- ಶಾಸಕ ತನ್ವೀರ್ ಸೇಠ್‌ಗೂ ಮತ್ತು ಪುಲಕೇಶಿ ನಗರಕ್ಕೂ ಏನು ಸಂಬಂಧ?
- ‘ನ್ಯಾಯ ಕೋರಿ ಸರ್ಕಾರ, ನ್ಯಾಯಾಲಯಕ್ಕೆ ಮತ್ತೆ ಮನವಿ ಸಲ್ಲಿಸುವೆ’
ಶಾಸಕ ತನ್ವೀರ್ ಸೇಠ್ ಅವರಿಗೂ ಮತ್ತು ಪುಲಕೇಶಿ ನಗರಕ್ಕೂ ಏನು ಸಂಬಂಧ? ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ಬಿಡುಗಡೆ ಕೋರಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಇದರ ಹಿಂದೆ ಪ್ರಕರಣದ ಕಿಂಗ್ ಪಿನ್ ಅನ್ನು ರಕ್ಷಿಸುವ ಹುನ್ನಾರ ಇದೆ ಎಂದು ಪುಲಕೇಶಿ ನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆರೋಪಿಸಿದರು.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “2020 ಆಗಸ್ಟ್ 20ರಲ್ಲಿ ನನ್ನ ಮನೆಗೆ ಬೆಂಕಿ ಹಾಕಲಾಯಿತು. ನಂತರ ದುಷ್ಕರ್ಮಿಗಳು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದರು. ತನಿಖೆ ನಡೆಸಿದ ಪೊಲೀಸರು ಮತ್ತು ಎನ್‌ಐಎ ಕೆಲವರನ್ನು ಬಂಧಿಸಿ, ಅಮಾಯಕರನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಅಮಾಯಕರನ್ನು ಬಿಡುಗಡೆ ಮಾಡಿ ಎಂದು ನಾನು ಈ ಹಿಂದೆಯೂ ಹೇಳಿರುವೆ. ಆದರೆ, ಕೆಲವರನ್ನು ರಕ್ಷಿಸಲು ಅಮಾಯಕರ ಬಿಡುಗಡೆ ಎಂಬ ಅಸ್ತ್ರ ಉಪಯೋಗಿಸಲಾಗುತ್ತಿದೆ” ಎಂದರು.
“ಈಗಾಗಲೇ ಈ ಪ್ರಕರಣ ನ್ಯಾಯಾಲಯ ತನಿಖೆಯಲ್ಲಿದೆ. ನನ್ನ ವಕೀಲರ ಜೊತೆ ಚರ್ಚೆ ಮಾಡಿ ಸರ್ಕಾರ ಮತ್ತು ನ್ಯಾಯಾಲಯಕ್ಕೆ ನಾನು ಕೂಡ ಮತ್ತೆ ಮನವಿ ಮಾಡುವೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು. ನನ್ನ ಸೋಲಿಸಲು ಬಂದ ಕಾಂಗ್ರೆಸ್‌ನ ಹಿರಿಯ ನಾಯಕರು ಈ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂತ್ರಾಲಯದಲ್ಲಿ ರಾಮನ ವಿಗ್ರಹ; ಆಂಧ್ರದಲ್ಲಿ ಬಿಜೆಪಿಯ ಪ್ರತಿಮಾ ರಾಜಕಾರಣ
“ಈ ತನ್ವೀರ್ ಸೇಠ್ ಮೈಸೂರಿನವರು. ಪುಲಕೇಶಿ ನಗರಕ್ಕೆ ಹೇಗೆ ಸಂಬಂಧ ಪಡುತ್ತಾರೆ. 2018ರಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮತ ಪಡೆದು ಗೆದ್ದಿದ್ದೆ. ಆದರೆ, ಈ ಚುನಾವಣೆಯಲ್ಲಿ ನನಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಯಿತು. ಕೊನೆಗೆ ತಂತ್ರ ರೂಪಿಸಿ ನನ್ನ ಸೋಲಿಸಿದರು. ಈಗ ಅವರೆಲ್ಲರೂ ಕಾಂಗ್ರೆಸ್‌ನ ಹಿರಿಯ ನಾಯಕರ ಜೊತೆ ಸುತ್ತಾಡುತ್ತಾರೆ” ಎಂದು ಆರೋಪಿಸಿದರು.
“ಮೂಲ ಆರೋಪಿಯನ್ನು ಬಿಡುಗಡೆ ಮಾಡಲು ಪಿತೂರಿ ನಡೆಸಿರುವ ಹುನ್ನಾರ ನನಗೆ ಕಾಣುತ್ತಿದೆ. ಹೀಗಾಗಿ ಮಾಧ್ಯಮಗಳ ಮುಂದೆ ಬಂದು ನ್ಯಾಯ ಕೇಳುತ್ತಿರುವೆ. ನಾನೂ ಒಬ್ಬ ದಲಿತ. ನನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಿಕೊಳ್ಳುವೆ” ಎಂದರು.
ಯಾರಿಗೂ ಅನ್ಯಾಯ ಆಗಲ್ಲ, , ನಿಮಗೆ ಅನ್ಯಾಯ ಆಗಿದ್ದರೆ ನೇರವಾಗಿ ಸಂಬಂಧ ಪಟ್ಟ ಅಧಿಕಾರಗಳಲಿ ಮಾತನಾಡಿ.