- ಸಿದ್ದರಾಮಯ್ಯ ಪೂರ್ಣಕಾಲಿಕ ಸಿಎಂ ವಿಚಾರ ನನಗೆ ಗೊತ್ತಿಲ್ಲ
- ಆಗಸ್ಟ್ ಮೊದಲ ವಾರದಲ್ಲಿ ದೆಹಲಿಯಲ್ಲಿ ಸಭೆ ಕರೆಯಲಾಗಿದೆ
ಮುಂದಿನ ಅವಧಿಗೆ ಮುಖ್ಯಮಂತ್ರಿ ಸ್ಥಾನ ಬೇಡುವೆ, ಈ ಅವಧಿಯ ಆಕಾಂಕ್ಷಿ ನಾನು ಅಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ಪೂರ್ಣಕಾಲಿಕ ಮುಖ್ಯಮಂತ್ರಿ ಆಗಿರುತ್ತಾರೋ ಇಲ್ಲವೋ ಎಂಬುದು ಹೈಕಮಾಂಡ್ ನಡುವೆಯಾದ ಚರ್ಚೆ. ನಮಗೆ ಆ ಬಗ್ಗೆ ಮಾಹಿತಿ ಇಲ್ಲ” ಎಂದರು.
“ಸಿಎಂ ಬದಲಾವಣೆ ಮಾತುಗಳು ನಮ್ಮ ಪಕ್ಷದಲ್ಲಿ ಕೇಳಿಬಂದಿಲ್ಲ. ಉತ್ತಮ ಆಡಳಿತ ನೀಡಬೇಕು ಎಂಬುದು ಎಲ್ಲರ ಆಶಯ. ಸಣ್ಣಪುಟ್ಟ ಅಸಮಾಧಾನಗಳು ಇವೆ. ಬೇಗ ಬಗೆಹರಿಯುತ್ತವೆ. ಕೇವಲ 34 ಸಚಿವ ಸ್ಥಾನಗಳು ಇವೆ. ಕೆಲವರಿಗೆ ಅವಕಾಶಗಳು ಸಿಕ್ಕಿಲ್ಲ. ಸಹಜವಾಗಿ ಮುನಿಸಿಕೊಂಡಿದ್ದಾರೆ” ಎಂದರು.
“ಆಗಸ್ಟ್ ಮೊದಲ ವಾರದಲ್ಲಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರು ಸಭೆ ಕರೆದಿದ್ದಾರೆ. ಹಿರಿಯ ನಾಯಕರು ಹೋಗುತ್ತಿದ್ದೇವೆ. ಲೋಕಸಭಾ ಚುನಾವಣೆ ತಯಾರಿ ಬಗ್ಗೆ ಸಭೆ ಇರುವ ಸಾಧ್ಯತೆ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮೇಲ್ಜಾತಿ ಬಿಗಿಮುಷ್ಟಿ’ಯಲ್ಲಿ ಹೈಕೋರ್ಟುಗಳು-ಬಹುಜನರೇಕೆ ದೂರ ದೂರ?
“ಬಿ ಕೆ ಹರಿಪ್ರಸಾದ್ ವಿಚಾರವಾಗಿ ಪ್ರತಿಕ್ರಿಯಿಸಿ, “ಮುಖ್ಯಮಂತ್ರಿ ಮಾಡುವ ಮತ್ತು ಕೆಳಗೆ ಇಳಿಸುವುದನ್ನು ಬಿ ಕೆ ಹರಿಪ್ರಸಾದ್ ಅವರು ಕೆಲವು ರಾಜ್ಯಗಳಲ್ಲಿ ಮಾಡಿದ್ದಾರೆ. ಅವರ ಮಾತನ್ನು ನಮ್ಮ ರಾಜ್ಯಕ್ಕೆ ಹೋಲಿಸುವ ಅವಶ್ಯಕತೆ ಇಲ. ಹೈಕಮಾಂಡ್ ಮಟ್ಟದಲ್ಲಿ ಅವರು ಕೆಲಸ ಮಾಡುವಾಗ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ನಡೆದಿದೆ” ಎಂದರು.