ಟೀಮ್ ಇಂಡಿಯಾ ಕ್ರಿಕೆಟ್ ವೇಗಿ ಮೊಹಮ್ಮದ್ ಶಮಿ ತನ್ನ ಪತ್ನಿ ಹಸಿನ್ ಜಹಾನ್ ಮತ್ತು ಮಗಳು ಐರಾಗೆ ತಿಂಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಕೊಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಮೊಹಮ್ಮದ್ ಶಮಿ 2014 ರಲ್ಲಿ ಹಸಿನ್ ಜಹಾನ್ ಅವರನ್ನು ವಿವಾಹವಾಗಿದ್ದರು. 2015 ರಲ್ಲಿ ಈ ದಂಪತಿಗೆ ಮಗಳು ಜನಿಸಿದ್ದರು. ಆದರೆ 2018 ರಲ್ಲಿ ಶಮಿ ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಹಸಿನ್ ಜಹಾನ್ ಸುದ್ದಿಯಾಗಿದ್ದರು.
ಅಷ್ಟೇ ಅಲ್ಲದೆ ಶಮಿ ಮತ್ತು ಅವರ ಕುಟುಂಬದ ವಿರುದ್ಧ ಹಸಿನ್ ಕೋಲ್ಕತ್ತಾದ ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ ಮಾಸಿಕ 10 ಲಕ್ಷ ರೂ. ಜೀವನಾಂಶವನ್ನು ಸಹ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನು ಓದಿದ್ದೀರಾ? ಮದುವೆಯಾಗುವುದಾಗಿ ನಂಬಿಸಿ ಮೋಸ; ಸ್ಟಾರ್ ಬೌಲರ್ ಯಶ್ ದಯಾಳ್ ವಿರುದ್ಧ ಯುವತಿ ದೂರು
ಇದೀಗ ಈ ಪ್ರಕರಣದ ತೀರ್ಪು ಬಂದಿದ್ದು, ತನ್ನಿಂದ ದೂರವಾಗಿರುವ ಪತ್ನಿ ಹಸಿನ್ ಜಹಾನ್ ಮತ್ತು ಅವರ ಮಗಳಿಗೆ ತಿಂಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಕೊಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಈ ಮೊತ್ತವು ಕಳೆದ ಏಳು ವರ್ಷಗಳವರೆಗೆ ಅನ್ವಯವಾಗುತ್ತದೆ. ಅಂದರೆ ಶಮಿ ಈ ಅವಧಿಗೆ ಬಾಕಿ ಹಣವನ್ನು ಸಹ ಪಾವತಿಸಬೇಕಾಗುತ್ತದೆ. ಅಂದರೆ ಅವರು ಹಸಿನ್ ಜಹಾನ್‌ಗೆ 3 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.
ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರ ಪೀಠವು ಜುಲೈ 1, 2025 ರಂದು ಈ ತೀರ್ಪು ನೀಡಿದ್ದು. ಶಮಿ ತನ್ನ ಪತ್ನಿ ಹಸಿನ್ ಜಹಾನ್‌ಗೆ ಪ್ರತಿ ತಿಂಗಳು 1.5 ಲಕ್ಷ ರೂ. ಮತ್ತು ಮಗಳು ಐರಾಗೆ 2.5 ಲಕ್ಷ ರೂ. ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.