- ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಶಾಸಕರು
- ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ಕೂಡ ನಡೆಯಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಳಂದ ಕ್ಷೇತ್ರದ ಶಾಸಕ ಬಿ ಆರ್ ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಅಲ್ಲದೆ ಬಿ ಕೆ ಹರಿಪ್ರಸಾದ್ ನೀಡಿದ್ದ ಹೇಳಿಕೆಯೂ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿತ್ತು. ಈ ಹಿನ್ನೆಲೆ ಆರಂಭದಲ್ಲಿಯೇ ಅಸಮಾಧಾನ ಶಮನ ಮಾಡಲು ಮುಂದಾಗಿರುವ ಕಾಂಗ್ರೆಸ್ ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ, ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ತುರ್ತು ಸಿಎಲ್‌ಪಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಪರಿಷತ್ ಸಭಾನಾಯಕ ಎನ್ ಎಸ್ ಬೋಸರಾಜು ಹಾಗೂ ಸಚಿವರು ಸೇರಿದಂತೆ ಕಾಂಗ್ರೆಸ್‌ನ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ.
ಸಂಜೆ 4 ಗಂಟೆಗೆ ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಬಳಿಕ ಸಂಜೆ 6.30ಕ್ಕೆ ಬೆಂಗಳೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ನಾಯಕರ ಆಯ್ಕೆ ಮತ್ತಿತರ ಔಪಚಾರಿಕತೆಗೆ ಸೀಮಿತವಾಗಿ ಈ ಹಿಂದೆ ಸಿಎಲ್‌ಪಿ ಸಭೆಗಳು ನಡೆದಿದ್ದವು. ಈಗ, ಶಾಸಕರ ಬೇಡಿಕೆ ಮತ್ತು ಕೋರಿಕೆ ಆಲಿಸುವ ಉದ್ದೇಶಕ್ಕಾಗಿಯೇ ಈ ಸಭೆ ಕರೆಯಲಾಗಿದೆ. ಸಚಿವರಾಗಲು ಹಲವರು ಅರ್ಹರಾಗಿದ್ದರೂ ಎಲ್ಲರಿಗೂ ಅವಕಾಶ ಸಿಕ್ಕಿಲ್ಲ. ಆದರೆ, ಈ ಹಿರಿಯರ ಕೋರಿಕೆಗಳಿಗೆ ಸಚಿವರು ಸ್ಪಂದಿಸುತ್ತಿಲ್ಲ ಮತ್ತು ಸೂಕ್ತ ಗೌರವ ನೀಡುತ್ತಿಲ್ಲ ಎಂಬುದು ಆಡಳಿತಾರೂಢ ಪಕ್ಷದಲ್ಲಿಅಸಮಾಧಾನಕ್ಕೆ ಕಾರಣವಾಗಿದೆ.
ಬಿ ಕೆ ಹರಿಪ್ರಸಾದ್ ಅವರಿಂದ ಅಸಮಾಧಾನ ಹೊರಬಂದ ಬೆನ್ನಲ್ಲೇ, ಪಕ್ಷದ ಹಲವು ಶಾಸಕರು ಸಿಎಂಗೆ ಸಲ್ಲಿಸಿರುವ ದೂರು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿತ್ತು. ಈ ಎಲ್ಲ ಅಸಮಾಧಾನಗಳಿಗೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಭಾರತ ಐಕ್ಯತಾ, ಮೇಕೆದಾಟು ಪಾದಯಾತ್ರೆ, ಪ್ರಜಾಧ್ವನಿ ಯಾತ್ರೆ ಸೇರಿದಂತೆ ಪಕ್ಷದ ನಾನಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದವರೂ ಈಗ ಸರ್ಕಾರದಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ದಶಕಗಳಿಂದ ಪಕ್ಷಕ್ಕಾಗಿ ದುಡಿದ ನಾವು ಅದೇ ಸಚಿವರ ಮುಂದೆ ಕೈಕಟ್ಟಿ ನಿಲ್ಲುವಂತಾಗಿದೆ ಎಂಬುದು ಹಲವು ಹಿರಿಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೆಲ್ಲದಕ್ಕೂ ಚರ್ಚೆ ಮೂಲಕವೇ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುವುದು ಸಭೆಯ ಉದ್ದೇಶವಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ ವಿಡಿಯೋ ಪ್ರಕರಣ | ‘ಪ್ರತೀಕ್’ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಬಿಜೆಪಿ ಹೋರಾಟ: ದಿನೇಶ್ ಗುಂಡೂರಾವ್
‘ಹಿಂದಿನ ಬಿಜೆಪಿ ಸರ್ಕಾರ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಆ ತಪ್ಪುಗಳನ್ನು ಸರಿಪಡಿಸಲು ಸಮಯ ಬೇಕಿದ್ದು, ಜತೆಗೆ, ಗ್ಯಾರಂಟಿಗಳನ್ನೂ ಅನುಷ್ಠಾನ ಮಾಡಲಾಗುತ್ತಿದೆ. ಹಾಗಾಗಿ, ಈ ವರ್ಷದ ಮಟ್ಟಿಗೆ ಕ್ಷೇತ್ರಗಳಿಗೆ ಅನುದಾನದ ಕೋರಿಕೆಗಳಿಗೆ ಸ್ಪಂದಿಸುವುದು ಕಷ್ಟ. ಶಾಸಕರು ಸಹಕರಿಸಬೇಕಾಗುತ್ತದೆ. ಈ ವಿಚಾರವನ್ನು ಶಾಸಕರ ಸಭೆಯಲ್ಲಿ ವಿವರಿಸುತ್ತೇವೆ’ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಅದಲ್ಲದೇ ವರ್ಗಾವಣೆ ವಿಚಾರ ಕೂಡ ಶಾಸಕಾಂಗ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ವಿಚಾರದಲ್ಲಿ ಸಚಿವರ ಸೂಕ್ತ ಸ್ಪಂದನೆ ಸಿಗಬೇಕು. ಪ್ರಮುಖ ನಿಗಮ, ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರಾಗಿ ನೇಮಕ ಮಾಡುವುದು. ಕ್ಷೇತ್ರಕ್ಕೆ ಸೀಮಿತವಾಗಿ ಶಾಸಕರು ಬಯಸುವ ಅಧಿಕಾರಿಗಳ ವರ್ಗಾವಣೆ ಬಾಕಿ ಕೋರಿಕೆಗಳನ್ನು ಸಿಎಂ ವಿವೇಚನಾಧಿಕಾರದಡಿ ಪರಿಗಣಿಸುವುದು. ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿರುವ ಬಿ ಕೆ ಹರಿಪ್ರಸಾದ್ ಹೇಳಿಕೆ, ಶಾಸಕರ ದೂರು ಮತ್ತಿತರ ಸಂಗತಿಗಳ ಚರ್ಚೆಯಾಗುವ ಸಾಧ್ಯತೆ ಇದೆ.