ಬಿಹಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ: ‘ಎನ್‌ಆರ್‌ಸಿ’ಗಿಂತಲೂ ಹೆಚ್ಚು ಅಪಾಯಕಾರಿ

Date:

Advertisements
ಬಿಹಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ, ಕೇಂದ್ರ ಸರ್ಕಾರದ ವಿವಾದಿತ ಕ್ರಮ ಎನ್‌ಆರ್‌ಸಿಯನ್ನು ಪರೋಕ್ಷವಾಗಿ ಜಾರಿಗೊಳಿಸಲಾಗುತ್ತಿದೆಯೇ? ಎನ್‌ಆರ್‌ಸಿಯನ್ನು ಜಾರಿಗೆ ತರಲು ಚುನಾವಣಾ ಆಯೋಗವನ್ನೇ ಮೋದಿ ಸರ್ಕಾರ ಬಳಸಿಕೊಳ್ಳುತ್ತಿದೆಯೇ...?

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು (EC) ಚುನಾವಣಾ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಸ್ಪೆಷಲ್ ಇನ್‌ಟೆನ್ಸಿವ್ ರಿವಿಷನ್ -SIR) ನಡೆಸಲು ನಿರ್ಧರಿಸಿದೆ. ಈ ಪರಿಷ್ಕರಣೆಯಲ್ಲಿ 2003ರ ನಂತರ ಚುನಾವಣಾ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಎಲ್ಲ ಮತದಾರರು ತಮ್ಮ ಮತ್ತು ತಮ್ಮ ಪೋಷಕರು ಪೌರತ್ವವನ್ನು ಸಾಬೀತು ಮಾಡಬೇಕಾಗಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಮಾತ್ರವೇ ಬಾಕಿ ಇರುವ ಸಮಯದಲ್ಲಿ ಆಯೋಗದ ಕ್ರಮವು ತೀವ್ರ ಚರ್ಚೆಗೆ ಗುರಿಯಾಗಿದೆ. ಇದು ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ. ಮಾತ್ರವಲ್ಲದೆ, ಕೇಂದ್ರ ಸರ್ಕಾರದ ವಿವಾದಿತ ಕ್ರಮ ‘ರಾಷ್ಟ್ರೀಯ ಪೌರತ್ವ ನೋಂದಣಿ'(ಎನ್‌ಆರ್‌ಸಿ)ಯನ್ನು ಪರೋಕ್ಷವಾಗಿ ಜಾರಿಗೊಳಿಸಲಾಗುತ್ತಿದೆಯೇ? ಎನ್‌ಆರ್‌ಸಿಯನ್ನು ಜಾರಿಗೆ ತರಲು ಚುನಾವಣಾ ಆಯೋಗವನ್ನೇ ಮೋದಿ ಸರ್ಕಾರ ಬಳಸಿಕೊಳ್ಳುತ್ತಿದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2025ರ ಜೂನ್ 24ರಂದು ಚುನಾವಣಾ ಆಯೋಗವು ಬಿಹಾರದಲ್ಲಿ ಎಸ್‌ಐಆರ್‌ ನಡೆಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ”2003ರಲ್ಲಿ ಇದೇ ರೀತಿಯ ಪರಿಷ್ಕರಣೆಯನ್ನು ಮಾಡಲಾಗಿತ್ತು. ಈಗ ಮತ್ತೆ ಅಂತಹದ್ದೇ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುವ ಈ ಕಾರ್ಯಕ್ರಮವು ವಿವಿಧ ಕಾರಣಗಳಿಂದ ಅಗತ್ಯವಾಗಿದೆ” ಎಂದು ಹೇಳಿಕೊಂಡಿದೆ. ವೇಗವಾದ ನಗರೀಕರಣದಿಂದಾಗಿ ವಲಸೆ ಮತ್ತು ವಿದೇಶಿ ಅಕ್ರಮ ವಲಸಿಗರು ಮತದಾನ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಅವರನ್ನು ಗುರುತಿಸುವುದು, ಯುವ ಜನರ ಮತದಾನದ ಅರ್ಹತೆ, ಮರಣ ಹೊಂದಿದವರ ಚೀಟಿ ರದ್ದುಗೊಳಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಗ ಹೇಳಿಕೊಂಡಿದೆ.

ಆಯೋಗ ಹೊರಡಿಸಿರುವ ಪ್ರಕಟಣೆಯಲ್ಲಿ, 2025ರ ಜುಲೈ 1ರಿಂದ ಎಸ್‌ಆರ್‌ಐ ಅನ್ನು ಆರಂಭಿಸಬೇಕು. ಮತದಾರರ ಪಟ್ಟಿಯಲ್ಲಿ ಕೆಲವು ನಿಯಮಗಳನ್ನು ತಿಳಿಸಲಾಗಿದೆ. ಅದರಂತೆ, 1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸಬೇಕು. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ನಡುವೆ ಜನಿಸಿದವರು ತಮ್ಮ ಜನ್ಮ ದಿನಾಂಕ ಮತ್ತು ತಮ್ಮ ಒಬ್ಬ ಪೋಷಕರ ಜನ್ಮ ದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ತಮ್ಮ ಜನ್ಮ ದಿನಾಂಕ/ಸ್ಥಳ ಮತ್ತು ತಮ್ಮ ಇಬ್ಬರು ಪೋಷಕರ ಜನ್ಮ ದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು ಎಂದು ಸೂಚಿಸಲಾಗಿದೆ.

Advertisements

ಬಿಹಾರದಲ್ಲಿ ಸುಮಾರು 7.73 ಕೋಟಿ ಮತದಾರರಿದ್ದಾರೆ. ಈ ಕಾರ್ಯಕ್ರಮವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಸಮಯದಲ್ಲಿ, ಬೂತ್ ಮಟ್ಟದ ಅಧಿಕಾರಿಗಳು (BLOs) ಜುಲೈ 26 ರವರೆಗೆ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಕರಡು ಚುನಾವಣಾ ಪಟ್ಟಿಯು ಆಗಸ್ಟ್ 1 ರಂದು ಪ್ರಕಟವಾಗಲಿದೆ. ಮತದಾರರು ಸೆಪ್ಟೆಂಬರ್ 1 ರವರೆಗೆ ದೂರುಗಳನ್ನು ಸಲ್ಲಿಸಲು ಅವಕಾಶವಿರಲಿದ್ದು, ಅಂತಿಮ ಚುನಾವಣಾ ಪಟ್ಟಿಯನ್ನು ಸೆಪ್ಟೆಂಬರ್ 30 ರಂದು ಪ್ರಕಟಿಸಲಾಗುವುದು ಎಂದು ಆಯೋಗ ಹೇಳಿದೆ.

ಆದರೆ, ಈ ಪರಿಷ್ಕರಣೆ ಮತ್ತು ಪೌರತ್ವ ಸಾಬೀತಿಗೆ ಪೂರ್ವಜರ ದಾಖಲೆಗಳನ್ನು ಕೇಳುವುದು ತಳ ಸಮುದಾಯ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬಹುತೇಕರನ್ನು ಮತದಾರ ಪಟ್ಟಿಯಿಂದ ಹೊರಗಿಡುವ ಆತಂಕವನ್ನು ಹುಟ್ಟುಹಾಕಿದೆ. ಭಾರತದಲ್ಲಿ ಎರಡು/ಮೂರು ದಶಕಗಳ ಹಿಂದೆ ಸಾಕ್ಷಾರತಾ ಪ್ರಮಾಣ ತೀರಾ ಕಡಿಮೆ ಇತ್ತು. ಜೊತೆಗೆ, ಬಹುಸಂಖ್ಯಾತ ಹಿಂದುಳಿದ, ತಳ ಸಮುದಾಯಗಳ ಜನಸಂಖ್ಯೆ ಇಂದಿಗೂ ಹೆಚ್ಚಿದೆ. ಹೀಗಿರುವಾಗ ಪೂರ್ವಜರ ಹುಟ್ಟಿದ ದಿನಾಂಕ ಅಥವಾ ಜನ್ಮ ಸ್ಥಳಕ್ಕೆ ಪೂರಕವಾದ ದಾಖಲೆಗಳನ್ನು ಅವರು ಹೊಂದಿರಲು ಅಸಾಧ್ಯ. ಈ ಕಾರಣಕ್ಕಾಗಿಯೇ ಎನ್‌ಆರ್‌ಸಿಯನ್ನು ದೇಶದ ಜನರು ವಿರೋಧಿಸಿದ್ದರು. ಇದೀಗ, ಅದೇ ನಿಯಮಗಳನ್ನು ಚುನಾವಣಾ ಆಯೋಗವು ಮತದಾರ ಪಟ್ಟಿ ಪರಿಷ್ಕರಣೆಯ ಮಾರ್ಗಸೂಚಿಗಳಲ್ಲಿ ಸೇರಿಸಿದೆ. ಹೀಗಾಗಿ, ಮತದಾರ ಚೀಟಿ ಪರಿಷ್ಕರಣೆಯಲ್ಲಿನ ಈ ನಿಯಮಗಳ ವಿರುದ್ಧ ಭಾರೀ ಆಕ್ರೋಶ, ಟೀಕೆ ಹಾಗೂ ವಿರೋಧ ವ್ಯಕ್ತವಾಗುತ್ತಿದೆ.

ಅಂದಹಾಗೆ, 2019ರಲ್ಲಿ, ಅಸ್ಸಾಂ ಸರ್ಕಾರವು ಭಾರತೀಯ ನಾಗರಿಕರನ್ನು ದಾಖಲೆರಹಿತ ವಲಸಿಗರಿಂದ ಬೇರ್ಪಡಿಸುವ ಉದ್ದೇಶದಿಂದ ಎನ್‌ಆರ್‌ಸಿ ಜಾರಿಗೊಳಿಸಿತು. ಇದು ಅಸ್ಸಾಂನಲ್ಲಿ ನೆಲೆಸಿರುವ ನಿವಾಸಿಗಳು ಅಥವಾ ಅವರ ಪೂರ್ವಜರು 1971ರ ಮಾರ್ಚ್‌ 24ಕ್ಕೂ ಮೊದಲಿನಿಂದಲೂ ಅಸ್ಸಾಂನಲ್ಲಿಯೇ ಇದ್ದಾರೆ ಎಂಬುದನ್ನು ಸಾಬೀತು ಮಾಡಬೇಕೆಂದು ಸೂಚಿಸಿತ್ತು. ತಾನು ಅನುಸರಿಸಿದ ದಬ್ಬಾಳಿಕೆಯ ಕ್ರಮದಿಂದಾಗಿ 19 ಲಕ್ಷಕ್ಕೂ ಹೆಚ್ಚು ಜನರನ್ನು ಭಾರತೀಯರೇ ಅಲ್ಲವೆಂದು ಪಟ್ಟಿಮಾಡಿತು. ತಮ್ಮ ಪೌರತ್ವವನ್ನು ಸಾಬೀತು ಮಾಡಲು ವಿಫಲರಾದವರನ್ನು ಬಂಧಿಸಿಡಲು ಆರು ‘ಡಿಟೆನ್ಶನ್ ಕೇಂದ್ರ’ಗಳನ್ನು ತೆಗೆದಿದೆ. ಸದ್ಯ, ಕೋವಿಡ್‌-19 ಕಾರಣದಿಂದಾಗಿ ಎನ್‌ಆರ್‌ಸಿ ಪ್ರಕ್ರಿಯೆ ಸ್ಥಗಿತೊಂಡಿದೆ. ಆದಾಗ್ಯೂ, ಅಸ್ಸಾಂನ 19 ಲಕ್ಷ ಜನರು ತಮ್ಮ ಪೌರತ್ವ ಸಾಬೀತು ಮಾಡಲು ಹೋರಾಟ ನಡೆಸುತ್ತಿದ್ದಾರೆ.

ಈಗ ಎನ್‌ಆರ್‌ಸಿಗೆ ಪೂರಕವಾಗಿ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಎನ್‌ಆರ್‌ಸಿ ರೀತಿಯ ನಿಯಮಗಳನ್ನೇ ಅಳವಡಿಸಿದೆ. ಇದು, ದೇಶಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೊಳಿಸಲು ಹವಣಿಸುತ್ತಿರುವ ಕೇಂದ್ರ ಸರ್ಕಾರದ ಹುನ್ನಾರಕ್ಕೆ ನೆರವಾಗಲಿದೆ ಎಂದು ಕಾನೂನು ತಜ್ಞರು ಆರೋಪಿಸಿದ್ದಾರೆ.

ಈ ಪರಿಷ್ಕರಣೆಯು ‘ಗುಪ್ತ ಎನ್‌ಆರ್‌ಸಿ’ ಜಾರಿಯ ಭಾಗವಾಗಿದೆ. ಇದು ಲಕ್ಷಾಂತರ ಮತದಾರರನ್ನು, ವಿಶೇಷವಾಗಿ ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುವ ಸಾಧ್ಯತೆಯಿದೆ. ಬಿಹಾರದ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಜನರ ಬಳಿ ಜನನ ಪ್ರಮಾಣಪತ್ರಗಳು, ಆಧಾರ್ ಕಾರ್ಡ್‌ನಂತಹ ದಾಖಲೆಗಳು ಇಲ್ಲದೇ ಇರಬಹುದು. ಪೋಷಕರ ಜನನ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವ ಷರತ್ತು, ಅನೇಕರಿಗೆ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಅಪಾಯವನ್ನು ಉಂಟುಮಾಡುತ್ತದೆ ಎಂಬ ಆತಂಕ ಬಿಹಾರಿಗರಲ್ಲಿ ಎದುರಾಗಿದೆ.

ಆದಾಗ್ಯೂ, ಬಿಜೆಪಿ – ಅಕ್ರಮ ಬಾಂಗ್ಲಾದೇಶದ ವಲಸಿಗರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರನ್ನು ಗುರುತಿಸಿ, ಮತದಾನದಿಂದ ಹೊರಗಿಡಲು ಈ ಕ್ರಮ ಅಗತ್ಯವೆಂದು ಹೇಳುತ್ತಿದೆ. ಆದರೆ, ಬಿಜೆಪಿ ತನ್ನ ವಿರೋಧಿಗಳು ಮತದಾನದಿಂದ ಹೊರಗಿಡಲು, ತಳ ಸಮುದಾಯದವರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಮತದಾರ ಪಟ್ಟಿಯನ್ನು ತಮಗೆ ಬೇಕಾದಂತೆ ಸಿದ್ದಪಡಿಸಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.

ಈ ಲೇಖನ ಓದಿದ್ದೀರಾ?: ಮೋದಿ 3.0 | ಒಂದೇ ವರ್ಷದಲ್ಲಿ 947 ಹೇಟ್‌ ಕ್ರೈಮ್; ಆತಂಕ ಹುಟ್ಟಿಸುತ್ತೆ APCR ವರದಿ

”2003ಕ್ಕಿಂತ ಮೊದಲು ಮತದಾರರಾಗಿ ನೋಂದಾಯಿಸಿದವರಿಗೆ ಮತದಾರ ಚೀಟಿಯನ್ನು ಪೌರತ್ವದ ಗುರುತಾಗಿ ಪರಿಗಣಿಸಲಾಗಿದೆ. ಅವರನ್ನು ಭಾರತದ ನಾಗರಿಕರು ಎಂದು ಪರಿಗಣಿಸಲಾಗಿದೆ. ಆದರೆ, 2003ರ ನಂತರದಲ್ಲಿ ನೋಂದಾಯಿಸಿಕೊಂಡವರಿಗೆ ಪೌರತ್ವ ಸಾಬೀತಾಗಿಲ್ಲದ ಕಾರಣ ಮತದಾರ ಚೀಟಿಯು ಪೌರತ್ವದ ಗುರುತಾಗಿಲ್ಲ. ಅವರನ್ನು ಭಾರತದ ನಾಗರಿಕರು ಎಂದು ಪರಿಗಣಿಸಲಾಗಿಲ್ಲ. ಇದರಿಂದ ಅವರ ಸ್ಥಿತಿ ಅನಿಶ್ಚಿತವಾಗಿದೆ ಎಂಬುದಾಗಿ ಆಯೋಗದ ಪ್ರಕಟಣೆಯ 11ನೇ ಪ್ಯಾರಾಗ್ರಾಫ್‌ ಹೇಳುತ್ತದೆ” ಎಂದು ಚುನಾವಣಾ ವೀಕ್ಷಕ ಸಂಸ್ಥೆ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌’ನ (ADR) ಸಂಸ್ಥಾಪಕ ಸದಸ್ಯ ಜಗದೀಪ್ ಎಸ್. ಚೋಕ್ಕರ್ ಹೇಳಿವುದಾಗಿ ‘ದಿ ವೈರ್’ ವರದಿ ಮಾಡಿದೆ.

”ಹಾಗಾದರೆ, 2024ರ ಲೋಕಸಭಾ ಚುನಾವಣೆಯವರೆಗೆ ನಡೆದ ಎಲ್ಲ ಚುನಾವಣೆಗಳು ಮತ್ತು ಮತ ಚಲಾಯಿಸಿದ ಮತದಾರರು ಅನುಮಾನಾಸ್ಪದವಾಗಿ ಉಳಿಯುತ್ತವೆಯೇ? ಆಯೋಗವು 2004ರಿಂದ ಏನು ಮಾಡುತ್ತಿದೆ? 21 ವರ್ಷಗಳಿಂದ ಅದು ಯಾವುದೇ ತೀವ್ರವಾದ ಪರಿಷ್ಕರಣೆಗಳನ್ನು ಮಾಡಿಲ್ಲ. 2003ರ ನಂತರ ನೋಂದಾಯಿಸಲಾದ ಯಾರ ಮತವನ್ನು ಈಗ ರದ್ದುಗೊಳಿಸುವುದು ಅವರ ಉದ್ದೇಶವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಳಿಸಲು ಕಾನೂನಾತ್ಮಕವಾದ ಒಂದು ಪ್ರಕ್ರಿಯೆ ಇದೆ. ಆ ಪ್ರಕ್ರಿಯೆಯನ್ನು ನಡೆಸಬೇಕು. ಕಾನೂನು ನಿಗದಿ ಮಾಡಿದ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ, 2003ರ ನಂತರ ನೋಂದಾಯಿಸಿದ ಎಲ್ಲ ಮತದಾರರ ನಾಗರಿಕತೆಯನ್ನೇ ಅನುಮಾನಿಸುವುದು, ನಾಗರಿಕರಲ್ಲ ಎನ್ನುವಂತೆ ಬಿಂಬಿಸುವುದು ಕಾನೂನುಬಾಹಿರ ನಡೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತದಾರರು ತಮ್ಮ ಮತ್ತು ತಮ್ಮ ಪೂರ್ವಜರ ಜನ್ಮ ದಿನ ಮತ್ತು ಜನ್ಮ ಸ್ಥಳದ ಸಾಬೀತು ಮಾಡಬೇಕು ಎನ್ನುತ್ತಿರುವ ಚುನಾವಣಾ ಆಯೋಗದ ಕ್ರಮವು ‘ಎನ್‌ಆರ್‌ಸಿಗಂತಲೂ ಹೆಚ್ಚು ಅಪಾಯಕಾರಿ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಿಹಾರದಲ್ಲಿ ಈ ಪ್ರಕ್ರಿಯೆ ಆರಂಭವಾಗಿದ್ದರೂ, ಇದರ ಮುಖ್ಯ ಗುರಿ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳವೇ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಹಾರದಲ್ಲಿನ ವಿರೋಧ ಪಕ್ಷಗಳಾದ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ (RJD), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಕೂಡ ಈ ಪ್ರಕ್ರಿಯೆಯನ್ನು ವಿರೋಧಿಸಿವೆ. ಇದು ಉದ್ದೇಶಪೂರ್ವಕವಾಗಿ ಮತದಾರರನ್ನು ಬಹಿಷ್ಕರಿಸುವ ಹುನ್ನಾರವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

“ಚುನಾವಣೆಗೆ ಎರಡು ತಿಂಗಳ ಮೊದಲು ಈ ಪರಿಷ್ಕರಣೆಯನ್ನು ಯಾಕೆ ಮಾಡಲಾಗುತ್ತಿದೆ? ಮನೆ ಮನೆಗೆ ಹೋಗಿ 8 ಕೋಟಿ ಜನರ ಮತದಾರರ ಪಟ್ಟಿಯನ್ನು 25 ದಿನಗಳಲ್ಲಿ ಸಿದ್ಧಪಡಿಸಲು ಸಾಧ್ಯವೇ? ಆಯೋಗ ಕೇಳುತ್ತಿರುವ ದಾಖಲೆಗಳು ಬಡವರ ಬಳಿ ಇಲ್ಲದಿರಬಹುದು. ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಯಭೀತರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಬಡವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಬಯಸಿದ್ದಾರೆ. ಬಡವರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ, ಬಡವರಿಗೆ ನೀಡಲಾದ ಪ್ರಮುಖ ಹಕ್ಕು ಮತದಾನ. ಈಗ ಜೆಡಿಯು ಮತ್ತು ಬಿಜೆಪಿ ಆ ಹಕ್ಕನ್ನು ಕಸಿದುಕೊಳ್ಳಲು ಹವಣಿಸುತ್ತಿವೆ” ಎಂದು ಬಿಹಾರ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X