ಸಾಮಾಜಿಕ ಸಮಾರಂಭವಾಗಿದ್ದ ಮದುವೆ ಯಾವಾಗ ಶ್ರೀಮಂತಿಕೆ ಪ್ರದರ್ಶನದ ವೇದಿಕೆಯಾಯಿತೋ, ಅಲ್ಲಿಂದ ಹಲವಾರು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿ ಈಗ ಅವುಗಳು ಈವರೆಗೆ ಗಣನೆಗೆ ತೆಗೆದುಕೊಳ್ಳದೆ ಇದ್ದ ಹವಾಮಾನ ವೈಪರೀತ್ಯಕ್ಕೆ ಮೂಲವಾಗುವವರೆಗೂ ಮುಟ್ಟಿದೆ. ಜಾಗತಿಕ ಹಸಿವು ಸೂಚ್ಯಂಕದ ವರದಿ ಭಾರತದಲ್ಲಿ ಹಸಿವೆಯ ತೀವ್ರತೆ ಗಂಭೀರ ಮಟ್ಟದಲ್ಲಿದೆ ಎಂದು ಎಚ್ಚರಿಸಿದೆ. ಆದರೆ ಈಗಿನ ಆಡಂಬರದ ಮದುವೆಗಳಲ್ಲಿ ಊಟ ಮಾಡುವುದಕ್ಕಿಂತ ಹೆಚ್ಚು ಆಹಾರ ಪದಾರ್ಥಗಳು ಕಸದ ಬುಟ್ಟಿಗೆ ಸೇರುತ್ತಿವೆ. ಈ ಸಂದರ್ಭದಲ್ಲಿ ನಮ್ಮ ಸಮಾಜ ಈ ಕುರಿತಾಗಿ ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇತ್ತೀಚೆಗೆ ಪರಿಚಯದವರೊಬ್ಬರ ಸ್ವಲ್ಪ ಅದ್ಧೂರಿಯೇ ಎನಿಸುವ ಮದುವೆಗೆ ಹೋಗಬೇಕಾಯಿತು. ಮದುವೆ ಹಾಲ್‌ನ ಪ್ರವೇಶದ್ವಾರದಿಂದ ಆರಂಭಗೊಂಡು, ಊಟ ಮುಗಿಸಿ ಹೊರಗೆ ಬರುವವರೆಗೆ ಎಷ್ಟೆಲ್ಲ ಏಕ ಬಳಕೆಯ ಪ್ಲಾಸ್ಟಿಕ್ ಬಳಸಲಾಗಿದೆ ಎಂಬುದನ್ನು ಲೆಕ್ಕ ಹಾಕಿಯೇ ಸುಸ್ತಾಯಿತು. ಹಾಲ್‌ಗೆ ಒಳಹೋಗುವ ಮುನ್ನ ವೆಲ್‌ಕಮ್ ಡ್ರಿಂಕ್ಸ್‌ಗೆ ಒಂದು, ವೆಲ್‌ಕಮ್ ಸ್ನ್ಯಾಕ್ಸ್‌ಗೆ ಇನ್ನೊಂದು, ವೆಲ್‌ಕಮ್ ಡ್ರೈಫ್ರೂಟ್ಸ್‌ಗೆ ಮತ್ತಿನ್ನೊಂದಾದರೆ ಊಟಕ್ಕೆ ಕುಳಿತಾಗ ಮತ್ತೆ ಅದರದ್ದೇ ಸವಾರಿ. ಸೂಪ್‌ಗೆ, ಐಸ್‌ಕ್ರೀಮ್‌ಗೆ, ಮಜ್ಜಿಗೆಗೆ, ಕುಡಿಯುವ ನೀರಿಗೆ…. ಬಂದದ್ದು ಬರೇ 500 ಜನ ಎಂದರೂ ಈ ಪ್ಲಾಸ್ಟಿಕ್ ತ್ಯಾಜ್ಯ ದ ಪ್ರಮಾಣ ಎಷ್ಟಾದೀತು?
ಆದರೆ ಇಲ್ಲಿ ಈಗ ಹೇಳ ಹೊರಟಿರುವುದು ಪ್ಲಾಸ್ಟಿಕ್ ತ್ಯಾಜ್ಯದ ಬಗೆಗಲ್ಲ. ಭಾರತದಲ್ಲಿ ನಡೆಯುವ ಐಷಾರಾಮಿ ಮದುವೆ ಸಮಾರಂಭಗಳು ಮತ್ತು ಅದರಲ್ಲಿ ಉಂಡು ಬಿಡುವ ಆಹಾರ ತ್ಯಾಜ್ಯ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ ಎಂಬ ಇನ್ನೊಂದು ಕುತೂಹಲಕಾರಿ ಅಂಶದ ಬಗೆಗೆ. ಆಡಂಬರ ವಿವಾಹಗಳು ಸೃಷ್ಟಿಸುತ್ತಿರುವ ಹವಾಮಾನ ವೈಪರೀತ್ಯ ಕುರಿತ ಆಶ್ಚರ್ಯಕರ ಸಂಗತಿಯನ್ನು ಇಂಡಿಯಾ ಟುಡೇ ಪತ್ರಿಕೆ ಇತ್ತೀಚೆಗೆ ಹೊರಗೆಡಹಿದೆ.
ಐಷಾರಾಮಿ ಮದುವೆಗಳು ಮತ್ತು ಆಹಾರ ತ್ಯಾಜ್ಯ
ಮೊದಲಿನ ದಿನಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಆಹಾರ ಸೇವನೆಯ ಪ್ರಮಾಣ ಬಹುತೇಕ ಕಡಿಮೆಯೇ ಅಥವಾ ʻಲಿಮಿಟೆಡ್ʼ. ಆದರೆ ಭಾರತದಲ್ಲಿಅದ್ಧೂರಿ ಮದುವೆಗಳಲ್ಲಿ ಸಾಮಾನ್ಯವಾಗಿ ತಿನ್ನಲು ತುಸು ಹೆಚ್ಚೇ ಎನಿಸುವಷ್ಟು ತರೇವಾರಿ ತಿನಿಸುಗಳಿರುತ್ತವೆ. ಜಿಹ್ವಾಚಾಪಲದಿಂದ ರುಚಿ ಸವಿಯಲು ಖಾದ್ಯಗಳನ್ನು ಹಾಕಿಸಿಕೊಂಡರೂ ಕೆಲವೊಮ್ಮೆ ತಿಂದದ್ದು ಹೆಚ್ಚಾಗಿ ತಿನ್ನಲಾಗದೆಯೋ ಅಥವಾ ಅದರ ಸ್ವಾದ ಚೆನ್ನಾಗಿಲ್ಲದೆಯೋ ಅದನ್ನು ಊಟದ ಬಟ್ಟಲಿನಲ್ಲಿಯೇ ಬಿಟ್ಟುಬಿಡುತ್ತೇವೆ. ಕೆಲವೊಮ್ಮೆ ಬೇರೆ ಬೇರೆ ಕಾರಣದಿಂದ ಬರಬೇಕಾಗಿದ್ದ ಅತಿಥಿಗಳ ಸಂಖ್ಯೆಯಲ್ಲಿ ಕಡಿಮೆಯಾದರೂ ಆಹಾರ ಹೆಚ್ಚಿನ ಪ್ರಮಾಣದಲ್ಲಿ ಮಿಕ್ಕುಳಿಯುತ್ತದೆ.

ಭಾರತದಲ್ಲಿ ವರ್ಷವೊಂದಕ್ಕೆ ಸರಿಸುಮಾರು 10 ಮಿಲಿಯನ್‌ಗಿಂತಲೂ (ಒಂದು ಕೋಟಿ) ಹೆಚ್ಚು ವಿವಾಹಗಳು ಜರುಗುತ್ತವೆ ಎಂದು ಅಂದಾಜಿಸಲಾಗಿದೆ. ಈ ಮದುವೆ ಸಮಾರಂಭಗಳೇ ದೇಶದಲ್ಲಿ ಅಪಾರ ಪ್ರಮಾಣದ ಆಹಾರ ಪದಾರ್ಥಗಳು ವ್ಯರ್ಥವಾಗಿ ಕಸಕ್ಕೆ ಸೇರಲು ಕಾರಣೀಭೂತವಾಗಿವೆ. ಫೀಡಿಂಗ್ ಇಂಡಿಯಾ ಎಂಬ ಎನ್‌ಜಿಒ ಪ್ರಕಾರ, ಭಾರತದಲ್ಲಿ ನಡೆಯುವ ಮಧ್ಯಮವರ್ಗದ ವಿವಾಹಗಳಲ್ಲಿ ಸುಮಾರು 30 ರಿಂದ 50 ಕಿಲೋಗ್ರಾಂಗಳಷ್ಟು ಆಹಾರ ವ್ಯರ್ಥವಾಗುತ್ತದೆ. ಅದೇ ಇದು ಶ್ರೀಮಂತರ ಅಥವಾ ಗಣ್ಯ ವ್ಯಕ್ತಿಗಳ ಕುಟುಂಬದ ಮದುವೆಯಾದರೆ ಅಲ್ಲಿ ವ್ಯರ್ಥವಾಗುವ ಆಹಾರದ ಪ್ರಮಾಣ ಮಧ್ಯಮವರ್ಗದ ವಿವಾಹಗಳಲ್ಲಿ ವ್ಯರ್ಥವಾಗುವ ಆಹಾರದ ಪ್ರಮಾಣಕ್ಕಿಂತ ಹತ್ತು ಪಟ್ಟಿಗೂ ಜಾಸ್ತಿ. ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ ಬಿಡುಗಡೆ ಮಾಡಿದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ ವಿಶ್ವಾದ್ಯಂತ ದಿನವೊಂದಕ್ಕೆ ನಾವು ಸುಮಾರು ಒಂದು ಕೋಟಿ ಜನರಿಗಾಗುವಷ್ಟು ಆಹಾರವನ್ನು ವ್ಯರ್ಥ ಮಾಡುತ್ತಿದ್ದೇವೆ ಎಂದು ಹೇಳುತ್ತದೆ.
ಲ್ಯಾಂಡ್‌ಫಿಲ್ಲಿಂಗ್‌ನಲ್ಲಿ ಉತ್ಪತ್ತಿಯಾಗುವ ಮೀಥೇನ್ ಮತ್ತು ತಾಪಮಾನ ಏರಿಕೆ
ಹೀಗೆ ಮದುವೆ ಹಾಲ್‌ಗಳಲ್ಲಿ ವ್ಯರ್ಥವಾಗುವ ಆಹಾರ, ಹಸಿ ತ್ಯಾಜ್ಯವಾಗಿ ನಗರ ಪಾಲಿಕೆ, ಮಹಾನಗರಪಾಲಿಕೆಗಳ ಕಸದ ವಾಹನವನ್ನು ಏರಿ ಗೊತ್ತುಪಡಿಸಿದ ಕಸವಿಲೇವಾರಿ ಸ್ಥಳಗಳನ್ನು ಸೇರುತ್ತವೆ. ಅಲ್ಲಿ ಸಾಮಾನ್ಯವಾಗಿ ಈ ಆಹಾರ ತ್ಯಾಜ್ಯವನ್ನು ಗುಂಡಿ ತೆಗೆದು ಹೂಳಲಾಗುತ್ತದೆ (ಲ್ಯಾಂಡ್ ಫಿಲ್). ಹೀಗೆ ಆಹಾರವು ಭೂಮಿಯಲ್ಲಿ ಹೂಳಲ್ಪಟ್ಟಾಗ, ಅದು ಆಮ್ಲಜನಕದ ಸಂಪರ್ಕವಿಲ್ಲದೆ ಕೊಳೆಯುತ್ತದೆ ಮತ್ತು ಮೀಥೇನ್ ಅನಿಲವನ್ನು ಉತ್ಪಾದಿಸುತ್ತದೆ. ಈ ರೀತಿಯಾಗಿ ವಿವಾಹ ಸಮಾರಂಭಗಳಲ್ಲಿ ವ್ಯರ್ಥವಾದ ಆಹಾರ ಭೂಮಿಯಲ್ಲಿ ಹೂಳಲ್ಪಟ್ಟು ವಾತಾವರಣದಲ್ಲಿ ಮೀಥೇನ್ ಹೊರಸೂಸುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತಿವೆ.
ವಾತಾವರಣದಲ್ಲಿ ತಾಪಮಾನ ಏರಿಸುವ ಅನಿಲಗಳ ಸಾಮರ್ಥ್ಯದ ಬಲಾಬಲವನ್ನು ಪರೀಕ್ಷಿಸಿದರೆ, ಭೂಗ್ರಹದ ತಾಪಮಾನ ಏರಿಸುವ ಪ್ರಮುಖ ಅನಿಲ ಇಂಗಾಲದ ಡೈಆಕ್ಸೈಡ್‌ಗಿಂತ ಮೀಥೇನ್ ಸರಿ ಸುಮಾರು 80 ಪಟ್ಟು ಹೆಚ್ಚು ಪ್ರಬಲವಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚಿಸಬಲ್ಲ ಹಸಿರುಮನೆ ಅನಿಲವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ಮೀಥೇನ್ ವಾತಾವರಣದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಉಳಿಯಬಲ್ಲ ಸಾಮರ್ಥ್ಯ ಹೊಂದಿದೆ. ಜಾಗತಿಕಮಟ್ಟದಲ್ಲಿ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವ ಅನಿಲಗಳ ಪಟ್ಟಿಯಲ್ಲಿ ಮೀಥೇನ್ ಕೂಡ ಇದೆ ಮತ್ತು ಅದರ ಪಾಲು ಸುಮಾರು 30 ಶೇಕಡಾದಷ್ಟು ಎಂದು ಅಂದಾಜಿಸಲಾಗಿದೆ.

ಅಮೇರಿಕಾದಂತಹ ದೇಶಗಳಲ್ಲಿ ಪೌರಾಡಳಿತ /ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಡುವ ಲ್ಯಾಂಡ್‌ಫಿಲ್ಲಿಂಗ್ (ಭೂಭರ್ತಿ, ಭೂಮಿಯಲ್ಲಿ ತುಂಬಿಸುವುದು, ಭೂ ಭರ್ತಿ)ಗಳು ಮೀಥೇನ್ ಹೊರಸೂಸುವಿಕೆಯ ಮೂರನೇ ಅತಿದೊಡ್ಡ ಮೂಲ ಎಂಬುದಾಗಿ ಸಾಬೀತಾಗಿದೆ. ಲ್ಯಾಂಡ್‌ಫಿಲ್‌ಗೆ ಹೋಗುವ ತ್ಯಾಜ್ಯಗಳ ಪೈಕಿಯಲ್ಲಿ ಆಹಾರ ತ್ಯಾಜ್ಯದ ಪಾಲು ಶೇಕಡಾ 24. ಇದು ತ್ವರಿತವಾಗಿ ಕೊಳೆಯುವ ಕಾರಣದಿಂದಾಗಿ ಲ್ಯಾಂಡ್‌ಫಿಲ್‌ನಲ್ಲಿ ಇರುವ ಇತರೆ ತ್ಯಾಜ್ಯಗಳ ಪೈಕಿ ಆಹಾರ ತ್ಯಾಜ್ಯವು ಹೆಚ್ಚಿನ ಪ್ರಮಾಣದ ಮೀಥೇನ್ ಹೊರಸೂಸುವಿಕೆಗೆ ಕಾರಣವಾಗುತ್ತದೆ.
ವಿಶ್ವದಾದ್ಯಂತ ಸಮಸ್ತ ಆಹಾರದ ಮೂರನೇ ಒಂದು ಭಾಗ ಆಹಾರ ವ್ಯರ್ಥವಾಗಿ ಕಸದ ಬುಟ್ಟಿ ಸೇರುತ್ತಿದ್ದರೆ, 22 ಕೋಟಿ ಭಾರತೀಯರು ಪ್ರತಿ ದಿನ ಹೊಟ್ಟೆಗೆ ಆಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಈ ಆಹಾರ ತ್ಯಾಜ್ಯದಲ್ಲಿ ಆಹಾರ ಪೂರೈಕೆಯ ವಿವಿಧ ಹಂತಗಳಲ್ಲಿ ವ್ಯರ್ಥವಾಗುವ ಆಹಾರವೂ ಸೇರಿದೆ. ಆಹಾರ ಪೂರೈಕೆಯ ಸರಪಳಿಯಲ್ಲಿ ಬರುವ ಉತ್ಪಾದಕರು, ಸಾಗಣೆದಾರರು, ಮಾರಾಟಗಾರರು ಮತ್ತು ಗ್ರಾಹಕರವರೆಗೆ ವಿವಿಧ ಹಂತದಲ್ಲಿಯೂ ಆಹಾರ ನಷ್ಟವಾಗುತ್ತದೆ. ಲ್ಯಾಂಡ್‌ಫಿಲ್‌ಗೆ ಹೋಗುವ ತ್ಯಾಜ್ಯಗಳಾದ ಪ್ಲಾಸ್ಟಿಕ್, ಪೇಪರ್, ಮರ ಹಾಗು ಗ್ಲಾಸಿನ ಸಾಮಗ್ರಿಗಳ ಪ್ರಮಾಣಕ್ಕೆ ಹೋಲಿಸಿದರೆ ಹೀಗೆ ವ್ಯರ್ಥವಾದ ಆಹಾರದ ಪಾಲೇ ಅಧಿಕ ಎನ್ನುತ್ತವೆ ಸಂಶೋಧನೆಗಳು. ಅದರೊಂದಿಗೆ ಹೀಗೆ ಲ್ಯಾಂಡ್‌ಫಿಲ್‌ನಲ್ಲಿ ಆಹಾರ ಕೊಳೆಯುವುದರಿಂದ ಹೊರಬರುವ ಹಸಿರುಮನೆ ಅನಿಲಗಳ ಪ್ರಮಾಣ ವಾಯುಮಾಲಿನ್ಯದಿಂದಾಗಿ ಉಂಟಾಗುವ ಇಂಗಾಲದ ಹೊರಸೂಸುವಿಕೆಗಿಂತ 5 ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ.
ಪೋಲಾಗುತ್ತಿರುವ ಆಹಾರ ಮತ್ತು ಹೆಚ್ಚುತ್ತಿರುವ ಹಸಿವಿನ ತೀವ್ರತೆ
ಸಾಮಾನ್ಯವಾಗಿ ನಾವು ಬಿಸಾಡುವ ಆಹಾರದಲ್ಲಿ ಸೇವಿಸಲು ಅನರ್ಹ ಎನ್ನುವ ಆಹಾರದ ಪಾಲು ತೀರಾ ಕಮ್ಮಿ. ಹೆಚ್ಚಾಗಿ ನಾವು ಸೇವನಾ ಯೋಗ್ಯವಾದ ಆಹಾರವನ್ನೇ ಹೆಚ್ಚು ಬಿಸುಟು ಬಿಡುತ್ತೇವೆ ಅದಕ್ಕೆ ಉತ್ತಮ ಉದಾಹರಣೆ ಮದುವೆ ರೀತಿಯ ಕಾರ್ಯಕ್ರಮ ಮತ್ತು ಇತರ ಭೋಜನ ಕೂಟಗಳು. ಎಷ್ಟೋ ಬಾರಿ ಮಿಕ್ಕಿದ ಆಹಾರವನ್ನು ವಿಲೇವಾರಿ ಮಾಡುವ ಆಲೋಚನೆಗಳು ಬಂದರೂ ಅದನ್ನು ಎಲ್ಲಿ, ಹೇಗೆ ವಿಲೇವಾರಿ ಮಾಡಬೇಕು ಅನ್ನುವ ಗೊಂದಲಗಳು ಬಿಸಾಡುವುದೇ ಸುಲಭ ಎನ್ನು ತೀರ್ಮಾನಕ್ಕೆ ಬರುವಂತೆ ಮಾಡಿಬಿಡುತ್ತವೆ.
ಪ್ರತಿ ವರ್ಷ ಜಾಗತಿಕವಾಗಿ ಒಂದು ಬಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತಿರುವುದರಿಂದ, ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಆಹಾರ ಅಭದ್ರತೆಯನ್ನು ಅನುಭವಿಸುತ್ತಾರೆ. ಇವುಗಳಲ್ಲಿ, 783 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ.

ಜಾಗತಿಕ ಹಸಿವು ಸೂಚ್ಯಂಕ ಆಹಾರ ಕೊರತೆಯಿಂದ ಬಳಲುತ್ತಿವೆ ಎಂದು ಗುರುತಿಸಿರುವ 127 ದೇಶಗಳ ಪೈಕಿ ಭಾರತ 105 ನೇ ಸ್ಥಾನದಲ್ಲಿದೆ ಎಂದು ಹೇಳುತ್ತಿದೆ. ಇಲ್ಲಿ ಹಸಿವಿನ ತೀವ್ರತೆ ಗಂಭೀರ ಮಟ್ಟದಲ್ಲಿದೆ ಎಂಬುದಾಗಿಯೂ ವರದಿಯೂ ಕಳವಳ ವ್ಯಕ್ತಪಡಿಸಿದೆ. ಹೀಗೆ ಹಸಿವೆಯ ಸೂಚ್ಯಂಕ ಹೆಚ್ಚಿರುವ ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಜನರು ನರಳುತ್ತಿರುವ ದೇಶದಲ್ಲಿ ಆಹಾರ ಹೀಗೆ ಪೋಲಾಗುತ್ತಿರುವುದು ದುರಂತ. ಎಸೆದ ಆಹಾರ ತ್ಯಾಜ್ಯವನ್ನು ಒಂದು ದೇಶ ಎಂದು ಪರಿಗಣಿಸಿದರೆ, ಅದು ಅಮೇರಿಕಾ ಚೀನಾದ ನಂತರ ವಿಶ್ವದ ಮೂರನೇ ಅತಿದೊಡ್ಡ ಹಸಿರುಮನೆ ಅನಿಲ ಹೊರಸೂಸುವ ದೇಶವಾಗುತ್ತಿತ್ತು ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಆಹಾರ ತ್ಯಾಜ್ಯ ಕೇವಲ ಹವಾಮಾನದ ಮೇಲೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ.
ಭಾರತದಲ್ಲಿ ಲ್ಯಾಂಡ್ ಫಿಲ್ ವಿಲೇವಾರಿ ನಿಯಮಗಳು
ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ಈ ಸಾವಯವ ತ್ಯಾಜ್ಯಗಳನ್ನು ಲ್ಯಾಂಡ್‌ಫಿಲ್ ವಿಧಾನದಲ್ಲಿ ವಿಲೇವಾರಿ ಮಾಡುವುದನ್ನು ನಿಷೇಧಿಸಲಾಗಿದೆ. ಭಾರತದಲ್ಲಿಯೂ ತ್ಯಾಜ್ಯವನ್ನು ಹೂಳುವುದನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಹೊರಡಿಸಿದ ಘನತ್ಯಾಜ್ಯ ನಿರ್ವಹಣಾ ನಿಯಮ 2016 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತಿದೆ. ತ್ಯಾಜ್ಯವನ್ನು ಜೈವಿಕ ವಿಘಟನೀಯ (ಬಯೋ ಡಿಗ್ರೇಡೇಬಲ್), ಜೈವಿಕ ವಿಘಟನೀಯವಲ್ಲದ (ನಾನ್ ಬಯೋ ಡಿಗ್ರೇಡೇಬಲ್) ಮತ್ತು ಅಪಾಯಕಾರಿ ತ್ಯಾಜ್ಯ (ಹೆಸಾರ್ಡಸ್ ವೇಸ್ಟ್) ಎಂದು ವಿಂಗಡಿಸಿದ ಬಳಿಕ ಮರುಬಳಕೆಗೆ ಪ್ರಥಮ ಆದ್ಯತೆ ನೀಡಿ ಮರುಬಳಕೆ ಮಾಡಲಾಗದ ತ್ಯಾಜ್ಯಗಳನ್ನು ಲ್ಯಾಂಡ್‌ಫಿಲ್‌ಗೆ ಕಳುಹಿಸಲಾಗುತ್ತದೆ. ಅಪಾಯಕಾರಿ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಮತ್ತು ಮರುಬಳಕೆ ಮಾಡಬಹುದಾದ ತ್ಯಾಜ್ಯಗಳನ್ನು ಲ್ಯಾಂಡ್‌ಫಿಲ್‌ಗೆ ಕಳುಹಿಸಬಾರದು ಎಂಬ ನಿಯಮಗಳಿದ್ದು ಅದನ್ನು ಪ್ರತ್ಯೇಕ ನಿಯಮಗಳಡಿಯಲ್ಲಿ ನಿರ್ವಹಿಸಲಾಗುತ್ತದೆ.
ಭೂಕುಸಿತಗಳು ಸಂಭವಿಸಬಹುದಾದ ಸ್ಥಳಗಳು, ಜನರ ವಾಸಸ್ಥಳ, ಜಲಮೂಲಗಳು, ಪ್ರವಾಹ ಪೀಡಿತ ಪ್ರದೇಶಗಳು, ಹೆದ್ದಾರಿಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಿಂದ ದೂರವಿರಬೇಕಾದ ಲ್ಯಾಂಡ್‌ಫಿಲ್ಲಿಂಗ್ ಪ್ರದೇಶಗಳಲ್ಲಿ ಇಲ್ಲಿ ಹೊರಬರುವ ಮೀಥೇನ್ ಹೊರಸೂಸುವಿಕೆಯನ್ನು ನಿರ್ವಹಿಸಲು ಅನಿಲ ಸಂಗ್ರಹ ವ್ಯವಸ್ಥೆಗಳು ಇರಬೇಕಾಗುತ್ತದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ಮಾಲಿನ್ಯ ನಿಯಂತ್ರಣ ಸಮಿತಿಗಳು ಈ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವುದರೊಂದಿಗೆ, ಇಲ್ಲಿ ಪರಿಸರ ಮಾನದಂಡಗಳನ್ನು ಸೂಕ್ತವಾಗಿ ಅನುಸರಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಭಾರತವು ವಾರ್ಷಿಕವಾಗಿ ಸುಮಾರು 62 ಮಿಲಿಯನ್ ಟನ್ ಘನತ್ಯಾಜ್ಯವನ್ನು ಉತ್ಪಾದಿಸುತ್ತದೆ, ಅದರಲ್ಲಿಇದರಲ್ಲಿ 70 ಶೇಕಡಾ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ, 12 ಮಿಲಿಯನ್ ಟನ್‌ಗಳನ್ನು ಸಂಸ್ಕರಿಸಲಾಗುತ್ತದೆ ಮತ್ತು 31 ಮಿಲಿಯನ್ ಟನ್‌ಗಳನ್ನು ಲ್ಯಾಂಡ್ ಫಿಲ್ಲಿಂಗ್ ಮಾಡಲಾಗುತ್ತದೆ. ಈಗಾಗಲೇ ಭೂಮಿಯ ಅಲಭ್ಯತೆಯಿಂದಾಗಿ ಲ್ಯಾಂಡ್ ಫಿಲ್ಲಿಂಗ್ ಸಮಸ್ಯೆಯಾಗಿದೆ. ಅದರೊಂದಿಗೆ ಅತಿಯಾದ ಬಳಕೆಯಿಂದಾಗಿ ಅಪಾಯಕಾರಿ ತ್ಯಾಜ್ಯ ಮತ್ತು ಇ- ತ್ಯಾಜ್ಯದ ವಿಲೇವಾರಿಯೂ ಗಮನಾರ್ಹ ಸಮಸ್ಯೆಯಾಗಿದೆ.
2016 ರ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ, ಭಾರತದಲ್ಲಿ ವ್ಯರ್ಥವಾಗುವ ಆಹಾರ ಲ್ಯಾಂಡ್‌ಫಿಲ್‌ಗೆ ಕಳುಹಿಸುವಂತಿಲ್ಲ. ಅದನ್ನು ಕಾಂಪೋಸ್ಟಿಂಗ್ ಅಥವಾ ಬಯೋಮಿಥನೇಷನ್‌ಗೆ (ಬಯೋ ಗ್ಯಾಸ್‌ಗೆ ಪರಿವರ್ತಿಸುವುದು) ಒಳಪಡಿಸಬೇಕು. ಆದರೆ ಅಸಮರ್ಪಕ ಮೂಲಸೌಕರ್ಯ ಮತ್ತು ತ್ಯಾಜ್ಯ ವಿಂಗಡಣೆಯಲ್ಲಿರುವ ಪ್ರಾಯೋಗಿಕ ಸವಾಲುಗಳಿಂದಾಗಿ, ಆಹಾರ ತ್ಯಾಜ್ಯವು ಇನ್ನೂ ಲ್ಯಾಂಡ್‌ಫಿಲ್ ಅಥವಾ ತೆರೆದ ಪ್ರದೇಶದಲ್ಲಿ ವಿಲೇವಾರಿಯಾಗುತ್ತಿದೆ.
ಹೊಸ ಸಹಜತೆಯತ್ತ ಗ್ರೀನ್ ವೆಡ್ಡಿಂಗ್ (Green wedding)
ಈ ಎಲ್ಲಾ ಸವಾಲುಗಳ ನಡುವೆ ಆಶಾಕಿರಣವೆಂಬಂತೆ ಇತ್ತೀಚೆಗೆ ಮಹಾನಗರಗಳಲ್ಲಿ ಯುವಜನರಲ್ಲಿ ಹಸಿರು ವಿವಾಹಗಳು (ಗ್ರೀನ್ ವೆಡ್ಡಿಂಗ್) ಸಾಕಷ್ಟು ಜನಪ್ರಿಯವಾಗುತ್ತಿವೆ. ಮದುವೆಯಲ್ಲಿ ಬಳಸಿದ ಹೂವುಗಳನ್ನು ಮತ್ತು ಆಹಾರ ತ್ಯಾಜ್ಯವನ್ನು ಗೊಬ್ಬರವಾಗಿ ಮತ್ತು ಜೈವಿಕ ಅನಿಲವಾಗಿ ಪರಿವರ್ತಿಸುವ, ಸೋಲಾರ್ ವಿದ್ಯುತ್ ವ್ಯವಸ್ಥೆಯುಳ್ಳ, ಮಿಕ್ಕುಳಿದ ಆಹಾರವನ್ನು ಸ್ಥಳೀಯ ಎನ್‌ಜಿಒಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಹೊಂದಿರುವ ಹೋಟೆಲ್‌ಗಳು ಹೆಚ್ಚು ಹೆಚ್ಚು ಮನ್ನಣೆ ಪಡೆಯುತ್ತಿವೆ.
ಇದರೊಂದಿಗೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ, ಪರಿಸರ ಸ್ನೇಹಿ ವಸ್ತುಗಳಿಗೆ ಹೆಚ್ಚು ಆದ್ಯತೆ, ಸಾವಯವ ಆಹಾರ ಪದಾರ್ಥಗಳ ಬಳಕೆ, ಮೆರವಣಿಗೆಗೆ ವಿದ್ಯುತ್ ಚಾಲಿತ ವಾಹನಗಳ ಬಳಕೆ, ಮಿತ ನೀರು ಮತ್ತು ವಿದ್ಯುತ್ ಬಳಕೆ ಈ ಗ್ರೀನ್ ವೆಡ್ಡಿಂಗ್‌ನತ್ತ ಯುವಜನರನ್ನು ಆಕರ್ಷಿಸುತ್ತಿವೆ.
ನಾವು ಸೃಷ್ಟಿಸಿದ ತ್ಯಾಜ್ಯವನ್ನು ಸಮರ್ಥವಾಗಿ ವಿಲೇವಾರಿ ಮಾಡುವ ಮಾರ್ಗೋಪಾಯಗಳು ಮತ್ತು ವಿಧಾನಗಳನ್ನು ಹುಡುಕುವ ಬದಲು ನಾವು ಉತ್ಪಾದಿಸುವ ತ್ಯಾಜ್ಯವನ್ನೇ ಮಿತಗೊಳಿಸುವ ಉದ್ಧೇಶದಿಂದ ಸರ್ಕಾರಗಳೂ ಹಸಿರು ಶಿಷ್ಟಾಚಾರ (ಗ್ರೀನ್ ಪ್ರೋಟೋಕಾಲ್) ರೂಪಿಸಲು ಮತ್ತು ಅಳವಡಿಸಲು ಪ್ರಾಮುಖ್ಯತೆ ನೀಡುತ್ತಿವೆ. ಇಲ್ಲಿ ತ್ಯಾಜ್ಯವನ್ನು ವಿಂಗಡಿಸುವುದು, ಅದನ್ನು ಮರುಬಳಕೆ ಮಾಡುವುದು ಮತ್ತು ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹಸಿರು ಶಿಷ್ಟಾಚಾರವನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ, ಕಚೇರಿ, ಸಾರ್ವಜನಿಕ ಸಮಾರಂಭಗಳು, ಮದುವೆಗಳು, ಹಬ್ಬಗಳು ಹೀಗೆ ಎಲ್ಲಾ ಹಂತಗಳಲ್ಲಿ ಅನುಸರಿಸಲು ಆದ್ಯತೆ ನೀಡಬೇಕಾಗಿದೆ. ನಾಗರಿಕ ಪ್ರಜ್ಞೆಯಿಂದ ಕೂಡಿದ ಪ್ರಾಮಾಣಿಕ ಪ್ರಯತ್ನಗಳನ್ನು ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಮಟ್ಟದಲ್ಲಿ ಮಾಡಿದಾಗ ಹಸಿರು ಪ್ರಣಾಳಿಕೆಯ ಧ್ಯೇಯೋದ್ದೇಶಗಳು ಸಾಕಾರಗೊಳ್ಳುತ್ತವೆ.
ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ತ್ಯಾಜ್ಯ ತೆರಿಗೆಯನ್ನು ವಿಧಿಸಲಾಗುತ್ತದೆ. ಅದೇ ರೀತಿ ಭಾರತದಲ್ಲಿಯೂ ಗರಿಷ್ಠ ತ್ಯಾಜ್ಯ ಮಿತಿಯನ್ನು ಮಿತಿಗೊಳಿಸಿ ಅದಕ್ಕಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸವವರಿಗೆ ತ್ಯಾಜ್ಯ ತೆರಿಗೆ ವಿಧಿಸಬಹುದು. ಇದರಿಂದ ಬರುವ ಆದಾಯವನ್ನು ತಾಜ್ಯ ನಿರ್ವಹಣೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದು.
ಇಷ್ಟೆಲ್ಲ ಬರೆಯುವ ಹೊತ್ತಿಗೆ ಅಮೆಜಾನ್ ಸಂಸ್ಥೆಯ ಸ್ಥಾಪಕ, ಮುಖ್ಯಸ್ಥ ಜೆಫ್ ಬೇಜಾಸ್ ಅದ್ದೂರಿ ಮದುವೆ ವಿಶ್ವಾದ್ಯಂತ ಸುದ್ದಿ ಮಾಡಿದೆ. ಸುಮಾರು 427 ಕೋಟಿ ವೆಚ್ಚದ ಮದುವೆ ಅದು. ಪ್ರತಿ ಊಟಕ್ಕೆ ಮಾಡಲಾದ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿ. ಇದರಿಂದ ಪ್ರಭಾವಿತಗೊಳ್ಳಲಿರುವವರ ಸಂಖ್ಯೆ ಎಷ್ಟೋ!

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ