ಯುಎಸ್ ಓಪನ್ BWF Super 300 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಕಾರ್ಕಳ ಮೂಲದ 20 ವರ್ಷದ ಆಯೂಷ್ ಶೆಟ್ಟಿ ಚಾಂಪಿಯನ್ ಆಗಿ ಹೊಮ್ಮಿದ್ದಾರೆ. ಹಾಗೆಯೇ ಮಹಿಳೆಯರ ವಿಭಾಗದಲ್ಲಿ ಭಾರತದ ತನ್ವಿ ಶರ್ಮಾ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಯುಷ್ ಫೈನಲ್‌ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ಅವರನ್ನು 21-18, 21-13 ಅಂತರದಿಂದ ಸೋಲಿಸಿ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 2025 ರಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿ ಇದಾಗಿದೆ.
6 ಅಡಿ 4 ಇಂಚು ಎತ್ತರ ಹೊಂದಿರುವ ಆಯುಷ್ ಶೆಟ್ಟಿ ಭರ್ಜರಿ ಸ್ಮ್ಯಾಶ್ ಹೊಡೆಯುವ ಮೂಲಕ ನೇರ ಸೆಟ್‌ಗಳಿಂದ ಪಂದ್ಯದಲ್ಲಿ ಜಯಶಾಲಿಯಾದರು.
ಮಹಿಳೆಯರ ವಿಭಾಗದಲ್ಲಿ ಭಾರತದ ತನ್ವಿ ಶರ್ಮಾ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು. ತಾನ್ವಿ ಶರ್ಮಾ ಚೀನಾದ ಬೈವೆನ್ ಜೆಂಗ್ ಅವರನ್ನು 21-16, 21-16 ನೇರ ಸೆಟ್‌ಗಳಿಂದ ಪರಾಭವಗೊಂಡರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಾಗರಹೊಳೆ ಬುಡಕಟ್ಟು ಜನಾಂಗಕ್ಕೆ ಸಿಗಲಿ ನ್ಯಾಯ
ಈ ವರ್ಷದ ಆರಂಭದಲ್ಲಿ ಆಯೂಷ್ ಶೆಟ್ಟಿ ಓರ್ಲಿಯನ್ಸ್ ಮಾಸ್ಟರ್ಸ್ ಸೂಪರ್ 300 ರ ಸೆಮಿಫೈನಲ್ ತಲುಪಿದ್ದರು. ಮಾಜಿ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೂ ಮತ್ತು ರಾಸ್ಮಸ್ ಗೆಮ್ಕೆ ಅವರನ್ನು ಸೋಲಿಸಿದರು. ಮೇ ತಿಂಗಳಲ್ಲಿ ಅವರು ಹಿರಿಯ ಆಟಗಾರ ಕಿಡಂಬಿ ಶ್ರೀಕಾಂತ್ ಅವರನ್ನು ಸೋಲಿಸಿ ತೈಪೆ ಓಪನ್‌ನ ಸೆಮಿಫೈನಲ್ ಪ್ರವೇಶಿಸಿದ್ದರು.
ಆಯುಷ್ ಶೆಟ್ಟಿ ತಮ್ಮ ಎಂಟನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ತಂದೆ ಮನೆಯ ಅಂಗಳದಲ್ಲಿ ಆಡುವುದನ್ನು ನೋಡಿ ಬ್ಯಾಡ್ಮಿಂಟನ್ ಆಟದತ್ತ ಆಸಕ್ತಿ ಬೆಳೆಸಿದರು. ಆರಂಭದಲ್ಲಿ ಕಾರ್ಕಳ ಮತ್ತು ಮಂಗಳೂರಿನಲ್ಲಿ ತರಬೇತಿ ಪಡೆದಿದ್ದರು. ನಂತರ ಆಯುಷ್ ಶೆಟ್ಟಿ ಕುಟುಂಬ ಬೆಂಗಳೂರಿಗೆ ನೆಲೆಗೊಂಡರು.