ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ(ಐಎಂಬಿಎಲ್) ದಾಟಿದ ಆರೋಪದ ಮೇಲೆ ಎಂಟು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಭಾನುವಾರ ಮುಂಜಾನೆ ಬಂಧಿಸಿದೆ. ಮೀನುಗಾರರು ರಾಮೇಶ್ವರಂನವರಾಗಿದ್ದು, ಅವರ ಮೀನುಗಾರಿಕಾ ದೋಣಿಯನ್ನೂ ಶ್ರೀಲಂಕಾ ವಶಕ್ಕೆ ಪಡೆದಿದೆ.
ಬಂಧಿತ ಎಂಟು ಮೀನುಗಾರರನ್ನು ಎಸ್. ಸೇಸು(39), ಎನ್. ಅಣ್ಣಾಮಲೈ(55), ವಿ. ಕಲ್ಯಾಣರಾಮನ್(48), ಎಸ್. ಸೈಯದ್ ಇಬ್ರಾಹಿಂ(35), ಎನ್. ಮುನೀಶ್ವರನ್(35), ಯು. ಸೆಲ್ವಂ(28), ಕೆ. ಕಾಂತಿವೆಕ್(67) ಮತ್ತು ಬಾಲಮುರುಗನ್(24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ರಾಮೇಶ್ವರಂ ಮೂಲದವರು.
ಇದನ್ನು ಓದಿದ್ದೀರಾ? 34 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ವಾರ್ಷಿಕವಾಗಿ ಮೀನುಗಾರಿಕ ನಿಷೇಧ ಘೋಷಣೆಯಾದ ನಂತರ ಇದು ಮೊದಲ ಬಂಧನವಾಗಿದೆ. ರಾಮೇಶ್ವರಂ ಉತ್ತರ ಬಂದರಿನಿಂದ ಸುಮಾರು 300 ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು ಶನಿವಾರ ಸಮುದ್ರಕ್ಕೆ ಇಳಿದಿದೆ ಎಂದು ವರದಿಯಾಗಿದೆ.
ದಡಕ್ಕೆ ತಲುಪುತ್ತಿದ್ದಾಗ ಕೆಲವು ಮೀನುಗಾರರು ಗಡಿ ದಾಟಿದ್ದಾರೆ ಎಂದು ಹೇಳಲಾಗಿದೆ. ಬಂಧಿತ ಮೀನುಗಾರರು ಮತ್ತು ಅವರ ದೋಣಿಯನ್ನು ಸದ್ಯ ತಲೈಮನ್ನಾರ್‌ಗೆ ಕರೆದೊಯ್ಯಲಾಗಿದೆ. ರಾಮೇಶ್ವರದ ಎಸ್. ಪಂಡಿತ್ಯಮ್ಮಳ್ ಅವರ ಮಾಲೀಕತ್ವದ ಐಎನ್‌ಡಿ-ಟಿಎನ್-10-ಎಂಎಂ-773 ನೋಂದಣಿ ಸಂಖ್ಯೆಯನ್ನು ಹೊಂದಿರುವ ದೋಣಿಯನ್ನು ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.
ರಾಮೇಶ್ವರದ ಮೀನುಗಾರರ ಸಂಘಗಳು ಬಂಧನವನ್ನು ಖಂಡಿಸಿದ್ದು, ಮೀನುಗಾರರ ಬಿಡುಗಡೆಗೆ ಮತ್ತು ವಶಪಡಿಸಿಕೊಂಡ ದೋಣಿಯನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿವೆ.
