟ್ ರಚಿಸುವ ಸಂಬಂಧ ಪ್ರಸ್ತಾವ ಸಲ್ಲಿಸಿತ್ತು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿ ಒಂದುವರೆ ವರ್ಷ ಕಳೆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಲಿ, ಜಿಲ್ಲೆಯ ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಆಸಕ್ತಿ ತೋರದಿರುವುದು ವಿಪರ್ಯಾಸವೇ ಸರಿ.
ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ರಾಜ್ಯದ 20ಕ್ಕೂ ಹೆಚ್ಚಿನ ಸಾಧಕರ ಹೆಸರಿನಲ್ಲಿ ಸರ್ಕಾರ ಪ್ರತಿಷ್ಠಾನ, ಟ್ರಸ್ಟ್‌ಗಳು ರಚಿಸಿದೆ. ಆಯಾ ಜಿಲ್ಲೆಗಳಲ್ಲಿ ಸಾಧಕರ ನೆನಪಿನಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಕೋಲಾರದಲ್ಲಿ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಉಡುಪಿಯಲ್ಲಿ ಡಾ.ಶಿವರಾಮ ಕಾರಂತ ಪ್ರತಿಷ್ಠಾನ, ಹಾವೇರಿಯಲ್ಲಿ ಡಾ.ವಿ.ಕೃ.ಗೋಕಾಕ್ ಪ್ರತಿಷ್ಠಾನ, ಬೆಳಗಾವಿಯಲ್ಲಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹೀಗೆ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಷ್ಠಾನಗಳಿವೆ.
ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಧರಿನಾಡು ಬೀದರ್ ಜಿಲ್ಲೆಯಲ್ಲಿ ಯಾವುದೇ ಪ್ರತಿಷ್ಠಾನಗಳಿಲ್ಲ. ಕನ್ನಡ ಭಾಷೆ, ನೆಲ, ಸಂಸ್ಕೃತಿ ಉಳಿವಿಗಾಗಿ ಬದುಕು ಸವೆಸಿದ ಇಬ್ಬರು ಮಹನೀಯರ ಹೆಸರಿನಲ್ಲಿ ಟ್ರಸ್ಟ್ ರಚಿಸಬೇಕೆಂಬ ಬಲವಾದ ಕೂಗು ಕೇಳಿಬರುತ್ತಿದ್ದರೂ ಸರ್ಕಾರ, ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ.
ಕನ್ನಡ ಅಸ್ಮಿತೆಗಾಗಿ ಹೋರಾಡಿದ ಇಬ್ಬರು ದಿಗ್ಗಜರು :
ಹೈದರಾಬಾದ್ ಕರ್ನಾಟಕದ ಪ್ರಮುಖ ಸಮಾಜ ಸೇವಕ, ಕನ್ನಡಪರ ಹೋರಾಟಗಾರ ಪ್ರಭುರಾವ ಕಂಬಳಿವಾಲೆ ಅವರು ಮೂಲತಃ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದಗೀರನವರು. ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಅವರು ಬೀದರ್ ಜಿಲ್ಲೆಗೆ ಬಂದರು. ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರೂ ಅವರಿಗೆ ಬಸವಾದಿ ಶಿವಶರಣರ ವಚನ ಸಾಹಿತ್ಯ ಬಗ್ಗೆ ಅಪಾರವಾದ ಗೌರವ ಇತ್ತು. ಹೀಗಾಗಿ ಹರ್ಡೇಕರ್ ಮಂಜಪ್ಪ, ಮಾನ್ವಿ ನರಸಿಂಗರಾಯ, ಸಿದ್ಧಯ್ಯ ಪುರಾಣಿಕ, ಜಯದೇವಿ ತಾಯಿ ಲಿಗಾಡೆ, ಅನ್ನದಾನಯ್ಯ ಪುರಾಣಿಕ, ರಮಾನಂದ ತೀರ್ಥ ಸೇರಿದಂತೆ ಅನೇಕರನ್ನು ಉದಗೀರಿಗೆ ಕರೆಯಿಸಿ ವಚನ ಸಾಹಿತ್ಯದ ಬಗ್ಗೆ ಅನೇಕ ಪ್ರವಚನಗಳನ್ನು ಏರ್ಪಡಿಸಿದ್ದರು.
ಪ್ರಭುರಾವ ಕಂಬಳಿವಾಲೆ ಅವರು ವಕೀಲಿ ವೃತ್ತಿ ಮಾಡುತ್ತಿದ್ದರು. ಬೀದರ್‌ನ ಕೆಆರ್‌ಇ ಸಂಸ್ಥೆಯ ಕಾರ್ಯದರ್ಶಿ ಆಗಿದ್ದರು. ಆನಂತರ ಬಿಡಪ್ಪ ಅವರನ್ನು ಕರೆಸಿ ಅಧ್ಯಕ್ಷರಾಗಿ ಮಾಡಿದ್ದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಾಲೇಜಿನ ಮೊದಲ ಉಪಾಧ್ಯಕ್ಷರಾಗಿ ಹತ್ತು ವರ್ಷ ಕೆಲಸ ಮಾಡಿದ್ದರು. ಅವರಿಂದಾಗಿ ಈ ಎರಡೂ ಸಂಸ್ಥೆಗಳು ಹೆಮ್ಮರವಾಗಿ ಬೆಳೆದಿವೆ. ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ. ಹೀಗಾಗಿ ಬೀದರ್ ಜಿಲ್ಲಾದ್ಯಂತ ಕಂಬಳಿವಾಲೆ ಅವರ ಹೆಸರು ಜನಜನಿತ.
1912ರಲ್ಲಿ ಜನಿಸಿದ ಜಯದೇವಿ ತಾಯಿ ಲಿಗಾಡೆ ಅವರು ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರದವರು. ಕರ್ನಾಟಕ ಏಕೀಕರಣದಲ್ಲಿ ಸೋಲಾಪೂರ ಮಹಾರಾಷ್ಟ್ರಕ್ಕೆ ಸೇರಿದಾಗ ಬಸವಕಲ್ಯಾಣದ ತ್ರಿಪುರಾಂತ ಕೆರೆಯ ದಂಡೆಗಿರುವ ಅನುಭವ ಮಂಟಪದ ಪಕ್ಕದಲ್ಲಿ ಮನೆ (ಈಗ ಅವರ ಸಮಾಧಿ ಕೂಡ ಅಲ್ಲಿಯೇ ಇದೆ) ಕಟ್ಟಿಸಿಕೊಂಡು ವಾಸ ಮಾಡಿದರು.
ಕನ್ನಡ ನೆಲದ, ನುಡಿಯ ಕುರಿತು ಅಪಾರ ಪ್ರೀತಿ ಮತ್ತು ಅಭಿಮಾನ ಹೊಂದಿದ ಜಯದೇವಿತಾಯಿ ಲಿಗಾಡೆ ಮಹಿಳಾ ಶಿಕ್ಷಣ, ಮಹಿಳಾ ಸಬಲೀಕರಣ, ಮಹಿಳೆಯ ಸ್ವಾವಲಂಬನೆ, ಸಶಕ್ತೀಕರಣದ ಕುರಿತು ಚಿಂತನೆ ನಡೆಸಿ ಅದಕ್ಕೊಂದು ಕ್ರಿಯಾತ್ಮಕ ಆಯಾಮ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿ ಹೀಗೆ ಹಲವು ನಾಡು-ನುಡಿಗಳ ಕೆಲಸಗಳನ್ನು ಮಾಡಿದ ಜಯದೇವಿ ತಾಯಿ ಲಿಗಾಡೆ “ಕಲ್ಯಾಣದ ಭೂಮಿಯ ಸೀಮೆಯೊಳಗೆ ಕಾಲಿಡಕೂಡದು ಕಾಯ್ದೆ ತೆಗೆದಾನು – ನಿಜಾಮ ಅಲಿಸದೇ ಸೀಮೆ ದಾಟಿದೆ” ಎಂದು ನುಡಿದು ಜನರ ಆತ್ಮಬಲ ಹಿಗ್ಗಿಸಿದರು.
ಲಿಗಾಡೆ ಅವರು ಸಿದ್ದವಾಣಿ, ಬಸವ ದರ್ಶನ, ಮಹಾಯೋಗಿನಿ, ಸಿದ್ದರಾಮಾಂಚ, ತ್ರಿವಿಧಿ, ಶೂನ್ಯ ಸಂಪಾದನೆ, ಮರಾಠಿಗರಿಗೆ ಅನುವಾದಿಸುವ ಮೂಲಕ ಕನ್ನಡ ಮತ್ತು ಮರಾಠಿಗಳ ನಡುವೆ ಭಾಷಾ ಬಾಂಧವ್ಯಕ್ಕೆ ಕಾರಣರಾಗಿದ್ದರು. ಇನ್ನು ಕನ್ನಡದಲ್ಲಿ ಜಯಗೀತೆ, ತಾಯಿಯ ಪದಗಳು, ತಾರಕ ತಂಬೂರಿ, ಬಂದೇವು ಕಲ್ಯಾಣಕ್ಕ ಹೀಗೆ ಕನ್ನಡ ಹಾಗೂ ಮರಾಠಿಯಲ್ಲಿ ಸಾಹಿತ್ಯ ಕೃಷಿ ಮಾಡಿ, 14 ಕೃತಿಗಳನ್ನು ಪ್ರಕಟಿಸಿದ್ದಾರೆ. 1974ರಲ್ಲಿ ಮಂಡ್ಯದಲ್ಲಿ ಮೊದಲ ಬಾರಿಗೆ ಜರುಗಿದ 48ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಮೊದಲ ಮಹಿಳಾ ಸಮ್ಮೇಳನಾಧ್ಯಕ್ಷರೂ ಎಂಬ ಹೆಗ್ಗಳಿಕೆಯೂ ಹೌದು.
ಕಳೆದ ಒಂದುವರೆ ದಶಕದಿಂದ ಬಸವಕಲ್ಯಾಣದಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನ ಸ್ಥಾಪಿಸಿ ರಾಷ್ಟ್ರೀಯ ವಿಚಾರ ಸಂಕೀರ್ಣಗಳು, ವಿಮರ್ಶಾ ಕಮ್ಮಟಗಳು, ವಿಚಾರ ಕಮ್ಮಟ, ಉಪನ್ಯಾಸ, ಚರ್ಚೆ, ಸಂವಾದಗಳು ಏರ್ಪಡಿಸಿ ಇಲ್ಲಿ ಗಂಭೀರವಾದ ಸಾಹಿತ್ಯಿಕ ಲೋಕವನ್ನು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಈ ಭಾಗದಲ್ಲಿ ಲಿಗಾಡೆ ಅವರ ಆಶಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಬೇಕೆಂದು ಲಿಗಾಡೆ ಪ್ರತಿಷ್ಠಾನದ ಎಸ್.ಜಿ ಹುಡೇದ, ದೇವೇಂದ್ರ ಬರಗಾಲೆ, ಶಿವಾಜಿ ಮೇತ್ರೆ, ಪವಿತ್ರಾ ಗಿರಗಂಟೆ, ಡಾ.ಭೀಮಾಶಂಕರ ಬಿರಾದಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಾನ ರಚನೆಗೆ ಜನಪ್ರತಿನಿಧಿಗಳ ಆಸಕ್ತಿ ಮುಖ್ಯ :
ಈ ಭಾಗದ ಇಬ್ಬರು ದಿಗ್ಗಜರಾದ ಪ್ರಭುರಾವ ಕಂಬಳಿವಾಲೆ ಮತ್ತು ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಟ್ರಸ್ಟ್ ರಚನೆಯಾದರೆ ಸರ್ಕಾರದಿಂದ ಅನುದಾನ ಬರುತ್ತದೆ. ನಾಡು–ನುಡಿಗಾಗಿ ಕೈಗೊಂಡಿರುವ ಸಾಧಕರ ಕಾರ್ಯಗಳನ್ನು ಜನಮಾನಸಕ್ಕೆ ಪ್ರಚುರಪಡಿಸಲಾಗುತ್ತದೆ. ಪ್ರತಿ ವರ್ಷ ಅವರ ಹೆಸರಿನಲ್ಲಿ ಒಬ್ಬ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಸಂಶೋಧನೆ, ಕಮ್ಮಟ, ವಿಚಾರ ಸಂಕೀರ್ಣ ಸೇರಿದಂತೆ ಹಲವು ಕಾರ್ಯಗಳ ಮೂಲಕ ಅವರನ್ನು ನೆನೆಯುವ ಕೆಲಸವಾಗುತ್ತದೆ. ಈ ಮುಖಾಂತರ ಅವರ ಕಾರ್ಯಕ್ಷೇತ್ರಗಳು ಅಭಿವೃದ್ಧಿಪಡಿಸಲು ನೆರವಾಗುತ್ತದೆʼ ಎಂದು ಸಾಹಿತಿ ಎಂ.ಎಸ್.ಮನೋಹರ ಹೇಳುತ್ತಾರೆ.
ʼನಮ್ಮ ಭಾಗದಲ್ಲಿ ಕನ್ನಡಕ್ಕಾಗಿ ದುಡಿದವರ ಹೆಸರಿನಲ್ಲಿ ಯಾವುದೇ ಪ್ರತಿಷ್ಠಾನ, ಟ್ರಸ್ಟ್‌ಗಳಿಲ್ಲ. ಹೀಗಾಗಿ ಬೇರೆ ಭಾಗದಲ್ಲಿ ರಚಿಸಿದಂತೆ ಬೀದರ್‌ನ ಸಾಧಕರಾದ ಪ್ರಭುರಾವ ಕಂಬಳಿವಾಳೆ, ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸುವುದು ಅಗತ್ಯವಾಗಿದೆ. ಈಗಾಗಲೇ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ, ಶೀಘ್ರದಲ್ಲೇ ಇಬ್ಬರ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಿ ಆದೇಶಿಸಬೇಕೆಂದು ಜಿಲ್ಲಾ ಉಸ್ತುವಾರಿ ಈಶ್ವರ ಖಂಡ್ರೆ ಅವರಿಗೆ 2024ರ ಸೆ.17ರಂದು ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದಿಂದ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಯಾರೊಬ್ಬರೂ ಕಡತ ತೆರೆದು ನೋಡುತ್ತಿಲ್ಲʼ ಎಂದು ಪ್ರಭುರಾವ ಕಂಬಳಿವಾಳೆ ಅವರ ಮಗ ಶಾಂತಕುಮಾರ್ ಕಂಬಳಿವಾಲೆ ಬೇಸರ ವ್ಯಕ್ತಪಡಿಸಿದ್ದಾರೆ.

ʼಬೀದರ್‌ನ ಸಾಧಕರಾದ ಪ್ರಭುರಾವ ಕಂಬಳಿವಾಲೆ ಮತ್ತು ಡಾ.ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಉದ್ದೇಶಿತ ಟ್ರಸ್ಟ್ ರಚನೆಗಾಗಿ 2023ರಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಸದ್ಯ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಪ್ರಸ್ತಾವನೆ ಇದೆʼ ಎಂದು ಬೀದರ್‌ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ʼಈದಿನʼಕ್ಕೆ ತಿಳಿಸಿದ್ದಾರೆ.
ಕಾರ್ಯಕಾರಿ ಮಂಡಳಿಯಲ್ಲಿ ಯಾರಿದ್ದಾರೆ:
ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಕಾರ್ಯನಿರ್ವಹಣೆಗಾಗಿ ಈ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಕಾರ್ಯಕಾರಿ ಮಂಡಳಿಯಲ್ಲಿ ಚೇತನಾ ಪಾಟೀಲ್, ಡಾ.ಬಸವರಾಜ ಬಲ್ಲೂರ, ಪಾರ್ವತಿ ಸೋನಾರೆ, ಡಾ.ಮನ್ಮತ ಡೋಳೆ, ಶಾಂತಲಿಂಗ ಮಠಪತಿ, ದೇವೇಂದ್ರ ಬರಗಾಲೆ ಹಾಗೂ ಬೀದರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಪ್ರಭುರಾವ ಕಂಬಳಿವಾಲೆ ಪ್ರತಿಷ್ಠಾನದ ಕಾರ್ಯನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಕಾರ್ಯಕಾರಿ ಮಂಡಳಿಯಲ್ಲಿ ಶಾಂತಕುಮಾರ ಉದಗಿರಿ, ಡಾ.ರಘುನಾಥ ಶಂಕರೆಪ್ಪ, ಭಾರತಿ ವಸ್ತ್ರದ, ಎಂ.ಎಸ್.ಮನೋಹರ, ನಾಗಶೆಟ್ಟಿ ಧರಂಪುರ, ಬಿ.ಎಂ.ಅಮರವಾಡಿ, ರಮೇಶ ಬಿರಾದರ್ ಹಾಗೂ ಬೀದರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಇದನ್ನೂ ಓದಿ : ಜೂನ್ 30ರಂದು ಬೀದರ್‌ನಲ್ಲಿ ʼಸದ್ಭಾವನಾ ನಡಿಗೆʼ
ಕಂಬಳಿವಾಲೆ ಹಾಗೂ ಲಿಗಾಡೆ ತಾಯಿ ಅವರು ತಮ್ಮ ಮನೆ, ಮಠ ಬಿಟ್ಟು ವೈಯಕ್ತಿಕ ಸುಖವನ್ನು ತ್ಯಜಿಸಿ ಕನ್ನಡ, ವಚನ ಸಾಹಿತ್ಯ ಹಾಗೂ ಸಮಾಜಕ್ಕಾಗಿ ಅರ್ಪಿಸಿಕೊಂಡವರು. ಯುವ ಪೀಳಿಗೆಗೆ ಅವರ ತ್ಯಾಗ ಗೊತ್ತಾಗಬೇಕಾದರೆ ಇಬ್ಬರು ಸಾಧಕರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಸದಾಕಾಲ ಅವರ ಕೆಲಸ ಹಾಗೂ ಅವರನ್ನು ನೆನೆಯುವಂತಾಗಬೇಕು ಎಂಬುದು ಜಿಲ್ಲೆಯ ಸಾಹಿತಿಗಳು, ಬರಹಗಾರರ, ಕನ್ನಡಪರ ಚಿಂತಕರ ಒತ್ತಾಸೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.