ಆರೋಗ್ಯ ಹಕ್ಕು ಮಸೂದೆ ವಿರುದ್ಧ ರಾಜಸ್ಥಾನದ ವೈದ್ಯರೇಕೆ ತಿರುಗಿ ಬಿದ್ದಿದ್ದಾರೆ?

Date:

Advertisements
ಆರೋಗ್ಯ ಹಕ್ಕು ಮಸೂದೆ ವಿರುದ್ಧ ರಾಜಸ್ಥಾನದ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಇರುವ ತಕರಾರೇನು? ಜನಪರ ಎಂದು ಹೇಳಲಾಗಿರುವ ಮಸೂದೆಯಿಂದ ವೈದ್ಯರಿಗೆ ಸಮಸ್ಯೆಯಾಗಲಿದೆಯೆ? ಒಂದು ವಿಶ್ಲೇಷಣೆ

ರಾಜಸ್ಥಾನದ ಸಾವಿರಾರು ವೈದ್ಯರು ಸೋಮವಾರದಿಂದ (ಮಾರ್ಚ್ 27) ಬೀದಿಗಿಳಿದು ಸರ್ಕಾರದ ಹೊಸ ಆರೋಗ್ಯ ಹಕ್ಕು ಮಸೂದೆ ವಿರುದ್ಧ ಪ್ರತಿಭಟಿಸುತ್ತಿರುವುದು ರಾಜ್ಯಾದ್ಯಂತ ಆರೋಗ್ಯ ಸೇವೆ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶದ ವೈದ್ಯರ ಅತಿದೊಡ್ಡ ಸಂಘಟನೆಯಾಗಿರುವ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ರಾಜಸ್ಥಾನವ ವೈದ್ಯರ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.

ಕಳೆದ ವಾರ ರಾಜಸ್ಥಾನದ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಆರೋಗ್ಯ ಹಕ್ಕು ಮಸೂದೆ ಒಂದು ಕ್ರೂರ ಮಸೂದೆ ಎಂದು ವೈದ್ಯರು ಕರೆದರೆ, ರಾಜ್ಯ ಸರ್ಕಾರದ ಪ್ರಕಾರ ವೈದ್ಯರು ಮುಂದಿಟ್ಟಿರುವ ಕುಂದುಕೊರತೆಗಳನ್ನು ನೀಗಿಸಿ ಮಸೂದೆಯ ಇತ್ತೀಚೆಗಿನ ಆವೃತ್ತಿ ಸಿದ್ಧವಾಗಿದೆ.

ಮಸೂದೆ ವಿರುದ್ಧ ಪ್ರತಿಭಟನೆ ಏಕೆ?

Advertisements

ಪ್ರತಿಭಟನಾಕಾರರು ಆರೋಗ್ಯ ಹಕ್ಕು ಮಸೂದೆಯಲ್ಲಿ ವಿರೋಧಿಸುತ್ತಿರುವ ಪ್ರಮುಖ ಅಂಶವೆಂದರೆ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯವಿದ್ದಾಗ ಪೂರ್ವ ಪಾವತಿಯಿಲ್ಲದ ತುರ್ತು ಚಿಕಿತ್ಸೆ ಕೊಡಬೇಕು ಎನ್ನುವ ನಿಯಮ.

ಸೋಮವಾರ ರಾಜಸ್ಥಾನದ ಪ್ರತಿಭಟನೆಯಲ್ಲಿ ಭಾಗವಹಿಸಿದ ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ ಶರದ್ ಕುಮಾರ್ ಅಗರ್‌ವಾಲ್, “ಆರೋಗ್ಯ ಪ್ರತಿ ಪ್ರಜೆಯ ಹಕ್ಕು. ಆದರೆ ಅದನ್ನು ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ, ಅದಕ್ಕೆ ಆ ಶಕ್ತಿಯಿದೆ. ಸರ್ಕಾರ ತಮ್ಮ ಆಸ್ಪತ್ರೆಗಳಲ್ಲಿ ಬೆಡ್ ಒಂದಕ್ಕೆ ರೂ 20,000ದಿಂದ ರೂ 40,000ವರೆಗೆ ಖರ್ಚು ಮಾಡುತ್ತದೆ.  ನಮಗೆ ಇಷ್ಟು ಹಣ ಯಾರು ಒದಗಿಸುತ್ತಾರೆ? ಈ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಆರೋಗ್ಯ ಹಕ್ಕು ಮಸೂದೆ ಹೇಳುವುದಿಲ್ಲ. ಈ ಕ್ರೂರ ಮಸೂದೆಯನ್ನು ಮರುಪಡೆಯುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಹೇಳಿದ್ದಾರೆ.

ಮಸೂದೆ ಇಂತಹ ವೆಚ್ಚವನ್ನು ಸರ್ಕಾರ ಭರಿಸಲಿದೆ ಎನ್ನುವ ಭರವಸೆ ಕೊಡಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳಿಗೆ ಅನುದಾನ ಹೇಗೆ ಬರಲಿದೆ ಎನ್ನುವ ಸ್ಪಷ್ಟತೆಯಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.

ಮಸೂದೆ ವಿರುದ್ಧ ವೈದ್ಯರ ಆಕ್ಷೇಪಗಳೇನು?

ರೋಗಿಗಳ ಕುಂದುಕೊರತೆ ಆಲಿಕೆ ಸಂಬಂಧಿಸಿ ಮಸೂದೆ ಮುಂದಿಟ್ಟಿರುವ ವಿವರಗಳ ಬಗ್ಗೆಯೂ ವೈದ್ಯರ ಆಕ್ಷೇಪವಿದೆ.

ತುರ್ತು ಚಿಕಿತ್ಸೆ ಎಂದರೇನು ಎನ್ನುವ ಬಗ್ಗೆ ಸ್ಪಷ್ಟ ವ್ಯಾಖ್ಯಾನವನ್ನು ಆರೋಗ್ಯ ಹಕ್ಕು ಮಸೂದೆ ನೀಡದೆ ಇರುವುದು ಗೊಂದಲಕ್ಕೆ ಕಾರಣವಾಗಲಿದೆ. ಸರ್ಕಾರ ವೆಚ್ಚವನ್ನು ಮರುಪಾವತಿ ಮಾಡುವುದು ಹೇಗೆ ಎನ್ನುವ ಸ್ಪಷ್ಟ ವಿವರಣೆಯೂ ಇಲ್ಲ. ಅಲ್ಲದೆ, ಯಾವ ಕ್ಲಿನಿಕ್‌ಗಳು ಯಾರಿಗೆ ಚಿಕಿತ್ಸೆ ನೀಡಬೇಕು ಎನ್ನುವ ವಿವರಣೆಯೂ ಇಲ್ಲ. ಕಣ್ಣಿನ ಆಸ್ಪತ್ರೆ ಹೃದಯಾಘಾತಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎನ್ನುವುದು ವೈದ್ಯರ ವಿರೋಧವಾಗಿದೆ.

ಆದರೆ, ಅಂತಿಮವಾಗಿ ವಿಧಾನಸಭೆಯ ಮುಂದಿಟ್ಟಿರುವ ಮಸೂದೆ ತುರ್ತುಚಿಕಿತ್ಸೆ ಎಂದರೆ ಯಾವುದು ಎನ್ನುವ ಬಗ್ಗೆ ಸ್ಪಷ್ಟ ವಿವರ ಹೊಂದಿದೆ. ಜೊತೆಗೆ ರಾಜ್ಯ ಆರೋಗ್ಯ ಪ್ರಾಧಿಕಾರ ಕಾಲಕಾಲಕ್ಕೆ ನಿರ್ಧರಿಸುವ ಇತರೆ ಚಿಕಿತ್ಸೆಗಳು ಎಂಬ ವಿವರವಿದೆ. ಆರೋಗ್ಯ ಹಕ್ಕು ಮಸೂದೆ ಕಾಯ್ದೆಯಾದಾಗ ನಿಯಮ ಸಿದ್ಧಪಡಿಸಿದಾಗ ಹೆಚ್ಚಿನ ಸ್ಪಷ್ಟನೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಆರೋಗ್ಯ ಹಕ್ಕು ಮಸೂದೆ ಸಂಬಂಧಿಸಿ ಕುಂದುಕೊರತೆ ಆಲಿಕೆಗೆ ಸ್ಥಳೀಯ ರಾಜಕಾರಣಿಗಳು ಮತ್ತು ಸರ್ಕಾರ ನಾಮನಿರ್ದೇಶಿಸಿದ ಸದಸ್ಯರು ಇರುವ ಜಿಲ್ಲಾ ಪ್ರಾಧಿಕಾರವನ್ನು ರಚಿಸುವ ಬಗ್ಗೆಯೂ ವೈದ್ಯರ ವಿರೋಧವಿದೆ. ರಾಜ್ಯಮಟ್ಟದ ಕುಂದುಕೊರತೆ ಆಲಿಕೆ ಪ್ರಾಧಿಕಾರ ಬೇಕೆಂದು ವೈದ್ಯರು ಬೇಡಿಕೆ ಇಟ್ಟಿದ್ದಾರೆ.

ಸರ್ಕಾರ ಇದಕ್ಕೂ ಒಪ್ಪಿಕೊಂಡಿದ್ದು, ಪ್ರಾಧಿಕಾರದಲ್ಲಿ ಸರ್ಕಾರದ ಇಬ್ಬರು ಸದಸ್ಯರು ಮತ್ತು ಐಎಂಎನ ಇಬ್ಬರು ಸದಸ್ಯರು ರಾಜ್ಯ ಆರೋಗ್ಯ ಪ್ರಾಧಿಕಾರ ಮತ್ತು ಜಿಲ್ಲಾ ಆರೋಗ್ಯ ಪ್ರಾಧಿಕಾರಗಳಲ್ಲಿ ಇರುತ್ತಾರೆ ಎಂದು ಹೇಳಿದೆ.

ಮಾಧ್ಯಮಗಳ ಪ್ರಕಾರ ಆರೋಗ್ಯ ಸೇವೆಗಳಲ್ಲಿ ಸುಧಾರಣೆಗಾಗಿ ಕಾರ್ಯನಿರತರಾಗಿರುವ ಅನೇಕ ಸಾಮಾಜಿಕ ಕಾರ್ಯಕರ್ತರು ವೈದ್ಯರ ಪ್ರತಿಭಟನೆಗಳ ಹೊರತಾಗಿಯೂ ಮಸೂದೆ ಸ್ವಾಗತಿಸಿದ್ದಾರೆ. ಜನ ಸ್ವಾಸ್ಥ ಅಭಿಯಾನದ ರಾಷ್ಟ್ರೀಯ ಸಂಯೋಜಕರಾದ ಅಭಯ್ ಶುಕ್ಲಾ ಅವರು ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಸೂದೆ ರಚನೆಯಲ್ಲಿ ಅಭಯ್ ಶುಕ್ಲಾ ಪ್ರಮುಖ ಪಾತ್ರ ವಹಿಸಿದ್ದರು.

ತುರ್ತು ಚಿಕಿತ್ಸೆಗೆ ಸಂಬಂಧಿಸಿದ ಒಂದು ನಿಯಮಕ್ಕಾಗಿ ಇಂತಹ ಉತ್ತಮ ಮಸೂದೆಯನ್ನು ತಿಪ್ಪೆಗೆಸೆಯಲು ಹೇಳುವುದು ಸರಿಯಲ್ಲ ಎಂದು ಅವರು ವಾದಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ತಜ್ಞರ ಅಭಿಪ್ರಾಯವೇನು?

ವಕೀಲ ಅಶೋಕ್ ಅಗರ್‌ವಾಲ್ ಪ್ರಕಾರ, 1996ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿಯೇ ಎಲ್ಲಾ ವೈದ್ಯಕೀಯ ಚಿಕಿತ್ಸಕರೂ ಹಣಪಾವತಿ ಬಗ್ಗೆ ಆಲೋಚಿಸದೆ ರೋಗಿಗಳಿಗೆ ತುರ್ತು ಚಿಕಿತ್ಸೆ ಒದಗಿಸಬೇಕು ಎಂದು ಹೇಳಿರುವುದನ್ನು ನೆನಪಿಸುತ್ತಾರೆ. ಆಗಲೇ ಸುಪ್ರೀಂಕೋರ್ಟ್ ಹೇಳಿರುವ ವಿಷಯವನ್ನು ಮಸೂದೆ ಒಳಗೊಂಡಿರುವಾಗ, ಈಗ ಯಾಕೆ ವೈದ್ಯರು ಪ್ರತಿಭಟಿಸುತ್ತಿದ್ದಾರೆ ಎಂದು ಅಗರ್‌ವಾಲ್ ಪ್ರಶ್ನಿಸಿದ್ದಾರೆ.

ಅಲ್ಲದೆ, ಕಣ್ಣಿನ ಆಸ್ಪತ್ರೆಗೆ ಯಾವ ಕುಟುಂಬವೂ ಹೃದಯ ರೋಗಿ ಅಥವಾ ಅಪಘಾತದ ರೋಗಿಯನ್ನು ತುರ್ತು ಚಿಕಿತ್ಸೆ ನೀಡುವಂತೆ ಕರೆದೊಯ್ಯುವುದಿಲ್ಲ. ಹೀಗಾಗಿ ಮಸೂದೆ ಸ್ಪಷ್ಟವಾಗಿ ಯಾವ ಆಸ್ಪತ್ರೆಯಲ್ಲಿ ಯಾವ ರೋಗಿಗೆ ತುರ್ತು ಚಿಕಿತ್ಸೆ ಕೊಡಬೇಕು ಎಂದು ವಿವರ ನೀಡಬೇಕು ಎನ್ನುವ ಒತ್ತಾಯದಲ್ಲೂ ಹುರುಳಿಲ್ಲ ಎಂದು ಅಗರ್‌ವಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?:ಸುದ್ದಿ ವಿವರ | ಹೆಚ್ಚಿದ ತಾಪಮಾನ; ಶಾಖ ಸಂಬಂಧಿತ ಕಾಯಿಲೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

ಕಾಯ್ದೆಯ ಉತ್ತಮ ಅಂಶಗಳು

ಆರೋಗ್ಯ ಹಕ್ಕು ಮಸೂದೆ ಹೇಳಿರುವ ಪ್ರಕಾರ, ಅಪರೂಪದ ರೋಗಿಗಳಿಗಾಗಿ ದುಬಾರಿ ಚಿಕಿತ್ಸೆಪಡೆಯಲು ಸಾಧ್ಯವಾಗದ ಬಡವರಿಗೆ ರಾಜ್ಯ ಸರ್ಕಾರವೇ ನೆರವಾಗಬೇಕಿದೆ. ಹೀಗಾಗಿ ರೋಗಿಗಳಿಗೆ ಹಣವಿಲ್ಲದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಚಿಕಿತ್ಸೆ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು.

“ಆರೋಗ್ಯ ಹಕ್ಕು ಮಸೂದೆಯ ನಿಯಮಗಳ ಶೇ 95ರಷ್ಟು ಭಾಗ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಜವಾಬ್ದಾರಿಯುತವಾಗಿ ಬದಲಿಸುವ ಉದ್ದೇಶವನ್ನೇ ಹೊಂದಿದೆ. ಮನ್‌ರೇಗಾ ರೀತಿಯಲ್ಲಿಯೇ ಆರೋಗ್ಯ ವ್ಯವಸ್ಥೆಯನ್ನು ಜನಪರವಾಗಿ ಸೂಕ್ತ ದಿಕ್ಕಿನಲ್ಲಿ ಸಾಗಿಸುವ ಯೋಜನೆಯಿದು. ವ್ಯವಸ್ಥೆಯ ದೋಷಗಳನ್ನು ಸರಿಪಡಿಸಲು ಸರ್ಕಾರದ ಗಮನಸೆಳೆಯುವ ದಿಕ್ಕಿನಲ್ಲಿ ಆರೋಗ್ಯ ಹಕ್ಕು ಮಸೂದೆ ರೂಪುಗೊಂಡಿದೆ” ಎನ್ನುವುದು ಅಭಯ್ ಶುಕ್ಲಾ ಅಭಿಪ್ರಾಯ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X