ಈ ದಿನ ಸಂಪಾದಕೀಯ | ನಾಗರಹೊಳೆ ಬುಡಕಟ್ಟು ಜನಾಂಗಕ್ಕೆ ಸಿಗಲಿ ನ್ಯಾಯ

Date:

Advertisements
ಬುಡಕಟ್ಟು ಜನರಿಗೆ ತಮ್ಮ ಗ್ರಾಮದಲ್ಲಿ ವಾಸಿಸಲು ಅವಕಾಶ ನೀಡಬೇಕು. ಮೌಲಸೌಕರ್ಯಗಳನ್ನು ಒದಗಿಸಬೇಕು. ಅವರ ಹಕ್ಕುಗಳನ್ನು ಅವರಿಗೆ ಮರಳಿಸಬೇಕು. ಇದಕ್ಕಾಗಿ, ಸರ್ಕಾರ ಎಚ್ಚರಗೊಳ್ಳಬೇಕು.

ನಾಗರಹೊಳೆ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿನ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯಲ್ಲಿ ವಾಸಿಸುತ್ತಿದ್ದ ಜೇನು ಕುರುಬ ಬುಡಕಟ್ಟು ಕುಟುಂಬಗಳನ್ನು ರಾಜ್ಯ ಸರ್ಕಾರ ಹೊರಹಾಕಿ 45 ವರ್ಷಗಳು ಗತಿಸಿವೆ. ಸುಮಾರು 150 ಬುಡಕಟ್ಟು ಜನರು ಅರೆ ಶತಮಾನದಿಂದ ತಮ್ಮ ನೆಲೆ ಕಳೆದುಕೊಂಡು ನಿರ್ಗತಿಕರಾಗಿ, ನಿರಾಶ್ರಿತರಾಗಿ ಜೀವನ ದೂಡುತ್ತಿದ್ದಾರೆ. ತಮ್ಮ ಉಳಿವು ಮತ್ತು ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ತಮ್ಮನ್ನು ಅರಣ್ಯ ಪ್ರದೇಶದಿಂದ ಹೊರಹಾಕಿದಾಗ ಭಾರತೀಯ ಕಾನೂನಿನಲ್ಲಿ ಮೀಸಲು ಅರಣ್ಯದ ಹೆಸರಿನಲ್ಲಿ ಹೊರಹಾಕುವ ‘ಯಾವುದೇ ನಿಬಂಧನೆ’ಗಳೇ ಇರಲಿಲ್ಲವೆಂದು ಅವರು ವಾದಿಸುತ್ತಿದ್ದಾರೆ. ತಮಗೆ ತಮ್ಮ ಹಾಡಿಗೆ ಮರಳುವ ಅವಕಾಶ ಕೊಡಿ, ಅದು ನಮ್ಮ ಭೂಮಿ, ನಮ್ಮ ನೆಲೆ ಎಂದು ಬೇಡುತ್ತಿದ್ದಾರೆ. ಹೋರಾಡುತ್ತಿದ್ದಾರೆ.

ಸರ್ಕಾರವು 45 ವರ್ಷಗಳ ಹಿಂದೆ ಬುಡಕಟ್ಟು ಸಮುದಾಯಗಳನ್ನು ಕಾಡಿನಿಂದ ಹೊರಹಾಕಿದ ಬಳಿಕ, ಹಲವರು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬಂಧಿತ ಕಾರ್ಮಿಕರಾಗಿ, ಲೈನ್‌ ಮನೆಗಳಲ್ಲಿ ವಾಸಿಸುತ್ತಿದ್ದರು. 10 ಗಂಟೆಗಳ ನಿರಂತರ ಕೆಲಸಕ್ಕೆ ಅವರಿಗೆ ದೊರೆಯುತ್ತಿರುವ ಕೂಲಿ ಕೇವಲ 300 ರೂಪಾಯಿ. ಜೊತೆಗೆ, ಭೂಮಾಲೀಕರಿಂದ ನಿಂದನೆಗಳು. ಅನಾರೋಗ್ಯಕ್ಕೆ ತುತ್ತಾದರೂ ರಜೆ ಕೊಡುತ್ತಿರಲಿಲ್ಲ. ಮತ್ತು ಹಬ್ಬಗಳನ್ನು ಆಚರಿಸಲು ಸ್ವಾತಂತ್ರ್ಯವಿರಲಿಲ್ಲ. ಈ ಸಮುದಾಯದಲ್ಲಿ ಯಾರಾದರು ಸತ್ತರೆ, ಅವರ ಮೃತದೇಹಗಳನ್ನು ಹೂಳಲು ಭೂಮಾಲೀಕರು ಜಾಗ ಕೊಡುತ್ತಿರಲಿಲ್ಲ. 45 ವರ್ಷಗಳಿಂದ ಭೂಮಾಲೀಕರ ಶೋಷಣೆಯನ್ನು, ದಬ್ಬಾಳಿಕೆಯನ್ನು ಸಹಿಸಿಕೊಂಡು ಸಮುದಾಯವು ಬದುಕಿದೆ. ಇನ್ನು ಸಹಿಸಲು ಸಾಧ್ಯವಿಲ್ಲ ಎನ್ನುತ್ತಿದೆ.

Advertisements

ಈಗ, ಸಮುದಾಯದ ಜನರು ತಮ್ಮ ಮೂಲ ನೆಲೆಯಾದ ಅತ್ತೂರು ಕೊಲ್ಲಿಗೆ ಹಿಂದಿರುಗಿದ್ದಾರೆ. ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ, ಅವುಗಳನ್ನೂ ಅರಣ್ಯ ಇಲಾಖೆ ಕೆಡವಿ, ಧ್ವಂಸಗೊಳಿಸಿದೆ. ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಆ ಹುಲಿ ಮೀಸಲು ಪ್ರದೇಶದಲ್ಲಿ ಜುಲೈ 23ರವರೆಗೆ ಯಾವುದೇ ನಿರ್ಮಾಣ ಅಥವಾ ಭೂ ಬದಲಾವಣೆಯ ಕಾರ್ಯಗಳನ್ನು ನಡೆಸಬಾರದು ಎಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ನ್ಯಾಯಾಲಯದ ಆದೇಶವು ಬುಡಕಟ್ಟು ಜನರ ಸಮಸ್ಯೆಯನ್ನು ಬಗೆಹರಿಸದಿದ್ದರೂ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮಾಡಿದೆ. ಪರಿಣಾಮ, ಬುಡಕಟ್ಟು ಸಮುದಾಯವು ಅರಣ್ಯದಲ್ಲಿಯೇ ತಾತ್ಕಾಲಿಕ ಶಾಂತಿಯೊಂದಿಗೆ ಜೀವಿಸುತ್ತಿದೆ.

ಸುಪ್ರೀಂ ಕೋರ್ಟ್‌ನ ಆದೇಶವು ಅರಣ್ಯ ಹಕ್ಕುಗಳ ಕಾಯ್ದೆ (ಎಫ್‌ಆರ್‌ಎ)-2006ರ ಅನುಷ್ಠಾನಕ್ಕೆ ಯಾವುದೇ ನಿರ್ಬಂಧ ಹೇರುವುದಿಲ್ಲ. ನ್ಯಾಯಾಲಯದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಂತೆ ನೀಡಿರುವ ಆದೇಶ. ಇಲಾಖೆಯು ಎಫ್‌ಆರ್‌ಎ ಪ್ರಕ್ರಿಯೆಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಬುಡಕಟ್ಟು ಸಮುದಾಯದ ಪರವಾಗಿ ಹೋರಾಟ ನಡೆಸುತ್ತಿರುವ ಕಮ್ಯುನಿಟಿ ನೆಟ್‌ವರ್ಕ್ ಅಗೆನೆಸ್ಟ್‌ ಪ್ರೊಟೆಕ್ಟೆಡ್ ಏರಿಯಾಸ್‌ನ ಮುಖಂಡ ರಾಜನ್ ವಾದಿಸಿದ್ದಾರೆ.

ಸದ್ಯ ಬುಡಕಟ್ಟು ಸಮುದಾಯವು  ಪಾಲಕ್ ಸೊಪ್ಪು, ಬಿದಿರಿನ ಚಿಗುರುಗಳು, ಖಾದ್ಯ ಎಲೆಗಳು, ಗೆಡ್ಡೆಗಳು ಹಾಗೂ ಅಣಬೆಗಳನ್ನು ಸಂಗ್ರಹಿಸಿ, ಅವುಗಳಲ್ಲೇ ಅಡುಗೆ ಮಾಡಿಕೊಂಡು, ತಿಂದು ಜೀವನ ದೂಡುತ್ತಿದೆ. ಹೆಚ್ಚಿನ ದುಡಿಮೆ ಇಲ್ಲದೇ ಇದ್ದರೂ, ತಮ್ಮ ಸ್ವಂತ ನೆಲೆಯಲ್ಲಿ, ನೆಮ್ಮದಿಯಿಂದ ಜೀವಿಸುತ್ತಿದ್ದೇವೆಂದು ಸಮುದಾಯವು ಹೇಳುತ್ತಿದೆ.

ಗಮನಾರ್ಹವಾಗಿ, 1972ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಯನ್ನು ಬಲಪಡಿಸಲು ಇಚ್ಛಿಸಿತ್ತು. ವನ್ಯಜೀವಿ (ರಕ್ಷಣೆ) ಕಾಯ್ದೆ-1972 ಅನ್ನು ಜಾರಿಗೆ ತಂದಿತು. ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಂತಹ ಸಂರಕ್ಷಿತ ಪ್ರದೇಶಗಳನ್ನು ಘೋಷಿಸಲು ಅಗತ್ಯ ಕಾನೂನುಗಳನ್ನು ಕಾಯ್ದೆಗೆ ಸೇರಿಸಿತು. 1973ರಲ್ಲಿ ಪ್ರಾರಂಭವಾದ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿ ಮೀಸಲು ಪ್ರದೇಶಗಳನ್ನು ಘೋಷಿಸಲು ಆರಂಭಿಸಿತು.

ಆದರೆ, ಆ ಸಂದರ್ಭದಲ್ಲಿ ನಾಗರಹೊಳೆ ಅಭಯಾರಣ್ಯವನ್ನು ರಾಷ್ಟ್ರೀಯ ಉದ್ಯಾನವೆಂದಾಗಲೀ, ಹುಲಿ ಮೀಸಲು ಪ್ರದೇಶ ಎಂದಾಗಲೀ ಘೋಷಿಸಿರಲಿಲ್ಲ. ಆದರೂ, 1979ರಲ್ಲಿ ಬುಡಕಟ್ಟು ಸಮುದಾಯದವರನ್ನು ಹೊರಹಾಕಲಾಯಿತು. ಆಶ್ಚರ್ಯವೆಂದರೆ, 1988ರಲ್ಲಿ ನಾಗರಹೊಳೆಯನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು. 2007ರಲ್ಲಿ ಅಧಿಕೃತವಾಗಿ ಹುಲಿ ಮೀಸಲು ಪ್ರದೇಶ ಎಂದು ಘೋಷಿಸಲಾಯಿತು. ಆದರೆ, 2006ರ ಅರಣ್ಯ ಹಕ್ಕು ಕಾಯ್ದೆಯು ನಮಗೆ ನಮ್ಮ ಅರಣ್ಯ ಭೂಮಿಯ ಹಕ್ಕು ಒದಗಿಸಿದೆ. ನಮ್ಮ ಆವಾಸ ಸ್ಥಾನದ ಮೇಲೆ ನಮಗೆ ಹಕ್ಕುಗಳನ್ನು ನೀಡಿದೆ. ಆದರೂ, ನಮಗೆ ನಮ್ಮ ಮೂಲ ಭೂಮಿಯಲ್ಲಿ ವಾಸಿಸಲು ಬಿಡುತ್ತಿಲ್ಲವೆಂದು ಬುಡಕಟ್ಟು ಸಮುದಾಯ ಅಳಲು ತೋಡಿಕೊಂಡಿದೆ.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಕರಡಿಕಲ್ಲು ಅತ್ತೂರು ಕೊಲ್ಲಿ ಗ್ರಾಮದ ಬುಡಕಟ್ಟು ಜನರು 2010ರಿಂದಲೂ ತಮ್ಮ ಅರಣ್ಯ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ತಮ್ಮ ಭೂಮಿ, ನೆಲೆ, ವಾಸ ಸ್ಥಾನವನ್ನು ತಮಗೆ ಮರಳಿ ನೀಡುವಂತೆ ಕೇಳುತ್ತಿದ್ದಾರೆ. ಆದರೆ, ಅವರ ಅರ್ಜಿಗಳನ್ನು ಅಧಿಕಾರಿಗಳು ಮತ್ತು ಸರ್ಕಾರ ನಿರಂಕುಶವಾಗಿ ತಿರಸ್ಕರಿಸುತ್ತಿದೆ ಎಂಬ ಆರೋಪಗಳಿವೆ.

ಅರಣ್ಯ ಹಕ್ಕು ಪಡೆಯುವವರು 2005ರ ಡಿಸೆಂಬರ್ 13ಕ್ಕಿಂತ ಮೊದಲಿನಿಂದಲೂ ಭೂಮಿಯಲ್ಲಿ ವಾಸಿಸುತ್ತಿರಬೇಕು ಎಂದು ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 4(3) ಹೇಳುತ್ತದೆ. ಆದರೆ, ಅತ್ತೂರು ಬುಡಕಟ್ಟು ಸಮುದಾಯದವರು ದಶಕಗಳಿಂದ ಆ ಭೂಮಿಯಲ್ಲಿ ವಾಸವಾಗಿಲ್ಲ ಎಂದು ಅರಣ್ಯ ಅಧಿಕಾರಿಗಳು ವಾದಿಸುತ್ತಿದ್ದಾರೆ.

ಅರಣ್ಯ ಇಲಾಖೆಯೇ 45 ವರ್ಷಗಳ ಹಿಂದೆ ಏಕಾಏಕಿ ಹೊರಹಾಕಿದ ಬುಡಕಟ್ಟು ಸಮುದಾಯದ ಜನರು 2005ನೇ ವರ್ಷದಲ್ಲಿ ಅರಣ್ಯದಲ್ಲಿ ವಾಸಿಸಿರಬೇಕು ಎಂದರೆ, ಅವರು ಹೇಗೆ ಅರಣ್ಯ ಪ್ರದೇಶದಲ್ಲಿ ಜೀವಿಸಿರಲು ಸಾಧ್ಯ. ಆದರೆ, ಆ ಸಮುದಾಯದ ಪೂರ್ಜಜರು ಮತ್ತು ಹಾಲಿ ನೆಲೆಸಿರುವ ಬಹುಸಂಖ್ಯಾತರು ಅರಣ್ಯ ಭೂಮಿಯಲ್ಲಿ ವಾಸಿಸಿರುವುದಾಗಿ ಹೇಳುತ್ತಿದ್ದಾರೆ. ಆ ಅರಣ್ಯ ಪ್ರದೇಶದಲ್ಲಿಯೇ ತಮ್ಮ ದೇವತೆ, ಪೂರ್ವಜರ ಕಳೇಬರಗಳೂ ಇವೆ. ಅದಕ್ಕೆ ಅವರು ಅಗತ್ಯ ದಾಖಲೆಗಳನ್ನೂ ಸಲ್ಲಿಸಿದ್ದಾರೆ. ಪಡಿತರ ಚೀಟಿಗಳನ್ನೂ ಅವರ ಮೂಲ ಅತ್ತೂರು ಕೊಲ್ಲಿ ಎಂದೇ ಉಲ್ಲೇಖಿಸಲಾಗಿದೆ. ಆದರೆ, ಅವುಗಳನ್ನು ಪರಿಶೀಲಿಸಲು ಕಂದಾಯ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಬುಡಕಟ್ಟು ಸಮುದಾಯವನ್ನು ಇಲಾಖೆಯು ಕಾಡಿನ ಅಕ್ರಮ ವಾಸಿಗಳು ಎಂದು ಕರೆಯುತ್ತಿದೆ. ಜೊತೆಗೆ, ವನ್ಯಜೀವಿಗಳು ಮತ್ತು ಮಾನವರು ಒಂದೇ ಪ್ರದೇಶದಲ್ಲಿ ವಾಸಿಸಲು ಸಾಧ್ಯವಿಲ್ಲ. ಇದು ಮಾನವ ರಕ್ಷಣೆಗೆ ತೊಡಕಾಗುತ್ತದೆ ಎಂಬ ವಾದವನ್ನು ಮುಂದಿಡುತ್ತಿದ್ದಾರೆ.

ಆದಾಗ್ಯೂ, ಭಾರತದಲ್ಲಿ, ಜನರು ಮತ್ತು ವನ್ಯಜೀವಿಗಳು ಒಂದೇ ಭೂಪ್ರದೇಶದಲ್ಲಿ ವಾಸಿಸಿರುವ, ವಾಸಿಸುತ್ತಿರುವ ಹಲವು ಉದಾಹರಣೆಗಳಿವೆ- ಬಿಳಿಗಿರಿ ರಂಗಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಸೋಲಿಗರು ಅರಣ್ಯದೊಂದಿಗೆ ಸೀಮಿತ ಹಕ್ಕುಗಳನ್ನು ಪಡೆದು ವಾಸಿಸುತ್ತಿದ್ದಾರೆ. ಅವರು ಕಾಡಿನಲ್ಲಿ ನೆಲ್ಲಿಕಾಯಿ, ಜೇನುತುಪ್ಪ ಹಾಗೂ ಇತರ ಸಣ್ಣ ಉತ್ಪನ್ನಗಳನ್ನು ಸಂಗ್ರಹವನ್ನು ಮುಂದುವರೆಸಿದ್ದಾರೆ. ಜೊತೆಗೆ, ದೇವಾಲಯ ಪ್ರದೇಶದಲ್ಲಿ ಒಂದು ದೇವಾಲಯ, ಪ್ರವಾಸಿ ವಸತಿಗೃಹಗಳು ಹಾಗೂ ಇತರ ಅನೇಕ ಕಟ್ಟಡಗಳು, ಮೂಲ ಸೌಕರ್ಯಗಳು ಇವೆ.

ಬಿಳಿಗಿರಿ ದೇವಾಲಯ ಪ್ರದೇಶದಲ್ಲಿನ ಜನವಸತಿ, ಕಟ್ಟಡಗಳು ಹಾಗೂ ದೇವಾಲಯವು ಹುಲಿಗಳ ಸಂಖ್ಯೆಗೆ ಯಾವುದೇ ಬೆದರಿಕೆ ಒಡ್ಡಿಲ್ಲ. ಬದಲಾಗಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಕಾರ, 2010ರಿಂದ 2018ರ ವೇಳೆಗೆ ಹುಲಿಗಳ ಸಂಖ್ಯೆ 35 ರಿಂದ 86ಕ್ಕೆ ಏರಿಕೆಯಾಗಿದೆ.

ಆದರೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬುಡಕಟ್ಟು ಸಮುದಾಯವನ್ನು ಅವರ ಆವಾಸ ಸ್ಥಾನದಲ್ಲಿ ವಾಸಿಸಲು ಬಿಡದೆ, ಹೊರಗಟ್ಟುತ್ತಿದೆ. ಹಿಂಸಿಸುತ್ತಿದೆ. ಮತ್ತದೇ, ಕಾಫಿತೋಟಗಳಲ್ಲಿ ಬಂಧಿತ ಕಾರ್ಮಿಕರಾಗಿ, ಶೋಷಣೆಗೆ ಒಗಳಾಗಿ, ದಬ್ಬಾಳಿಕೆಗೆ ಗುರಿಯಾಗಿ ಜೀತದಾಳುಗಳಾಗಿ ದುಡಿಯಲು ದೂಡುವ ಯತ್ನದಲ್ಲಿದೆ. ಇಂತಹ ಯತ್ನಗಳನ್ನು ಸರ್ಕಾರ ನಿಲ್ಲಿಸಬೇಕು. ಬುಡಕಟ್ಟು ಜನರಿಗೆ ತಮ್ಮ ಗ್ರಾಮದಲ್ಲಿ ವಾಸಿಸಲು ಅವಕಾಶ ನೀಡಬೇಕು. ಮೌಲಸೌಕರ್ಯಗಳನ್ನು ಒದಗಿಸಬೇಕು. ಅವರ ಹಕ್ಕುಗಳನ್ನು ಅವರಿಗೆ ಮರಳಿಸಬೇಕು. ಇದಕ್ಕಾಗಿ, ಸರ್ಕಾರ ಎಚ್ಚರಗೊಳ್ಳಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X