ಸೊರಬ ತಾಲೂಕಿನ ಘಟನೆ ಸಂಬಂಧ ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ 21 ವರ್ಷದ ಪುತ್ರಿಯನ್ನು ಮರ್ಯಾದೆಗೆ ಅಂಜಿ ತಂದೆಯೇ ಕೊಲೆಮಾಡಲು ಯತ್ನಿಸಿದ್ದಾನೆ.
ಪುತ್ರಿ ಗರ್ಭಿಣಿ ಆಗಿರುವ ವಿಚಾರ ತಿಳಿದು ಸಿಟ್ಟಾದ ಆರೋಪಿಯು, ಆಸ್ಪತ್ರೆಗೆ ಹೋಗೋಣವೆಂದು ಹೇಳಿ ಪತ್ನಿ ಹಾಗೂ ಮಗಳನ್ನು ತಾಲ್ಲೂಕಿನ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಶನಿವಾರ ಕರೆದೊಯ್ದಿದ್ದಾನೆ. ಅಲ್ಲಿ ಮಗಳ ಕುತ್ತಿಗೆಗೆ ಹಗ್ಗದಿಂದಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ್ದಾನೆ.
ಪುತ್ರಿಯನ್ನು ಸಾಯಿಸಬೇಡಿ ಎಂದು ಪತ್ನಿ ಕಾಲಿಗೆ ಬಿದ್ದು ಕೇಳಿಕೊಂಡರೂ ಒಪ್ಪಿಲ್ಲ. ಈ ವೇಳೆ ಯುವತಿ ಪ್ರಜ್ಞೆ ತಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಮಗಳು ಮೃತಪಟ್ಟಿರಬಹುದು ಎಂದು ಭಾವಿಸಿ ಇಬ್ಬರೂ ಅಲ್ಲಿಂದ ತೆರಳಿದ್ದಾರೆ.
ಕೆಲವು ಹೊತ್ತಿನ ನಂತರ ಯುವತಿಗೆ ಪ್ರಜ್ಞೆ ಬಂದಿದ್ದು, ರಸ್ತೆವರೆಗೂ ನಡೆದು ಬಂದಿದ್ದಾಳೆ. ಸ್ಥಳೀಯರ ಸಹಾಯ ಪಡೆದು ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾಳೆ. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಯುವತಿಯಿಂದ ದೂರು ಪಡೆದಿರುವ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.