ಕೆನಡಾದ ಟೊರೊಂಟೊದಲ್ಲಿ ವಾಸವಿರುವ ಭಾರತೀಯ ಮಹಿಳೆಯೊಬ್ಬರು ತಮಗಾದ ವರ್ಣಭೇದ ಅನುಭವವನ್ನು ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮಗಾದ ಈ ಅನುಭವವನ್ನು ಎನ್‌ಆರ್‌ಐ ಮಹಿಳೆಯೊಬ್ಬರು ವಿವರಿಸಿದ್ದಾರೆ.
ಈ ಬಗ್ಗೆ ರೆಡ್ಡೀಟ್‌ನಲ್ಲಿ ಮಹಿಳೆ ಪೋಸ್ಟ್ ಮಾಡಿದ್ದು, “ಇತ್ತೀಚೆಗೆ ಆದ ಘಟನೆಯೊಂದು ನಾನು ಈ ಪೋಸ್ಟ್ ಮಾಡುವಂತಹ ಸಂದರ್ಭವನ್ನು ಸೃಷ್ಟಿಸಿದೆ. ನಾನು ಸ್ಪಾನಲ್ಲಿದ್ದೆ. ಬಿಳಿ ವರ್ಣೀಯ ಮಹಿಳೆಯೊಬ್ಬರು ನೀವು ಎಲ್ಲಿಯವರು ಎಂದು ನನ್ನನ್ನು ಪ್ರಶ್ನಿಸಿದರು. ನಾನು ಭಾರತದವಳು ಎಂದು ಹೇಳಿದೆ. ಅದಾದ ಬಳಿಕ ‘ನೀವು ಇಲ್ಲಿಗೆ ಬಂದ ಬಳಿಕ ಇಂಗ್ಲೀಷ್ ಕಲಿತಿದ್ದೀರಾ? ನಿಮ್ಮ ಇಂಗ್ಲೀಷ್ ನನ್ನಂತೆಯೇ ಇದೆ ಎಂದೆಲ್ಲ ಹೇಳಿದರು. ನಾನು ಜೀವನದುದ್ದಕ್ಕೂ ಇಂಗ್ಲೀಷ್‌ನಲ್ಲಿ ಮಾತನಾಡಿರುವುದಾಗಿ ಹೇಳಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ವರ್ಣಭೇದ | ಕಪ್ಪು ಮುಖದ ಚಿತ್ರ ಹಂಚಿಕೊಂಡಿದ್ದ ಕ್ರಿಕೆಟ್ ಟೀಂ-ಇಂಗ್ಲೆಂಡ್ ನಾಯಕಿಗೆ ₹11 ಲಕ್ಷ ದಂಡ
ಹಾಗೆಯೇ, “ನಾನು ಪೆಡಿಕ್ಯೂರ್ ಮುಗಿಸಿ ಅಲ್ಲಿಂದ ಹೊರ ಬರುವವರೆಗೂ ಆ ಮಹಿಳೆ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದರು. ನಾನು ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದು ನನಗೆ ತಿಳಿಯಲಿಲ್ಲ. ಈ ಘಟನೆಯು ನಾನು ದಿಢೀರ್ ಕೋಪಗೊಳ್ಳುವಂತೆ ಇರದಿದ್ದರೂ ನಾನು ಗಮನಿಸಿಯೂ ಸುಮನ್ನೆ ಇರುವಂತಹ ಘಟನೆ ಇದಲ್ಲ. ಇಂತಹ ಘಟನೆಗಳು ಆಗಾಗೇ ನಡೆಯುತ್ತದೆ” ಎಂದು ಮಹಿಳೆ ಪೋಸ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾನು ದೇಹದ ಬಣ್ಣ ಕೊಂಚ ಬಿಳಿಯಿದೆ. ಆದ್ದರಿಂದಾಗಿ ನನ್ನನ್ನು ನೋಡಿ ನೀವು ಇತರೆ ಭಾರತೀಯರಂತೆ ಕಾಣುವುದಿಲ್ಲ ಎಂದು ಹೇಳುತ್ತಾರೆ. ಅದು ನಾನು ಮೆಚ್ಚುಗೆ ಎಂದು ಹೇಗೆ ಪರಿಗಣಿಸಲಾಗುತ್ತದೆ? ನೀವು ಇಂತಹ ಸಂದರ್ಭ ಬಂದಾಗ ಏನು ಮಾಡುತ್ತೀರಿ? ಬಿಟ್ಟುಬಿಡುತ್ತೀರಾ ಅಥವಾ ಮಾತನಾಡುತ್ತೀರಾ? ಈ ಸಂದರ್ಭವನ್ನು ಹೇಗೆ ನಿಭಾಯಿಸುತ್ತೀರಿ” ಎಂದು ಮಹಿಳೆ ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ಇದು ಸಾಮಾನ್ಯ ಎಂದರೆ ಇನ್ನು ಕೆಲವು ನೆಟ್ಟಿಗರು ಇದು ವರ್ಣಭೇದ ಎಂದು ಹೇಳಿದ್ದಾರೆ. ಇನ್ನು ಕೆಲವರು “ಇಂತಹ ಸಂದರ್ಭವನ್ನು ತೀರ ವೈಯಕ್ತಿಕವಾಗಿ ತೆಗೆದುಕೊಳ್ಳದೆ ಸಭ್ಯವಾಗಿ ಪ್ರತಿಕ್ರಿಯಿಸಿ” ಎಂದು ಸಲಹೆ ನೀಡಿದ್ದಾರೆ.
