ಮಡ್ಡಿ ಜನಾಂಗಕ್ಕೆ ಕೊಟ್ಟಿ ಜಾತಿ ಪ್ರಮಾಣಪತ್ರ ನೀಡಬಾರದೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡ ಸೋಮಪ್ಪ ಐತಾಪುತ ಅವರು ಮಂಡರಗಿ ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿಯಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ, ಹಕ್ಕೊತ್ತಾಯ ಪತ್ರ ಸಲ್ಲಿಸಿದ ಅವರು, “ಮಡ್ಡಿ ಜನಾಂಗಕ್ಕೆ ಕೊಟ್ಟಿ ಜಾತಿ ಪ್ರಮಾಣ ಪತ್ರ ಕೊಡಬಾರದೆಂದು ಸರ್ಕಾರಿ ಆದೇಶ ಇದೆ. ಆದರೂ, ಮುಂಡರಗಿ ತಾಲೂಕಿನ ಬಿದರಳ್ಳಿ, ಹಾರೊಗೇರಿ, ಹಮ್ಮಿಗಿ, ಡಂಬಳ ಗ್ರಾಮ ಪಂಚಾಯಿತಿಗಳಲ್ಲಿ ಮಡ್ಡಿ ಜನಾಂಗಕ್ಕೆ ಕೊಟ್ಟಿ ಜಾತಿ ಪ್ರಮಾಣಪತ್ರ ಕೊಡುತ್ತಿರುವುದು ಕಂಡುಬಂದಿದೆ” ಎಂದು ಆರೋಪಿಸಿದ್ದಾರೆ.
“ಜಾತಿ ಕಾಲಮ್‌ಅನ್ನು ತಾಲೂಕು ದಂಡಾಧಿಕಾರಿಗಳು ಪರಿಶೀಲಿಸಿ ಜಾತಿ ಪ್ರಮಾಣಪತ್ರ ನೀಡಬೇಕು. ಮಡ್ಡಿ ಜನಾಂಗಕ್ಕೆ ಸೇರಿದವರಿಗೆ ಕೊಟ್ಟಿ ಜಾತಿ ಪ್ರಮಾಣಪತ್ರ ನೀಡಬಾರದು” ಎಂದು ಆಗ್ರಹಿಸಿದರು.
ಡಿಎಸ್ಎಸ್ ಮುಖಂಡ ದುರುಗಪ್ಪ ಹರಿಜನ ಮಾತನಾಡಿ, “ಮಡ್ಡಿ ಜನಾಂಗದ ಕೆಲವರು ಸರ್ಕಾರಿ ಸೌಲಭ್ಯಗಳಿಗಾಗಿ ಭೋವಿ ಜನಾಂಗಕ್ಕೆ ಸೇರಿದವರೆಂದು ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಹೀಗಾಗಿ, ತಾಲೂಕು ದಂಡಾಧಿಕಾರಿಗಳು ಕೊಟ್ಟಿ ಜಾತಿ ಪ್ರಮಾಣ ಪತ್ರವನ್ನು ಕೊಡಬಾರದು. ಒಂದುವೇಳೆ, ಮುಂದಿನ ದಿನಗಳಲ್ಲಿ ಕೊಟ್ಟಿ ಜಾತಿ ಪ್ರಮಾಣ ಪತ್ರ ಕೊಟ್ಟಲ್ಲಿ ಹೋರಾಟ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ, ಡಿಎಸ್ಎಸ್ ಮುಖಂಡ ಕೊಟ್ರೇಶಿ, ಬಿ.ಎಸ್ ಪುಜಾರ್, ಫಕೀರೇಶ ಮಾದರ ಹಾಗೂ ವಿ ಟಿ ತಿಮ್ಮಾಪುರ ಇದ್ದರು.