ಮಧ್ಯ ಪ್ರದೇಶದ ಬಿಜೆಪಿ ಸರ್ಕಾರ 90 ಡಿಗ್ರಿ ಕೋನದಲ್ಲಿ ಸೇತುವೆ ನಿರ್ಮಿಸಿ ವಿವಾದಕ್ಕೀಡಾಗಿತ್ತು. ಈಗ ಬಿಹಾರದ ಎನ್‌ಡಿಎ ಸರ್ಕಾರ ಮರಗಳನ್ನು ಹಾಗೇ ಬಿಟ್ಟು 100 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆಗೊಳಿಸಿದೆ.
ಬಿಹಾರದ ರಾಜಧಾನಿ ಪಾಟ್ನಾದಿಂದ 50 ಕಿ.ಮೀ ದೂರದಲ್ಲಿರುವ ಜೆಹಾನಾಬಾದ್ ನಲ್ಲಿನ ವಾಹನ ಚಾಲಕರಿಗೆ ವಿಚಿತ್ರ ಅನುಭವವಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ವಿಸ್ತರಣೆ ಯೋಜನೆಯು ಇದೀಗ ವಿವಾದಕ್ಕೆ ಗುರಿಯಾಗಿದೆ.
ಪಾಟ್ನಾ-ಗಯಾ ಮುಖ್ಯ ರಸ್ತೆಯಲ್ಲಿರುವ ಜೆಹಾನಾಬಾದ್‌ನಲ್ಲಿ, 7.48 ಕಿ.ಮೀ ಉದ್ದದ ರಸ್ತೆಯ ಮಧ್ಯದಲ್ಲಿ ಮರಗಳು ಎತ್ತರವಾಗಿ ನಿಂತಿದ್ದು, ಅಪಘಾತಗಳಿಗೆ ಎಡೆಮಾಡುವಂತೆ ಇದೆ. ಹಾಗಂತ ಈ ಮರಗಳು ರಾತ್ರೋರಾತ್ರಿ ಬೆಳೆದಿದ್ದಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಾಗರಹೊಳೆ ಬುಡಕಟ್ಟು ಜನಾಂಗಕ್ಕೆ ಸಿಗಲಿ ನ್ಯಾಯ
ಜಿಲ್ಲಾಡಳಿತ 100 ಕೋಟಿ ರೂ. ವೆಚ್ಚದ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಾಗ, ಮರಗಳನ್ನು ಕಡಿದುಹಾಕಲು ಅನುಮತಿ ಕೋರಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿತ್ತು. ಆದರೆ ಜಿಲ್ಲಾಡಳಿತದ ಬೇಡಿಕೆಯನ್ನು ಅರಣ್ಯ ಇಲಾಖೆ ತಿರಸ್ಕರಿಸಿದ್ದು, ರಸ್ತೆ ವಿಸ್ತರಣೆಗೆ ಬೇಕಿದ್ದ 14 ಹೆಕ್ಟೇರ್ ಅರಣ್ಯ ಭೂಮಿಗೆ ಪರಿಹಾರವನ್ನು ನೀಡುವಂತೆ ಅರಣ್ಯ ಇಲಾಖೆ ಕೋರಿತು. ಆದರೆ, ಜಿಲ್ಲಾಡಳಿತಕ್ಕೆ ವಿನಂತಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಅದಾಗ್ಯೂ, ರಸ್ತೆ ವಿಸ್ತರಣೆ ಯೋಜನೆಯನ್ನು ಜಿಲ್ಲಾಡಳಿತವು ಪೂರ್ಣಗೊಳಿಸಿ ಅವಾಂತರ ಸೃಷ್ಟಿಸಿದೆ.
ಮರಗಳು ರಸ್ತೆಯ ಮಧ್ಯದಲ್ಲಿ ಇರುವಂತೆಯೇ ರಸ್ತೆಯನ್ನು ಅಗಲೀಕರಿಸಿದ್ದು, ಹೊಸದಾಗಿ ವಿಸ್ತರಣೆಯಾದ ಮಾರ್ಗ ಮಧ್ಯೆಯೇ ಮರಗಳನ್ನು ಹಾಗೆಯೇ ಉಳಿಸಲಾಗಿದೆ. ಇದರಿಂದಾಗಿ ಇಲ್ಲಿ ರಸ್ತೆ ಅಪಘಾತಗಳೂ ನಡೆದಿದೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ.
ಸರ್ಕಾರದ ಬೇರೆ ಬೇರೆ ಇಲಾಖೆಗಳ ಸಮನ್ವಯ ಕೊರತೆಯಿಂದಾಗಿ 100 ಕೋಟಿ ರೂ. ಮೌಲ್ಯದ ಯೋಜನೆಯೊಂದು ಅಸಂಬದ್ಧವಾಗಿ ಪೂರ್ಣಗೊಂಡಿದ್ದು, ನಾಗರಿಕರ ತೆರಿಗೆ ಹಣ ಪೋಲಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.