- ಯಲಹಂಕ ವ್ಯಾಪ್ತಿಯಲ್ಲಿ ಅಧಿಕ 17 ಮಿಲಿ ಮೀಟರ್ ಮಳೆ ದಾಖಲು
- ಬೆಂಗಳೂರಿನಲ್ಲಿ ಜು. 30ರವರೆಗೆ ಗರಿಷ್ಠ ತಾಪಮಾನ 27ರಿಂದ 29 ಡಿ.ಸೆ
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು ಬಹುತೇಕ ಕಡೆ ಜೋರು ಮಳೆಯಾಗುತ್ತಿದೆ. ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬೆಳಗ್ಗೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ರಾತ್ರಿ ವೇಳೆಗೆ ಜೋರು ಮಳೆಯಾಗುತ್ತಿದೆ. ಈ ಮಳೆ ಜುಲೈ 30ರವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಬಿಸಿಲು ಮರೆಯಾಗಿದೆ. ಚಳಿ ವಾತಾವರಣ ಹೆಚ್ಚಾಗಿದೆ. ಹೀಗಾಗಿ, ಜನರು ಸ್ವೇಟರ್, ಟೋಪಿ, ಬಿಸಿ ಪಾನೀಯಗಳಿಗೆ ಮೊರೆ ಹೋಗಿದ್ದಾರೆ.
ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಯಲಹಂಕ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆವರೆಗೆ ಅತ್ಯಧಿಕ ಮಳೆ ದಾಖಲಾಗಿದೆ. ಬುಧವಾರ ನಗರದ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ತಡರಾತ್ರಿಯವರೆಗೂ ಮಳೆ ಸುರಿದಿದೆ. ಯಲಹಂಕ ವ್ಯಾಪ್ತಿಯಲ್ಲಿ ಅಧಿಕ 17 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಬೆಂಗಳೂರಿನಲ್ಲಿ ಜುಲೈ 30ರವರೆಗೆ ಗರಿಷ್ಠ ತಾಪಮಾನ 27ರಿಂದ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.
ಭಾರೀ ಮಳೆಗೆ ರಸ್ತೆಗಳು ಜಲಾವೃತ
ಬುಧವಾರ ಬೆಳಗ್ಗೆ ಜಿಟಿಜಿಟಿಯಿಂದ ಶುರುವಾದ ಮಳೆ ಸಾಯಂಕಾಲದ ವೇಳೆಗೆ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ನಿರಂತರ ಮಳೆಯಿಂದ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್, ಇಬ್ಲೂರ್ ಹಾಗೂ ಬೆಳ್ಳಂದೂರು ಡೌನ್ ರಾಂಪ್ ಬಳಿಯ ರಸ್ತೆಗಳು ಜಲಾವೃತಗೊಂಡಿದ್ದವು. ಇದರಿಂದ ಸಂಜೆಯ ಪೀಕ್-ಅವರ್ ಟ್ರಾಫಿಕ್ ಮೇಲೆ ಪರಿಣಾಮ ಬೀರಿತು. ಇಬ್ಲೂರು ಕಡೆಗೆ ಹೋಗುವ ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಪ್ರಯಾಣಿಕರು ನೀರಿನಲ್ಲಿ ವಾಹನಗಳನ್ನು ಸಂಚರಿಸಲು ಹರಸಾಹಸ ಪಡಬೇಕಾಯಿತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿವಾಹೇತರ ಸಂಬಂಧ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಪತಿ
ಸಂಚಾರ ದಟ್ಟಣೆಯನ್ನು ತಪ್ಪಿಸಲು ವಾಹನ ಬಳಕೆದಾರರು ಸಾಧ್ಯವಾದರೆ ಪರ್ಯಾಯ ರಸ್ತೆಗಳನ್ನು ಬಳಸಿಕೊಳ್ಳುವಂತೆ ಟ್ರಾಫಿಕ್ ಪೊಲೀಸರು ವಿನಂತಿಸಿದರು.
“ಮಳೆ ಇರುವ ಕಾರಣ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ ಮತ್ತು ಪರ್ಯಾಯ ರಸ್ತೆಗಳನ್ನು ಬಳಸಿ” ಎಂದು ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಅವರು ಟ್ವೀಟ್ ಮಾಡಿದ್ದಾರೆ.
ಕುಂದಲಹಳ್ಳಿ, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ ಮತ್ತು ವೈಟ್‌ಫೀಲ್ಡ್ ಸಂಚಾರ ಪೊಲೀಸ್ ವ್ಯಾಪ್ತಿಯ ಪ್ರದೇಶಗಳಲ್ಲಿ ಇದೇ ರೀತಿಯ ನಿಧಾನಗತಿಯ ಸಂಚಾರದ ಪ್ರಕರಣಗಳು ವರದಿಯಾಗಿವೆ.