ಪ್ಲಾಸ್ಟಿಕ್ ಚೀಲ ಮುಕ್ತ ದಿನ | ಪರಿಸರ ಸ್ನೇಹಿ ಭವಿಷ್ಯಕ್ಕಾಗಿ ಜಾಗತಿಕ ಹೋರಾಟ

Date:

Advertisements
ಪ್ಲಾಸ್ಟಿಕ್ ಚೀಲ ಮುಕ್ತ ದಿನವು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳನ್ನು ಅರಿತು, ಬಟ್ಟೆಯ ಚೀಲಗಳು, ಮರುಬಳಕೆಯ ಸಾಮಗ್ರಿಗಳು ಮತ್ತು ಇತರೆ ಪರಿಸರ ಸ್ನೇಹಿ ಪರ್ಯಾಯಗಳ ಕಡೆಗೆ ಮುಖ ಮಾಡಲು ಪ್ರೋತ್ಸಾಹಿಸಲಿ...

ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು ಮತ್ತು ಸುಸ್ಥಿರ, ಪರಿಸರ ಸ್ನೇಹಿ ಪರ್ಯಾಯ ಮಾರ್ಗಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 3ರಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.

ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣವಾಗುವ, ವನ್ಯಜೀವಿಗಳಿಗೆ ಹಾನಿ ಮಾಡುವ ಮತ್ತು ಕೊಳೆಯಲು ನೂರಾರು ವರ್ಷಗಳನ್ನೇ ತೆಗೆದುಕೊಳ್ಳುವ ಈ ಪ್ಲಾಸ್ಟಿಕ್ ಚೀಲಗಳ ಬಳಕೆಯು ಪರಿಸರದ ಮೇಲೆ ಬೀರುವ ಪರಿಣಾಮಗಳ ಮೇಲೆ ಈ ದಿನದ ಆಚರಣೆ ಬೆಳಕು ಚೆಲ್ಲುತ್ತದೆ.

ಬ್ಯಾಗ್ ಫ್ರೀ ವರ್ಲ್ಡ್ ಸಂಸ್ಥೆಯು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಸ್ಥಾಪಿಸಿತು. ಈ ಸಂಸ್ಥೆಯು ಪ್ಲಾಸ್ಟಿಕ್ ಮುಕ್ತ ಜಗತ್ತನ್ನು ಉತ್ತೇಜಿಸುವ ಹಲವಾರು ಅಭಿಯಾನಗಳನ್ನು ಜಗತ್ತಿಗೆ ಪರಿಚಯಿಸಿತು. ಇದು ಪ್ರಪಂಚದ ಇತರ ದೇಶಗಳನ್ನು/ಭಾಗಗಳನ್ನು ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದಂದು ಸ್ವಯಂಪ್ರೇರಿತವಾಗಿ ಭಾಗವಹಿಸಲು ಪ್ರೇರೇಪಿಸಿತು. ಶೂನ್ಯ ತ್ಯಾಜ್ಯ ಯುರೋಪ್ (ZWE) ಸದಸ್ಯರಾದ ರೆಝೀರೋ, 2008ರ ಜುಲೈ 3ರಂದು ಆಚರಿಸಲಾದ ಮೊದಲ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಪ್ರಾರಂಭಿಸಿತು. 2015ರಲ್ಲಿ, ಯುರೋಪಿಯನ್ ಒಕ್ಕೂಟವು ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡಲು ಕೆಲವು ನಿರ್ದೇಶನಗಳನ್ನು ಸಹ ಅಂಗೀಕರಿಸಿತು. 2022ರಲ್ಲಿ ಬಾಂಗ್ಲಾದೇಶವು ಅಧಿಕೃತವಾಗಿ ಏಕ-ಬಳಕೆಯ, ತೆಳುವಾದ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸಿದ ಮೊದಲ ದೇಶವಾಯಿತು. ಮುಂದಿನ ಕೆಲವೇ ದಿನಗಳಲ್ಲಿ ಭಾರತ ಸೇರಿದಂತೆ ಇನ್ನೂ ಅನೇಕ ದೇಶಗಳು ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದವು.

Advertisements
WhatsApp Image 2025 07 02 at 5.02.34 PM

ಪ್ಲಾಸ್ಟಿಕ್ ಭೂಮಿಯಲ್ಲಿ ಕರಗುವುದಕ್ಕೆ ಸಾವಿರ ವರ್ಷಗಳು ಬೇಕು ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಈ ಪ್ಲಾಸ್ಟಿಕ್‌ಗಳು ಆಧುನಿಕ ಜೀವನಶೈಲಿಯ ಸಣ್ಣ-ಪುಟ್ಟ ಸಮಸ್ಯೆಗಳಿಗೂ ಸುಲಭವಾದ ಪರಿಹಾರಗಳಾದರೂ, ಪ್ರಕೃತಿ ಅದಕ್ಕೆ ದೀರ್ಘಕಾಲದವರೆಗೆ ಭಾರವಾದ ಬೆಲೆ ತೆರುತ್ತದೆ. ಭೂಮಿಯ ಮೇಲ್ಮೈಯನ್ನು ಕಲುಷಿತಗೊಳಿಸುವುದಷ್ಟೇ ಅಲ್ಲದೆ, ಒಳಚರಂಡಿಗಳನ್ನು ತಡೆದು, ನೀರು ಸರಾಗವಾಗಿ ಹರಿಯುವುದನ್ನು ನಿಲ್ಲಿಸುತ್ತದೆ. ಮುಂದುವರೆದು ನದಿಗಳು, ಸಮುದ್ರಗಳಲ್ಲಿಗೆ ತಲುಪಿದಾಗ ಅವು ಸಹಸ್ರಾರು ಸಮುದ್ರ ಜೀವಿಗಳಿಗೆ ಜೀವಘಾತಕವಾಗುತ್ತವೆ. ಚೀಲಗಳು, ಪ್ಲಾಸ್ಟಿಕ್ ಸ್ಟ್ರಾಗಳು ಮತ್ತು ಕಟ್ಲರಿಗಳಂತಹ ಕಡಿಮೆ ಮೌಲ್ಯದ ಪ್ಲಾಸ್ಟಿಕ್‌ಗಳನ್ನು ಮರುಬಳಕೆ ಮಾಡುವುದೂ ಕಷ್ಟ; ವಿಲೇವಾರಿ ಮಾಡುವುದೂ ಕಷ್ಟ.

ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧಿಸಿರುವ ದೇಶಗಳು:

ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಉದ್ದೇಶಿತ ಗುರಿ ಸಾಧಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ಪ್ಲಾಸ್ಟಿಕ್ ಚೀಲಗಳ ಮೇಲೆ ನಿಷೇಧ ಹೇರುತ್ತಿವೆ.

ಪ್ಲಾಸ್ಟಿಕ್ ವಿರುದ್ಧ ಹೋರಾಡಲು ಆಫ್ರಿಕನ್ ದೇಶಗಳು ದೊಡ್ಡ ಕ್ರಮಗಳನ್ನು ತೆಗೆದುಕೊಂಡಿವೆ. ಕೀನ್ಯಾ ಸರ್ಕಾರ 2017ರ ಆಗಸ್ಟ್‌ನಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ, ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿತು. ಕಾನೂನನ್ನು ಉಲ್ಲಂಘಿಸಿದರೆ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ $38,000 ವರೆಗೆ ದಂಡ ವಿಧಿಸಬಹುದು ಎಂದು ಘೋಷಿಸಿತು.

WhatsApp Image 2025 07 02 at 5.06.50 PM

ಬಿಬಿಸಿ ವರದಿಯ ಪ್ರಕಾರ, ಕೀನ್ಯಾದಲ್ಲಿ ಪ್ಲಾಸ್ಟಿಕ್ ಬ್ಯಾಗ್ ನಿಷೇಧದ ನಂತರ ಜನರಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ನಿಷೇಧದ ನಂತರ ಕೀನ್ಯಾ ಜನಸಂಖ್ಯೆಯ ಸುಮಾರು 80% ರಷ್ಟು ಜನರು ಕ್ಯಾರಿಯರ್ ಬ್ಯಾಗ್‌ಗಳನ್ನು ಬಳಸುವುದನ್ನು ನಿಲ್ಲಿಸಿದ್ದಾರೆ ಎಂದು ವರದಿ ದೃಢಪಡಿಸಿದೆ. ದೊಡ್ಡ ದೊಡ್ಡ ಅಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳು ಪ್ಲಾಸ್ಟಿಕ್ ಚೀಲ ನೀಡುವುದನ್ನು ನಿಲ್ಲಿಸಿವೆ. ಆದರೆ ಸಣ್ಣ-ಪುಟ್ಟ ಅಂಗಡಿಗಳಲ್ಲಿ ಸಣ್ಣ ಪ್ಲಾಸ್ಟಿಕ್ ಚೀಲಗಳನ್ನೇ ಬಳಸಲಾಗುತ್ತಿದೆ. ಈ ನಿಷೇಧದ ನಂತರ ಉಗಾಂಡಾ ಮತ್ತು ಟಾಂಜಾನಿಯಾದಿಂದ ಪ್ಲಾಸ್ಟಿಕ್ ಚೀಲಗಳನ್ನು ಅಕ್ರಮವಾಗಿ ತರುತ್ತಿರುವ ‘ಬ್ಯಾಗ್ ಕಾರ್ಟೆಲ್‌ಗಳು’ (ಕಳ್ಳಸಾಗಣೆ ಮಾರುಕಟ್ಟೆ) ಚಾಲ್ತಿಯಲ್ಲಿವೆಯಂತೆ.

ಫ್ರಾನ್ಸ್ನಲ್ಲಿ ಪ್ರತಿ ವರ್ಷ 4.73 ಬಿಲಿಯನ್ ಪ್ಲಾಸ್ಟಿಕ್ ಕಪ್‌ಗಳನ್ನು ಬಳಸಿ ಬಿಸಾಡಲಾಗುತ್ತಿತ್ತು. ಈ ಸಮಸ್ಯೆ ಬಗೆಹರಿಸಲು 2016ರಲ್ಲಿ ಇಡೀ ದೇಶ ಪ್ಲಾಸ್ಟಿಕ್ ಕಪ್‌ಗಳು, ಗ್ಲಾಸ್‌ಗಳು, ಪ್ಲೇಟ್‌ಗಳು ಮತ್ತು ಕಟ್ಲರಿಗಳನ್ನು ನಿಷೇಧಿಸಲು ಮುಂದಾಯಿತು. ಈ ಮೂಲಕ ಫ್ರಾನ್ಸ್, ಇಂತಹ ಪ್ಲಾಸ್ಟಿಕ್ ಉತ್ಪನ್ನಗಳನ್ನು ಒಂದೇ ನಿಷೇಧದ ಅಡಿಯಲ್ಲಿ ಒಳಗೊಂಡ ಮೊದಲ ದೇಶ ಎಂಬ ಗರಿಮೆಗೆ ಪಾತ್ರವಾಯಿತು. ಆದರೆ, ಈ ನಿರ್ಧಾರವು ಮುಂದೆ ಉಗ್ರ ವಿರೋಧಕ್ಕೂ ಗುರಿಯಾಯಿತು. ಕಡಿಮೆ ಆದಾಯದವರು, ಹೆಚ್ಚು ಪ್ಲಾಸ್ಟಿಕ್ ಉಪಯೋಗಿಸುವವರು, ಈ ನಿಷೇಧವು “ಸಮಾಜ ವಿರೋಧಿ” ಎಂದು ಆರೋಪಿಸಿದರು. ಹೀಗಾಗಿ, ಈ ನಿಷೇಧವು 2017ರಲ್ಲಿಯೇ ಜಾರಿಯಾಗಬೇಕಾಗಿದ್ದರೂ, 2020ರವರೆಗೆ ಮುಂದೂಡಲ್ಪಟ್ಟಿತ್ತು.

WhatsApp Image 2025 07 02 at 5.09.02 PM

ಮೊರಾಕೊ 2016ರ ಜುಲೈ 1ರಂದು ದೇಶಾದ್ಯಂತ ಪ್ಲಾಸ್ಟಿಕ್ ಚೀಲಗಳ ಉತ್ಪಾದನೆ, ಆಮದು, ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿತು. ವರ್ಷಕ್ಕೆ 3 ಬಿಲಿಯನ್ ಪ್ಲಾಸ್ಟಿಕ್ ಚೀಲಗಳನ್ನು ಬಳಸಿ, ಯುಎಸ್ ನಂತರ ವಿಶ್ವದ ಎರಡನೇ ಅತಿದೊಡ್ಡ ಪ್ಲಾಸ್ಟಿಕ್ ಬಳಕೆದಾರ ದೇಶ ಎನಿಸಲ್ಪಟ್ಟಿದ್ದ ಮೊರೊಕೊ ಈ ನಿಷೇಧದ ಮೂಲಕ ಪರಿಸರ ಪ್ರಗತಿಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿತು.

ಇದನ್ನೂ ಓದಿ: ಜೆ. ಬಾಲಕೃಷ್ಣರ ‘ಗಿಲ್ಗಮೆಶ್’ | ಅಮರತ್ವ ಅರಸಿ ಹೊರಟವನು ತಲುಪಿದ್ದೆಲ್ಲಿಗೆ?

ಮೊರಾಕೊ ವರ್ಲ್ಡ್ ನ್ಯೂಸ್ ಪ್ರಕಾರ, ‘ಪ್ಲಾಸ್ಟಿಕ್ ಚೀಲಗಳ ಹೊಸ ಮೂಲಗಳು ಹೊರಹೊಮ್ಮಿರುವುದರಿಂದ ಪ್ಲಾಸ್ಟಿಕ್ ಚೀಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿಲ್ಲ. ಕೆಲವು ಚೀಲಗಳನ್ನು ಅಕ್ರಮ ಉತ್ಪಾದನಾ ಕಾರ್ಯಾಗಾರಗಳು, ಕಳ್ಳಸಾಗಣೆ ಮತ್ತು ಅಕ್ರಮ ವಿತರಣೆಯಿಂದ ಉತ್ಪಾದಿಸಲಾಗುತ್ತದೆ’. ಆದಾಗ್ಯೂ, ಜುಲೈ 2016 ಮತ್ತು ಡಿಸೆಂಬರ್ 2018ರ ನಡುವೆ, ಮೊರಾಕೊ ಆಂತರಿಕ ಸಚಿವಾಲಯ ಮತ್ತು ಕೈಗಾರಿಕಾ ಸಚಿವಾಲಯವು ತಪಾಸಣೆ ಮತ್ತು ಕಾರ್ಯಾಚರಣೆಗಳನ್ನು ನಡೆಸಿತು. ಇದರ ಪರಿಣಾಮವಾಗಿ, 7,500 ಟನ್ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿ ನಾಶಪಡಿಸಲಾಯಿತು. ಇದರ ಹೊರತಾಗಿಯೂ, ನಿಷೇಧದ ಪರಿಣಾಮವು “ಅತ್ಯಂತ ತೃಪ್ತಿದಾಯಕ ಮತ್ತು ಉತ್ತೇಜನಕಾರಿಯಾಗಿದೆ” ಎಂದು ಕೈಗಾರಿಕಾ ಸಚಿವರು ಹೇಳಿಕೆ ನೀಡಿದ್ದರು. 2015 ಮತ್ತು 2018 ರ ನಡುವೆ ಚೀಲಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳ ಬಳಕೆ 
50%ರಷ್ಟು ಕಡಿಮೆಯಾಗಿದೆ ಎಂದೂ ಅವರು ಹೇಳಿದ್ದರು.

WhatsApp Image 2025 07 02 at 5.10.21 PM

2015ರಲ್ಲಿ, ಯುನೈಟೆಡ್ ಕಿಂಗ್‌ಡಮ್ ಪ್ಲಾಸ್ಟಿಕ್ ಚೀಲಗಳ ಮೇಲೆ ತೆರಿಗೆ ವಿಧಿಸಲು ಪ್ರಾರಂಭಿಸಿತು. ಇದು 9 ಬಿಲಿಯನ್ ಕಡಿಮೆ ಪ್ಲಾಸ್ಟಿಕ್ ಚೀಲಗಳ ಪ್ರಸರಣಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. 2019ರಲ್ಲಿ ಎಲ್ಲಾ ದೊಡ್ಡ ಚಿಲ್ಲರೆ ವ್ಯಾಪಾರಿಗಳಿಂದ ಏಕ ಬಳಕೆಯ ಚೀಲಗಳ ಮಾರಾಟವು ಹಿಂದಿನ ವರ್ಷಕ್ಕೆ ಹೋಲಿಸಿದರೆ 37% ರಷ್ಟು (1.11 ಬಿಲಿಯನ್) ಕುಸಿತ ಕಂಡಿತ್ತು. 2018ರ ಕೊನೆಯಲ್ಲಿ ಪ್ರಧಾನ ಮಂತ್ರಿ ಥೆರೆಸಾ ಮೇ ಅವರು ಪ್ಲಾಸ್ಟಿಕ್ ಸ್ಟ್ರಾಗಳು, ಸ್ಟಿರರ್‌ಗಳು ಮತ್ತು ಹತ್ತಿ ಮೊಗ್ಗುಗಳ (ಕಾಟನ್‌ ಬಡ್ಸ್) ನಿಷೇಧದ ಕುರಿತು ಸಮಾಲೋಚನಾ ಸಭೆ ನಡೆಸಿದರು. ಅಂದಿನಿಂದ ಯುಕೆಯಲ್ಲಿ ಪ್ರತಿ ವರ್ಷ ಎಸೆಯಲ್ಪಡುವ (ಯೂಸ್‌ & ಥ್ರೋ) ಅಂದಾಜು 8.5 ಬಿಲಿಯನ್ ಪ್ಲಾಸ್ಟಿಕ್ ಸ್ಟ್ರಾಗಳ ತಯಾರಿಕೆ ಮತ್ತು ಬಳಕೆಯನ್ನು ತಡೆಯುವ ಗುರಿ ಹೊಂದಲಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಪೂರ್ಣ ತೊಡೆದುಹಾಕಲು ಯುಕೆಯ 25 ವರ್ಷಗಳ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ, ಬಾಡಿ ಸ್ಕ್ರಬ್‌ಗಳು ಮತ್ತು ಫೇಸ್ ವಾಶ್‌ಗಳಂತಹ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕಂಡುಬರುವ ಸಣ್ಣ ಪ್ಲಾಸ್ಟಿಕ್‌(ಮೈಕ್ರೋಬೀಡ್‌)ಗಳನ್ನು ಗುರಿಯಾಗಿಸಿದೆ. ಆಗಾಗ್ಗೆ, ಈ ಮೈಕ್ರೋಬೀಡ್‌ಗಳು ಸಾಗರಗಳಲ್ಲಿ ಕೊನೆಗೊಳ್ಳುತ್ತವೆ ಮತ್ತು ಸಮುದ್ರ ಜೀವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಭಾರತವು 2022ರ ಜುಲೈ 1ರಿಂದ ಆಯ್ದ 19 ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಿತು. ಈ ಪೈಕಿ ಪ್ಲಾಸ್ಟಿಕ್ ಕಟ್ಲರಿ, ಸ್ಟ್ರಾ, ಕೋಲುಗಳು, ಥರ್ಮೋಕೋಲ್‌ನಂತಹ ಆಲಂಕಾರಿಕ ವಸ್ತುಗಳು ಸೇರಿವೆ. ಆದರೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು ಮತ್ತು ಬ್ಯಾನರ್‌ಗಳನ್ನು ಕ್ರಮವಾಗಿ 120 ಮೈಕ್ರಾನ್ ಮತ್ತು 100 ಮೈಕ್ರಾನ್ ದಪ್ಪದವರೆಗೂ ಅನುಮತಿಸಲಾಗಿದೆ.

WhatsApp Image 2025 07 02 at 5.11.39 PM

ಇದು ಪ್ಲಾಸ್ಟಿಕ್ ಬಳಕೆಯ ಕಡಿತಕ್ಕೆ ಭಾರತ ಇಟ್ಟ ಪ್ರಥಮ ದೊಡ್ಡ ಹೆಜ್ಜೆ ಎಂದು ಕರೆಯಬಹುದು. ಆದರೆ, ನಿಷೇಧ ಜಾರಿಯಾಗಿ ವರ್ಷಗಳು ಕಳೆದರೂ, ದೇಶದ ಹಲವೆಡೆ ಇನ್ನೂ ಈ ನಿಷೇಧಿತ ಪ್ಲಾಸ್ಟಿಕ್‌ ಬ್ಯಾಗ್‌ಗಳು, ಕವರ್‌ಗಳು ಬಳಕೆಯಲ್ಲಿರುವುದನ್ನು ನಿತ್ಯ ನೋಡುತ್ತಲೇ ಇದ್ದೇವೆ. ಈ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ನಿಯಮಗಳು ಜಾರಿಯಾಗಬೇಕು.

ಪ್ಲಾಸ್ಟಿಕ್‌ ಏಕೆ ನಿಷೇಧಿಸಬೇಕು?

ಏಕ ಬಳಕೆಯ ಪ್ಲಾಸ್ಟಿಕ್ ಸಮುದ್ರ ಹಾಗೂ ಸಮುದ್ರಜೀವಿಗಳಿಗೆ ಉಂಟುಮಾಡುವ ಸಮಸ್ಯೆಯ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಒಂದು ಅಂದಾಜಿನ ಪ್ರಕಾರ, 2050ರ ವೇಳೆಗೆ ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರುತ್ತದೆ ಎಂಬ ಆತಂಕಕಾರಿ ಮುನ್ಸೂಚನೆಯೂ ಇದೆ. ಇದಕ್ಕಿಂತ ಬೇಸರದ ಸಂಗತಿ ಏನೆಂದರೆ, ಈ ಘಟಕಗಳು ಹೆಚ್ಚುಕಡಿಮೆ ಪರಿಸರ ನ್ಯಾಯತೆ ಇಲ್ಲದ, ಸಾಮಾಜಿಕ ಸಮಾನತೆ ಇಲ್ಲದ ಪ್ರದೇಶಗಳಲ್ಲೇ (environmental justice communities) ಇರುತ್ತವೆ. ಅಂದರೆ, ಕಡಿಮೆ ಆದಾಯದ ಜನ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ನೆಲೆಸಿರುವ ಪ್ರದೇಶಗಳು. ಇವರು ಈ ವ್ಯವಸ್ಥೆಯಿಂದ ಉಂಟಾಗುವ ಆರೋಗ್ಯ ಭೀತಿಗಳನ್ನು ಅತ್ಯಧಿಕ ಮಟ್ಟದಲ್ಲಿ ಅನುಭವಿಸುತ್ತಿದ್ದಾರೆ. ಆದ್ದರಿಂದ, ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸುವುದು ಪರಿಸರದಷ್ಟೇ ಸಮಾಜದ ಆರೋಗ್ಯಕ್ಕೂ ಬಹುಮುಖ್ಯವಾದ ಕ್ರಮ.

ಅತಿ ಕಡಿಮೆ ಮೈಕ್ರಾನ್ ಪ್ಲಾಸ್ಟಿಕ್ ಸಾಮಾನ್ಯವಾಗಿ ಮರುಬಳಕೆಯಾಗುವುದಿಲ್ಲ. ಮರುಬಳಕೆಗೂ ಯೋಗ್ಯವಿಲ್ಲ. ನ್ಯಾಷನಲ್ ಜಿಯೋಗ್ರಾಫಿಕ್ ಪ್ರಕಾರ, ಪ್ಲಾಸ್ಟಿಕ್ ಕೈಗಾರಿಕೆ ಒಂದು ದೇಶವಾಗಿದ್ದರೆ, ಅದು ಚೀನಾ, ಅಮೆರಿಕ, ಭಾರತಗಳ ನಂತರ ನಾಲ್ಕನೇ ಅತಿದೊಡ್ಡ ಕಾರ್ಬನ್ ಉತ್ಪಾದಿಸುವ ರಾಷ್ಟ್ರವಾಗಿರುತ್ತಿತ್ತು.

ಆದರೆ, ಕೆಲವರು ಪ್ಲಾಸ್ಟಿಕ್ ಚೀಲಗಳು ಅಷ್ಟೊಂದು ಅಪಾಯಕಾರಿ ಅಲ್ಲವೆಂದು ವಾದಿಸುತ್ತಾರೆ. 2011ರಲ್ಲಿ ಯುಕೆ ಸರ್ಕಾರದ ವರದಿಯೊಂದರ ಪ್ರಕಾರ, ಪ್ಲಾಸ್ಟಿಕ್ ಚೀಲಗಳನ್ನು ತಯಾರಿಸುವಾಗ ಕಡಿಮೆ ಪ್ರಮಾಣದ ಕಾರ್ಬನ್ ಉತ್ಪತ್ತಿಯಾಗುತ್ತದೆ ಎಂದೂ, ಹತ್ತಿಯಿಂದ ತಯಾರಿಸಿದ ಚೀಲವೊಂದು ಹವಾಮಾನಕ್ಕೆ ಕಡಿಮೆ ಹಾನಿಕಾರಿಯಾಗಬೇಕೆಂದರೆ ಕನಿಷ್ಠ 131 ಬಾರಿ ಬಳಸಬೇಕು ಎಂದೂ ಹೇಳಲಾಗಿದೆ. ಆದರೆ ಈ ವರದಿ ಪ್ಲಾಸ್ಟಿಕ್‌ನ ವಿಷಕಾರಿತನ, ಪ್ಲಾಸ್ಟಿಕ್ ಎಸೆಯುವುದರಿಂದ ಉಂಟಾಗುವ ಸಮುದ್ರ ಜೀವಿಗಳ ಹಾನಿ, ಮತ್ತು ಹಗುರವಾಗಿ ಸುಡುವಾಗ ಹೊರಬರುವ ವಿಷಕಾರಿ ಹೊಗೆಗಳನ್ನು ಲೆಕ್ಕಿಸಿಲ್ಲ. ಹೀಗಾಗಿ, ಕಾರ್ಬನ್ ಉತ್ಪತ್ತಿ ಮಾತ್ರ ನೋಡಿ ಪ್ಲಾಸ್ಟಿಕ್ ಹೆಚ್ಚು ಉತ್ತಮ ಎನ್ನುವುದಾದರೆ, ಅದು ಸತ್ಯದ ಅರೆಭಾಗ ಮಾತ್ರ. ಪ್ಲಾಸ್ಟಿಕ್‌ನ ವಿಪತ್ತು ಕಾರ್ಬನ್ ಮಟ್ಟಕ್ಕೂ ಮೀರಿ, ಪರಿಸರ ಹಾಗೂ ಆರೋಗ್ಯದ ಮಟ್ಟದಲ್ಲೂ ಬಹು ದೊಡ್ಡದು.‌

ಇದನ್ನೂ ಓದಿ: ಕೊಳೆಗೇರಿಗಳೆಂದರೆ ‘ಪುಟ್ಟ ಭಾರತ’

ಈ ದಿನವನ್ನು ಹೇಗೆ ಆಚರಿಸಬಹುದು?

ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನದಂದು ಭಾಗವಹಿಸಲು ಮತ್ತು ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡಲು ಹಲವು ಮಾರ್ಗಗಳಿವೆ. ಶಾಪಿಂಗ್‌ ಹೋಗುವಾಗ ಪ್ಲಾಸ್ಟಿಕ್‌ ಚೀಲಕ್ಕೆ ಬದಲಾಗಿ ಮರುಬಳಕೆ ಮಾಡಬಹುದಾದ ಚೀಲಗಳನ್ನು ಬಳಸಿಕೊಳ್ಳಿ. ಇತರರು ಸಹ ಅದೇ ರೀತಿ ಮಾಡಲು ಪ್ರೋತ್ಸಾಹಿಸಿ. ನಿಮ್ಮೊಂದಿಗೆ ಕೆಲವು ಮರುಬಳಕೆ ಮಾಡಬಹುದಾದ ಚೀಲಗಳನ್ನು ಯಾವಾಗಲೂ ಇರಿಸಿಕೊಂಡಿರಿ. ಸ್ಥಳೀಯ ಉದ್ಯಾನವನಗಳು, ಕಡಲತೀರಗಳು ಅಥವಾ ಜಲಮಾರ್ಗಗಳಿಂದ ಪ್ಲಾಸ್ಟಿಕ್ ಚೀಲಗಳು ಮತ್ತು ಇತರ ಕಸವನ್ನು ತೆಗೆದುಹಾಕಲು ಸಮುದಾಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಥವಾ ಸಂಘಟಿಸಿ. ಪ್ಲಾಸ್ಟಿಕ್ ಚೀಲಗಳಿಂದ ಉಂಟಾಗುವ ಪರಿಸರ ಹಾನಿ ಮತ್ತು ಸುಸ್ಥಿರ ಪರ್ಯಾಯಗಳನ್ನು ಬಳಸುವುದರ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮ, ಸಮುದಾಯ ಕಾರ್ಯಕ್ರಮಗಳು ಅಥವಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಳಸಿ. ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸುವ ಸ್ಥಳೀಯ ಅಥವಾ ರಾಷ್ಟ್ರೀಯ ನೀತಿಗಳನ್ನು ಪಾಲಿಸಿ. ಸಂಬಂಧಿತ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಪ್ರಯತ್ನಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಿ. ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಜೀವನವನ್ನು ಉತ್ತೇಜಿಸಲು ಸ್ನೇಹಿತರು, ಕುಟುಂಬ ಮತ್ತು ನಿಮ್ಮ ಹಿಂಬಾಲಕರು, ಅನುಯಾಯಿಗಳು ನಿಮ್ಮೊಂದಿಗೆ ಸೇರಲು ಪ್ರೋತ್ಸಾಹಿಸಿ.

ಈ ದಿನವು ಪ್ರಪಂಚದಾದ್ಯಾಂತ ಜನರು, ಸಂಸ್ಥೆಗಳು ಮತ್ತು ಸರ್ಕಾರಗಳು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳನ್ನು ಅರಿತು, ಬಟ್ಟೆಯ ಚೀಲಗಳು, ಮರುಬಳಕೆಯ ಸಾಮಗ್ರಿಗಳು ಮತ್ತು ಇತರೆ ಪರಿಸರ ಸ್ನೇಹಿ ಪರ್ಯಾಯಗಳ ಕಡೆಗೆ ಮುಖ ಮಾಡಲು ಪ್ರೋತ್ಸಾಹಿಸುತ್ತದೆ. ಈ ಹಿನ್ನಲೆಯಲ್ಲಿ, ಪ್ರತಿಯೊಬ್ಬರೂ ನಿತ್ಯದ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಕಡಿಮೆ ಮಾಡುವುದು, ಸಮಾಜದಲ್ಲಿ ಅರಿವು ಮೂಡಿಸುವುದು ಮತ್ತು ಹೊಸ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವ ದಿಕ್ಕಿನಲ್ಲಿ ಹೊಣೆಗಾರಿಕೆಯ ಹೆಜ್ಜೆ ಇಡಬೇಕು. ಸುಲಭಕ್ಕೆ ಸಿಗುವ ಸೌಕರ್ಯಕ್ಕಿಂತ ಪರಿಸರದ ಭದ್ರತೆ ಮುಖ್ಯ ಎಂಬುದನ್ನು ಮರೆಯಬಾರದು.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈಗಾಗಲೇ ಸರಿಪಡಿಸಲಾರದಷ್ಟು ಪ್ಲಾಸ್ಟಿಕ್ನಿಂದ ಪರಿಸರ ಹಾಳಾಗಿದೆ. ಈಗಲಾದರೂ ಜನರು ಮತ್ತು ಸರಕಾರಗಳು ಪರಿಸರ ಸ್ನೇಹಿ ಜೀವನಶೈಲಿ ರೂಢಿಸಿಕೊಳ್ಳುವದು ಅನಿವಾರ್ಯ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X