ಧಾರವಾಡದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಕಟ್ಟಡವು 130 ವರ್ಷಗಳಷ್ಟು ಹಳೆಯದ್ದಾಗಿದ್ದು, ಐತಿಹಾಸಿಕ ಪರಂಪರೆ ಹೊಂದಿದೆ. ಆ ಕಟ್ಟಡವನ್ನು ದುರಸ್ತಿ ಮಾಡಿ, ಪುನರುಜ್ಜೀವನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ನೀಡಿದ್ದಾರೆ.
ಬುಧವಾರ ಧಾರವಾಡಕ್ಕೆ ತೆರಳಿದ್ದ ಅವರು, ಮಹಿಳಾ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಕಾಲೇಜಿನ ಕಟ್ಟಡ ಸೋರುತ್ತಿರುವುದು ಮತ್ತು ಮೂಲಸೌಕರ್ಯಗಳ ಕೊರತೆ ಇರುವುದನ್ನು ಅವರು ಗಮನಿಸಿದರು.
“ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣದ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಿ, ಅನುದಾನ ನೀಡಲಾಗುವುದು. ಕಾಲೇಜಿನ ಹಳೆಯ ಕಟ್ಟಡುವ ಐತಿಹಾಸಿಕ ಕಟ್ಟಡವಾಗಿದ್ದು, ಅದರ ವಿನ್ಯಾಸ ಉಳಿಸಿಕೊಂಡು ದುರಸ್ತಿ ಮಾಡಿಸಬೇಕು. ಕಟ್ಟಡ ಹೊರತಾದ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲು ಸೂಕ್ತ ನೀಲನಕ್ಷೆ ರಚಿಸಬೇಕು” ಎಂದು ಅಧಿಕಾರಿಗಳಿಗೆ ತಿಳಿಸಿದರು.
“ಅತಿಯಾದ ಮಳೆಯಿಂದಾಗಿ ಮತ್ತು ಕಟ್ಟಡ ಹಳೆಯದಾಗಿರುವುದರಿಂದ ಸೋರಿಕೆಯಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವುದರಿಂದ ಈ ಕಟ್ಟಡದಲ್ಲಿ ತರಗತಿಗಳನ್ನು ನಡೆಸಬಾರದು” ಎಂದು ಉಪನ್ಯಾಸಕರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿನಿರ್ದೇಶಕ ಪ್ರೋ. ಪಿ.ಬಿ. ಕಲ್ಯಾಣಶೆಟ್ಟರ, ಪ್ರಾಚಾರ್ಯ ಡಾ.ಸರಸ್ವತಿ ಕಳಸದ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಮಹಾನಗರ ಪಾಲಿಕೆಯ ಸದಸ್ಯ ಡಾ.ಮಯೂರ ಮೊರೆ, ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ ಸೇರಿದಂತೆ ಕಾಲೇಜು ಅಧ್ಯಾಪಕರು, ಇತರ ಅಧಿಕಾರಿಗಳು ಇದ್ದರು.