ಸುಮಾರು ಎರಡು ದಶಕಗಳಿಂದ ಪ್ರತ್ಯೇಕವಾಗಿ ಸಂಘಟನೆ ಕಟ್ಟುತ್ತಾ ಬಂದಿದ್ದ ಠಾಕ್ರೆ ಸಹೋದರರಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಇದೀಗ ಭಾಷಾ ಪ್ರೇಮದ ವಿಚಾರದಲ್ಲಿ ಒದ್ದಾಗಿದ್ದಾರೆ. ಎರಡು ದಶಕಗಳ ನಂತರ ‘ಮರಾಠಿ ವಿಜಯ’ ರ್‍ಯಾಲಿಯಲ್ಲಿ ಇಬ್ಬರು ಸಹೋದರರು ಜೊತೆಯಾಗಲಿದ್ದಾರೆ.
ತ್ರಿಭಾಷಾ ನೀತಿ ಅಡಿಯಲ್ಲಿ ಹಿಂದಿ ಹೇರಿಕೆಗೆ ಹೊರಟಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಿಪಕ್ಷಗಳು ಹೋರಾಟ ನಡೆಸಿದ್ದು, ಎರಡನೇ ಬಾರಿಗೆ ಸರ್ಕಾರ ಆದೇಶವನ್ನು ಹಿಂಪಡೆದಿದೆ. ಇದನ್ನು ತಮ್ಮ ಹೋರಾಟದ ಯಶಸ್ಸು ಎಂದು ಪರಿಗಣಿಸಿರುವ ವಿಪಕ್ಷಗಳು ‘ಮರಾಠಿ ವಿಜಯ’ ರ್‍ಯಾಲಿಗೆ ಕರೆ ನೀಡಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಶಾಲೆಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ: ಮತ್ತೆ ಒಂದಾದ ರಾಜ್, ಉದ್ಧವ್ ಠಾಕ್ರೆ
ಶಾಲೆಗಳಲ್ಲಿ ತ್ರಿಭಾಷಾ ನೀತಿಯ ಕುರಿತಾದ ತನ್ನ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಹಿಂತೆಗೆದುಕೊಂಡ ನಿಟ್ಟಿನಲ್ಲಿ ಜುಲೈ 5ರಂದು ಮುಂಬೈನಲ್ಲಿ ‘ಮರಾಠಿ ವಿಜಯ ದಿವಸ’ ಆಚರಿಸಲು ಶಿವಸೇನೆ(ಯುಬಿಟಿ) ಮತ್ತು ಎಂಎನ್ಎಸ್ ಮಂಗಳವಾರ ಜಂಟಿ ಸಾರ್ವಜನಿಕ ಆಹ್ವಾನವನ್ನು ನೀಡಿವೆ.
‘ಮರಾಠಿಚಾ ಆವಾಜ್’ ಎಂಬ ಶೀರ್ಷಿಕೆಯ ಜಂಟಿ ಆಹ್ವಾನವು ಕಾರ್ಯಕ್ರಮದ ಮೊದಲ ಅಧಿಕೃತ ಘೋಷಣೆಯಾಗಿದೆ. ಸೋದರಸಂಬಂಧಿಗಳಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಈ ಕಾರ್ಯಕ್ರಮದ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿರುವುದಾಗಿ ಉಲ್ಲೇಖಿಸಲಾಗಿದೆ.
ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವತ್ ಮಂಗಳವಾರ ತಮ್ಮ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಈ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಸುಮಾರು ಎರಡು ದಶಕಗಳ ಬಳಿಕ ಮೊದಲ ಬಾರಿಗೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ರಾಜ್, ಉದ್ಧವ್ ಠಾಕ್ರೆ ಕಾಣಿಸಿಕೊಳ್ಳಲಿದ್ದಾರೆ.
ಮಹಾರಾಷ್ಟ್ರ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ಹಿಂದಿ ಭಾಷೆ ಕಡ್ಡಾಯಗೊಳಿಸುವುದ್ದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ರಾಜ್ಯ ಸಚಿವ ಸಂಪುಟವು ಭಾನುವಾರ ತ್ರಿಭಾಷಾ ನೀತಿಯ ಅನುಷ್ಠಾನದ ಕುರಿತು ಎರಡು ಸರ್ಕಾರಿ ಆದೇಶಗಳನ್ನು ಹಿಂಪಡೆದುಕೊಂಡಿದೆ. ಈ ಬೆನ್ನಲ್ಲೇ ಜುಲೈ 5ರಂದು ನಡೆಯಲಿದ್ದ ಪ್ರತಿಭಟನಾ ಮೆರವಣಿಗೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. ಆದರೆ ‘ಮರಾಠಿ ಮನೂಸ್’ ಅನ್ನು ಆಚರಿಸಲು ಜುಲೈ 5ರಂದು ಕಾರ್ಯಕ್ರಮ ನಡೆಯಲಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
