ಪಾಕಿಸ್ತಾನದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ ಮೂರು ದಿನಗಳಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 63 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಖೈಬರ್-ಪಖ್ತುಂಖ್ವಾ ಪ್ರದೇಶದಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 26ರಿಂದ ಪಾಕಿಸ್ತಾನದಲ್ಲಿ ಪೂರ್ವ ಮಾನ್ಸೂನ್ ಮಳೆ ಆರಂಭವಾಗಿದೆ. ಅಲ್ಲಿನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಖೈಬರ್-ಪಖ್ತುಂಖ್ವಾ (KP) ಪ್ರಾಂತ್ಯದಲ್ಲಿ ಭಾರೀ ಅನಾಹುತಗಳು ಸಂಭವಿಸುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ರಕ್ಷಣಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಖೈಬರ್-ಪಖ್ತುಂಖ್ವಾದ ಸ್ವಾತ್ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಒಂದೇ ಕುಟುಂಬದ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. ಆ ಕುಟುಂಬವು ಪ್ರವಾಹದ ನೀರಿನ ನಡುವೆಯೂ ಒಂದು ಗಂಟೆ ಕಾಲ ಎತ್ತರದ ಪ್ರದೇಶದಲ್ಲಿ ನಿಂತು, ರಕ್ಷಣೆಗಾಗಿ ಎದುರು ನೋಡುತ್ತಿತ್ತು. ಆದರೂ, ಕುಟುಂಬವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕುಟುಂಬವು ಪ್ರವಾಹದಲ್ಲಿ ಕೊಚ್ಚಿಹೋಯಿತು. ಕುಟುಂಬವನ್ನು ರಕ್ಷಿಸುವಲ್ಲಿ ವಿಫಲವಾದ ತೆಹ್ರೀಕ್-ಎ-ಇನ್ಸಾಫ್ (PTI) ಪ್ರಾಂತೀಯ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪ್ರಾಂತೀಯ ಸರ್ಕಾರವು ಕುಟುಂಬವನ್ನು ರಕ್ಷಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಸ್ವಾತ್ ಉಪ ಆಯುಕ್ತ ಶೆಹಜಾದ್ ಮಹಬೂಬ್ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಇನ್ನು, ಮಳೆ ಸಂಬಂಧಿತಘಟನೆಗಳಲ್ಲಿ ಪಾಕಿಸ್ತಾನದ ಪಂಜಾಬ್ ಭಾಗದಲ್ಲಿ 12 ಜನರು ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್‌ನಲ್ಲಿ 41 ಜನರು, ಸಿಂಧ್‌ನಲ್ಲಿ 16 ಹಾಗೂ ಖೈಬರ್-ಪಖ್ತುಂಖ್ವಾದಲ್ಲಿ 6 ಜನರು ಪ್ರತ್ಯೇಕ ಘಟನೆಗಳಲ್ಲಿ ಗಾಯಗೊಂಡಿದ್ದಾರೆ.
ಅಲ್ಲದೆ, ದೇಶಾದ್ಯಂತ 63 ಮನೆಗಳು ಹಾನಿಗೊಳಗಾಗಿವೆ ಮತ್ತು 30 ಪ್ರಾಣಿಗಳು ಸಾವನ್ನಪ್ಪಿವೆ. ಮಳೆ ಮತ್ತು ಪ್ರವಾಹದಲ್ಲಿ ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ಮತ್ತು ಪುನರ್ವಸತಿ ಪ್ರಯತ್ನಗಳು ನಡೆಯುತ್ತಿವೆ ಎಂದು NDMA ತಿಳಿಸಿದೆ.