ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ನ 2,000 ಕೋಟಿ ರೂ. ಹಣ-ಆಸ್ತಿಯನ್ನು ಕಬಳಿಸಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಯಸಿದ್ದರು ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರ ಮುಂದೆ ತನಿಖಾ ವರದಿಯನ್ನು ಇಡಿ ಸಲ್ಲಿಸಿದೆ. ಇಡಿ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, “ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸ್ಥಾಪಿಸಲು ಪಿತೂರಿ ನಡೆಸಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ (ಎಐಸಿಸಿ) 90 ಕೋಟಿ ರೂ. ಸಾಲವನ್ನು ಪಡೆದ ಎಜೆಎಲ್‌ನ ಆಸ್ತಿಗಳನ್ನು ಕಬಳಿಸುವುದೇ ಹೊಸ ಕಂಪನಿ ಸ್ಥಾಪನೆಯ ಉದ್ದೇಶವಾಗಿತ್ತು. ಈ ಕಂಪನಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 76%ರಷ್ಟು ಶೇರುಗಳನ್ನು ಹೊಂದಿದ್ದರು” ಎಂದು ಆರೋಪಿಸಿದ್ದಾರೆ.
“ಎಜೆಎಲ್ ಲಾಭ ಗಳಿಸುತ್ತಿರಲಿಲ್ಲ. ಆದರೆ, 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿತ್ತು. ಆದಾಗ್ಯೂ, ಸಂಸ್ಥೆಯು ತಮ್ಮ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಎಐಸಿಸಿಯಿಂದ 90 ಕೋಟಿ ರೂಪಾಯಿ ಸಾಲವನ್ನು ಪಡೆಯಲಾಗಿತ್ತು. ‘ಅವರು (ಎಜೆಎಲ್) ನಾವು ನಿಮಗೆ (ಎಐಸಿಸಿ) ಮರುಪಾವತಿಸಲು ಸಾಧ್ಯವಿಲ್ಲ’ವೆಂದು ಹೇಳಿಕೊಂಡಿದ್ದರು. ಸಾಮಾನ್ಯವಾಗಿ, ಯಾವುದೇ ವಿವೇಕಯುತ ವ್ಯಕ್ತಿ ಮರುಪಾವತಿ ಮಾಡಲಾಗದ ಸಂಸ್ಥೆಗೆ 90 ಕೋಟಿ ರೂ. ಸಾಲ ಕೊಡಲು ಸಾಧ್ಯವೇ? ಇದು ಮಕ್ಕಳ ಆಟವೇ” ಎಂದು ಪ್ರಶ್ನಿಸಿದ್ದಾರೆ.
“ಯಂಗ್ ಇಂಡಿಯನ್ ಕಂಪನಿಯನ್ನು 90 ಕೋಟಿ ರೂಪಾಯಿ ಸಾಲಕ್ಕೆ ಬದಲಾಗಿ 2,000 ಕೋಟಿ ರೂಪಾಯಿಗಳ ಎಜೆಎಲ್ ಆಸ್ತಿಯನ್ನು ಕಸಿದುಕೊಳ್ಳಲು ರಚಿಸಲಾಗಿತ್ತು. ಸೋನಿಯಾ ಮತ್ತು ರಾಹುಲ್ ಗಾಂಧಿ ಈ 2,000 ಕೋಟಿ ರೂಪಾಯಿ ಮೌಲ್ಯದ ಎಜೆಎಲ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದ್ದರು. ರಾಹುಲ್ ಗಾಂಧಿ ಅವರು ಯಂಗ್ ಇಂಡಿಯನ್ ನಿರ್ದೇಶಕರಾಗಿ ನೇಮಕಗೊಂಡ ಆರು ದಿನಗಳಲ್ಲಿ, ಸಾಲವನ್ನು ಮರುಪಾವತಿಸಲು ಅಥವಾ ಅದನ್ನು ಈಕ್ವಿಟಿಯಾಗಿ ಪರಿವರ್ತಿಸಲು ಎಜೆಎಲ್‌ಗೆ ಪ್ರತಿನಿಧಿಗಳನ್ನು ಕಳಿಸಲಾಗಿತ್ತು” ಎಂದು ರಾಜು ಆರೋಪಿಸಿದ್ದಾರೆ.
ರಾಜು ಅವರ ವಾದವನ್ನು ಆಲಿಸಿದ ನ್ಯಾಯಾಧೀಶರು, “ಸಾರ್ವಜನಿಕ ವಲಯದ ಬ್ಯಾಂಕುಗಳಂತೆಯೇ ಎಐಸಿಸಿ ಕೂಡ ಎಜೆಎಲ್‌ನ ಸಾಲವನ್ನು ಮನ್ನಾ ಮಾಡುವ ಸಾಧ್ಯತೆಗಳಿವೆಯೇ” ಎಂದು ಪ್ರಶ್ನಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಸಂವಿಧಾನದ 370ನೇ ವಿಧಿ ಅಂಬೇಡ್ಕರ್ ಅವರ ಏಕ ಸಂವಿಧಾನ ಪರಿಕಲ್ಪನೆಗೆ ವಿರುದ್ಧವಾಗಿತ್ತೇ?
ಉತ್ತರಿಸಿದ ರಾಜು, “ಬ್ಯಾಂಕುಗಳು ಮೇಲಾಧಾರವಾಗಿ ಆಸ್ತಿಗಳನ್ನು ಪಡೆಯದೇ ಸುಸ್ತಿದಾರರ ಸಾಲಗಳನ್ನು ಮನ್ನಾ ಮಾಡುತ್ತವೆ. ಆದರೆ, ಈ ಸಂದರ್ಭದಲ್ಲಿ ಎಜೆಎಲ್ 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಅವುಗಳನ್ನು ಅವರು ಕೇವಲ 90 ಕೋಟಿ ರೂ. ಸಾಲಕ್ಕಾಗಿ ಬಿಟ್ಟುಕೊಟ್ಟುಕೊಟ್ಟಿದ್ದಾರೆ. ಈ ವಹಿವಾಟುಗಳಿಂದ ತಲೆದೂರಬಹುದಾದ ಸಮಸ್ಯೆಗಳಿಂದ ತಪ್ಪಿಸಲು ಎಐಸಿಸಿ ನೇರ ವಹಿವಾಟಿನಿಂದ ದೂರ ಉಳಿದಿತ್ತು. ಬದಲಾಗಿ, ಯಂಗ್ ಇಂಡಿಯನ್ ಕಂಪನಿಯನ್ನು ಹುಟ್ಟುಹಾಕಲಾಯಿತು” ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರರ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆಯ (PMLA) ಸೆಕ್ಷನ್ 3 (ಹಣಕಾಸು ಲಾಂಡರಿಂಗ್) ಮತ್ತು 4 (ಹಣಕಾಸು ಲಾಂಡರಿಂಗ್‌ಗೆ ಶಿಕ್ಷೆ) ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿದೆ. ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದೆ. ಪ್ರಕರಣದಲ್ಲಿ, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಹಾಗೂ ಯಂಗ್ ಇಂಡಿಯನ್ ಜೊತೆಗೆ ಸಂಬಂಧ ಹೊಂದಿದ್ದರೆಂದು ಹೇಳಲಾದ ದಿವಂಗತ ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಅವರನ್ನೂ ಇಡಿ ಆರೋಪಿಗಳನ್ನಾಗಿ ಹೆಸರಿಸಿದೆ.