- ‘ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದರಿಂದ ಗೃಹ ಸಚಿವರು ಹತಾಶರಾಗಿದ್ದಾರೆ’
- ‘ಯಾರು ಬೇಕಾದರೂ ವೈಯಕ್ತಿಕ ಹೇಳಿಕೆ ನೀಡಿದರೆ ನಾವು ಸ್ವೀಕರಿಸುವುದಿಲ್ಲ’
ಉಡುಪಿಯ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರು ನೀಡಿದ್ದ ‘ಶೌಚಾಲಯದಲ್ಲಿ ಯಾವುದೇ ಹಿಡನ್, ಕ್ಯಾಮೆರಾ ಇರಲಿಲ್ಲ, ಈ ಘಟನೆಗೆ ಕೋಮು ಬಣ್ಣ ಬಳಿಯುವುದು ಬೇಡ’ ಎಂಬ ಹೇಳಿಕೆಗೆ ಬಿಜೆಪಿ ಮಾಜಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮುಸ್ಲಿಂ ವಿದ್ಯಾರ್ಥಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಗುರುವಾರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ತಲೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ್ ಸುದ್ದಿಗಾರರೊಂದಿಗೆ ಮಾತನಾಡಿದರು.
“ಘಟನೆ ಸಂಬಂಧಿಸಿದಂತೆ ಆ ಮೂವರು ವಿದ್ಯಾರ್ಥಿನಿಯರೇ ಪ್ರಾಂಶುಪಾಲರಿಗೆ ತಪ್ಪೊಪ್ಪಿಗೆ ಪತ್ರ ಕೊಟ್ಟಿದ್ದಾರೆ. ಈಗ ಘಟನೆಯೇ ನಡೆದಿಲ್ಲ ಎಂದು ಯಾರು ಬೇಕಾದರೂ ವೈಯಕ್ತಿಕ ಹೇಳಿಕೆ ನೀಡುವುದನ್ನು ನಾವು ಸ್ವೀಕರಿಸುವುದಿಲ್ಲ. ಘಟನೆ ನಡೆದಿರುವುದು ನಿಜ, ಅಲ್ಲಿ ವಿಡಿಯೋ ಚಿತ್ರಿಕರಣ ಮಾಡಿರುವುದು ನಿಜ, ಕಾಲೇಜಿನಲ್ಲಿ ಪ್ರತಿಭಟನೆ ಆಗಿರುವುದು ನಿಜ. ಆದರೆ, ಇಂದು ತುಂಬಾ ಹಗುರವಾಗಿ ಹೇಳಿಕೆ ನೀಡುವುದು, ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎನ್ನುವುದನ್ನು ಒಪ್ಪಲು ಆಗುವುದಿಲ್ಲ” ಎಂದು ಖುಷ್ಬೂ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
“ಹಾಗಾದರೇ, ಈ ಇಡೀ ಘಟನೆ ಕಾಲ್ಪನಿಕವೇ? ಪೊಲೀಸರು ಯಾಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ? ಜು. 18ರಂದು ಕಾಲೇಜಿಗೆ ಪೊಲೀಸರು ಹೋಗಿರುವುದು ಸುಳ್ಳಾ” ಎಂದು ಪ್ರಶ್ನಿಸಿದ ಅವರು, “ವಿಡಿಯೋ ವೈರಲ್ ಆಗಿಲ್ಲ ಎಂದು ಎಸ್‌ಪಿ ಹೇಳಿರುವುದು ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಆರೋಪಿಸಿದ್ದಾರೆ.
“ಹೆಣ್ಣು ಮಕ್ಕಳು ಯಾರೇ ಆಗಿರಲಿ, ಈ ರೀತಿಯ ಪ್ರಕರಣಗಳಲ್ಲಿ ಸರ್ಕಾರ ಓಲೈಕೆ ರಾಜಕಾರಣ ಬಿಟ್ಟು ನ್ಯಾಯ ಒದಗಿಸಬೇಕು. ಪ್ರಕರಣವನ್ನು ಮುಚ್ಚಿಹಾಕುವಂತಹ ಜಿಹಾದಿ ರಾಜಕಾರಣ ಮಾಡದಿದ್ದರೆ ಸರ್ಕಾರಕ್ಕೆ ಜನರಿಂದ ಮಾನ್ಯತೆ ಸಿಗುತ್ತಿತ್ತು. ಜನ ಯಾವುದೇ ಕಾರಣದಿಂದಲೂ ಇವರನ್ನು ನಂಬಲು ತಯಾರಿಲ್ಲ” ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಉಡುಪಿಯ ಘಟನೆಯನ್ನು ಕಾಲೇಜು ಪ್ರಾಂಶುಪಾಲರಿಗೆ ಬಿಟ್ಟುಬಿಡೋಣ ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, “ಪ್ರಾಂಶುಪಾಲರಿಗೆ ಬಿಡಲು ಅವರೇನು ಪೊಲೀಸ್ ಇಲಾಖೆಯೆ ಅಥವಾ ಗೃಹ ಸಚಿವರೇ? ಇವರು ಯಾವ ಗೃಹ ಸಚಿವರೋ, ಇದು ಯಾವ ಸರ್ಕಾರವೋ? ಇದು ಗೃಹ ಸಚಿವರು ಮಾಡುವಂತಹ ಕೆಲಸವೇ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇರಲಿಲ್ಲ, ಇದು ಬ್ರೇಕಿಂಗ್ ನ್ಯೂಸ್ ಅಲ್ಲ: ಖುಷ್ಬೂ ಸುಂದರ್ ಸ್ಪಷ್ಟನೆ
‘ಸಿಎಂ ಸ್ಥಾನ ಸಿಗದೆ ಗೃಹ ಸಚಿವರು ಹತಾಶರಾಗಿದ್ದಾರೆ’
“ವಿಡಿಯೋ ಚಿತ್ರೀಕರಣ ಮಾಡುವಂತಹದ್ದು ಎಲ್ಲ ಕಡೆ ನಡೆಯುವ ಸಾಮಾನ್ಯ ಘಟನೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಇದನ್ನು ಮಕ್ಕಳಾಟ ಎಂದು ಹೇಳಿದೆ. ಸೂಕ್ಷ್ಮತೆ ಇಲ್ಲದ, ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲದ ಈ ಸರ್ಕಾರ ಇದ್ದರೇನು ಹೋದರೇನು? ಇಂತಹ ಸರ್ಕಾರ ಇಲ್ಲದಿದ್ದರೆ ಒಳ್ಳೆಯದು. ಇಂತಹ ಗೃಹ ಸಚಿವರು ಬೇಕಾಗಿಲ್ಲ, ಇಂತಹ ಎಸ್‌ಪಿನೂ ಬೇಕಾಗಿಲ್ಲ. ಎಸ್‌ಪಿ ಅವರನ್ನು ವಜಾ ಮಾಡಿ, ಗೃಹ ಸಚಿವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ ಅವರು, “ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನ ಬಯಸಿದ್ದರು, ಗೃಹ ಸಚಿವ ಸ್ಥಾನ ಬೇಡವೇ ಬೇಡ ಎಂದಿದ್ದರು. ಹಾಗಾಗಿ ಅವರು ಈಗ ಹತಾಶರಾಗಿದ್ದಾರೆ” ಎಂದು ವ್ಯಂಗ್ಯವಾಡಿದರು.