ಸಂವಿಧಾನ ಪೀಠಿಕೆಯಿಂದ ಸಮಾಜವಾದ, ಜಾತ್ಯತೀತ ಪದ ತೆಗೆಯಬೇಕು ಎಂದು ಹೇಳಿಕೆ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ವಿರುದ್ಧ ಭಾರತೀಯ ಯುವ ಕಾಂಗ್ರೆಸ್(ಐವೈಸಿ) ಕಾನೂನು ವಿಭಾಗದ ಕರ್ನಾಟಕ ಘಟಕವು ಭಾನುವಾರ ದೂರು ದಾಖಲಿಸಿದೆ.
ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಾನೂನು ವಿಭಾಗದ ಅಧ್ಯಕ್ಷ ಶ್ರೀಧರ್, ಸಹ-ಅಧ್ಯಕ್ಷ ಸಮೃದ್ಧ್ ಹೆಗ್ಡೆ ಮತ್ತು ಇತರ ಪದಾಧಿಕಾರಿಗಳು ಮತ್ತು ವಕೀಲರು ದೂರು ದಾಖಲಿಸಿದ್ದಾರೆ.
ಜೂನ್ 26ರಂದು ತುರ್ತು ಪರಿಸ್ಥಿತಿಯ ದಿನ ಹಿನ್ನೆಲೆ ನಡೆದ ಸಾರ್ವಜನಿಕ ಸಭೆಯಲ್ಲಿ ಹೊಸಬಾಳೆ ಸಮಾಜವಾದ, ಜಾತ್ಯತೀತ ಪದಗಳನ್ನು ಮರುಪರಿಶೀಲಿಸಿ ತೆಗೆದುಹಾಕುವಂತೆ ಕರೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಇಂಡಿ | ಸಂವಿಧಾನ ಸಮರ್ಪಣಾ ದಿನಾಚರಣೆ; ಸಂವಿಧಾನ ಪೂರ್ವ ಪೀಠಿಕೆ ಓದಿದ ಮಕ್ಕಳು
“2025ರ ಜೂನ್ 26ರಂದು ತುರ್ತು ಪರಿಸ್ಥಿತಿಯನ್ನು ಸ್ಮರಿಸುವ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಹೊಸಬಾಳೆ ಅವರು ಸಂವಿಧಾನದ ಪೀಠಿಕೆಯಲ್ಲಿನ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಮರುಪರಿಶೀಲಿಸಬೇಕು ಮತ್ತು ತೆಗೆದುಹಾಕಬೇಕು ಎಂದು ಬಹಿರಂಗವಾಗಿ ಹೇಳಿದ್ದಾರೆ. ಒಂದು ಸಂಘಟನೆಯ ಉನ್ನತ ಶ್ರೇಣಿಯ ಸಿದ್ಧಾಂತವಾದಿ ರಾಜಕೀಯವಾಗಿ ಸೂಕ್ಷ್ಮ ಕಾರ್ಯಕ್ರಮವೊಂದರಲ್ಲಿ ನೀಡಿದ ಈ ಹೇಳಿಕೆಗಳು ಕೇವಲ ಸೈದ್ಧಾಂತಿಕ ವ್ಯಾಖ್ಯಾನವಲ್ಲ” ಎಂದು ಶ್ರೀಧರ್ ಹೇಳಿದ್ದಾರೆ.
“ಸಾರ್ವಜನಿಕವಾಗಿ ಸಾಂವಿಧಾನಿಕ ಮೌಲ್ಯಗಳನ್ನು ಕುಗ್ಗಿಸುವ ಇಂತಹ ಪ್ರಯತ್ನಗಳನ್ನು ಅತ್ಯಂತ ಗಂಭೀರತೆಯಿಂದ ಪರಿಗಣಿಸಬೇಕು. ಯಾರೂ ಸಂವಿಧಾನಕ್ಕಿಂತ ಮೇಲಲ್ಲ. ಈ ರೀತಿಯ ಹೇಳಿಕೆಗಳಿಗೆ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸಬೇಕು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಭಾನುವಾರ ಸಿಪಿಐ(ಎಂ) ರಾಜ್ಯಸಭಾ ಸಂಸದ ಸಂದೋಷ್ ಕುಮಾರ್ ಅವರು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ. ಕುಮಾರ್ ಅವರು ಈ ಪತ್ರದಲ್ಲಿ ಹೊಸಬಾಳೆಯವರ ಹೇಳಿಕೆಯನ್ನು ಟೀಕಿಸಿದ್ದು, “ಈ ತತ್ವಗಳನ್ನು ಪ್ರಶ್ನಿಸಿ ಮತ್ತು ಅವು ಭಾರತದ ಬಹುತ್ವ ಮತ್ತು ನ್ಯಾಯಯುತ ಸಮಾಜಕ್ಕೆ ಅತ್ಯಗತ್ಯ” ಎಂದು ವಾದಿಸಿದ್ದಾರೆ.
