ಈ ದಿನ ಸಂಪಾದಕೀಯ | ಅಪಾಯಕಾರಿ ಸೈಬರ್ ಅಪರಾಧ ಕುರಿತು ಜನ ಜಾಗೃತರಾಗಬೇಕಿದೆ

Date:

Advertisements
ಐಟಿ-ಬಿಟಿ ಕಂಪನಿಗಳು, ಸರ್ಕಾರ, ಪೊಲೀಸ್- ಸೈಬರ್ ಅಪರಾಧದ ಗಂಭೀರತೆಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆ ಕುರಿತು ಮಕ್ಕಳು, ಹಿರಿಯರಲ್ಲಿ ಜಾಗೃತಿ ಮೂಡಿಸಬೇಕು. ಜನಸಾಮಾನ್ಯರೂ ಜಾಗೃತರಾಗಬೇಕು.

ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಪ್ರತಿಯೊಂದಕ್ಕೂ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್, ಕಂಪ್ಯೂಟರ್- ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಳಸಲು ಮುಂದಾಗಿದ್ದೇವೆ. ಅದಕ್ಕೆ ತಕ್ಕಂತೆ ಎಟಿಎಂ, ಕ್ಯೂ ಆರ್ ಕೋಡ್, ಬ್ಯಾಂಕ್ ಕೆವೈಸಿ, ಟಿಕೆಟ್ ಕಾಯ್ದಿರಿಸುವಿಕೆ, ಯುಪಿಐ, ಇ-ಕಾಮರ್ಸ್ ಮುಂತಾದೆಡೆ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅವುಗಳ ಮೇಲಿನ ಅವಲಂಬನೆಯೂ ಅತಿಯಾಗುತ್ತಿದೆ.

ಕೂತ ಕಡೆಯೇ, ಬೆರಳ ತುದಿಯಲ್ಲಿಯೇ ಜಗತ್ತು ತೆರೆದುಕೊಳ್ಳಬೇಕೆಂದು ಬಯಸುತ್ತಿದ್ದೇವೆ. ಬಯಸಿದಂತೆಯೇ ಬಂದು ಬೀಳುವುದನ್ನು ಬೆರಗಿನಿಂದ ನೋಡುತ್ತಿದ್ದೇವೆ. ಬಂದದ್ದೆಲ್ಲವನ್ನು ಬಾಚಿ ತಬ್ಬಿಕೊಳ್ಳುತ್ತಿದ್ದೇವೆ. ಒಬ್ಬೊಬ್ಬರದು ಒಂದೊಂದು ಜಗತ್ತು. ಯಾರು ಯಾವ ಜಗತ್ತಿನಲ್ಲಿ ವಿಹರಿಸುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.  

ಬುದ್ಧಿ ಇರುವವರು ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ; ಇಲ್ಲದವರು ಎಡವಿ ಅನಾಹುತವನ್ನು ಆಹ್ವಾನಿಸಿಕೊಳ್ಳುತ್ತಾರೆ. ದುರದೃಷ್ಟಕರ ಸಂಗತಿ ಎಂದರೆ, ಸುಶಿಕ್ಷಿತರು, ನಿವೃತ್ತರು, ವೃತ್ತಿಪರರು, ಟೆಕ್ಕಿಗಳಂಥ ಪರಿಣಿತರೇ ಇಂಥ ವಂಚನೆಯ ಜಾಲಕ್ಕೆ ಬಲಿಯಾಗುತ್ತಿದ್ದಾರೆ.

Advertisements

ಇಂತಹವರಿಗಾಗಿಯೇ ಕಾದು ಕುಳಿತಿರುವ ಆಧುನಿಕ ಕಾಲದ ‘ಬುದ್ಧಿವಂತ’ ಖದೀಮರು, ನವನವೀನ ವಂಚನೆ, ಮೋಸಗಳ-  ಹನಿಟ್ರ್ಯಾಪ್, ಫೆಡೆಕ್ಸ್ ಕೊರಿಯರ್, ಶೇರ್ ಟ್ರೆಂಡಿಂಗ್, ಆನ್‌ಲೈನ್ ಪಾರ್ಟ್‌ಟೈಂ ಜಾಬ್, ನಕಲಿ ವಿಮೆ, ಮ್ಯಾಟ್ರಿಮೋನಿಯಲ್, ಉಡುಗೊರೆ ಆಮಿಷ, ಹ್ಯಾಕಿಂಗ್, ಓಎಲ್‌ಎಕ್ಸ್‌, ಫೇಕ್ ವೆಬ್ ಲಿಂಕ್, ಒಟಿಪಿ, ಲೋನ್ ಆ್ಯಪ್, ಡಿಜಿಟಲ್ ಅರೆಸ್ಟ್- ಒಂದಲ್ಲ ಎರಡಲ್ಲ ನೂರಾರು ಬಗೆಯ ಬಣ್ಣ ಬಣ್ಣದ ಬಲೆ ಬೀಸಿ ಮಿಕಗಳ ಹುಡುಕಾಟದಲ್ಲಿರುತ್ತಾರೆ. ಅವರು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಎಕ್ಸ್‌, ವಾಟ್ಸ್‌ಆ್ಯಪ್, ಟೆಲಿಗ್ರಾಂನಂತಹ ಜಾಲತಾಣಗಳನ್ನು ಬಳಸುತ್ತಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅತ್ತ ಮೋದಿ ಕೃಷಿಕರ ಕತ್ತು ಹಿಸುಕಿದ್ದಾರೆ, ಇತ್ತ ಸಿದ್ದು ಕೈ ಜೋಡಿಸಿದ್ದಾರೆ!

ಅಂಥದ್ದೆ ಮತ್ತೊಂದು ಮೋಸದ ನಕಲಿ ಬ್ಯಾಂಕ್‌ ಖಾತೆ ವಂಚನೆಯನ್ನು ಮೊನ್ನೆ ಬೆಂಗಳೂರಿನ ಸಿಸಿಬಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾರ್ವಜನಿಕರಿಗೆ ಹಣದಾಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚಕರ ಜಾಲಕ್ಕೆ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಂಡ ಸೈಬರ್ ವಂಚಕರು ಕೋಟ್ಯಂತರ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಶಂಕೆ ಇದೆ. ಇದುವರೆಗೆ ಸುಮಾರು 150 ಕೋಟಿ ರೂಪಾಯಿಗಳ ಹಣದ ವಹಿವಾಟಿನ ಬಗ್ಗೆ ಮಾಹಿತಿ ಇದ್ದು, ದೇಶಾದ್ಯಂತ ಸೈಬರ್‌ ವಂಚನೆ ಪ್ರಕರಣಗಳಲ್ಲಿ ಆರೋಪಿಗಳಿಂದ ತೆರೆಯಲಾಗಿದ್ದ 337 ಬ್ಯಾಂಕ್‌ ಖಾತೆಗಳು ಬಳಕೆಯಾಗಿರುವುದು ಪತ್ತೆಯಾಗಿವೆ. ಅಲ್ಲದೆ ನ್ಯಾಷನಲ್‌ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ(ಎನ್‌ಸಿಆರ್‌ಪಿ) ನೂರಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ಕುರಿತು ಮಾಹಿತಿ ಸಿಕ್ಕಿದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ನಕಲಿ ಬ್ಯಾಂಕ್‌ ಖಾತೆ ತೆರೆಯುವ, ಅದನ್ನು ಮತ್ತೊಬ್ಬರಿಗೆ ಮಾರುವ, ಅವರು ಆ ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಳ್ಳುವ ಬಹಳ ದೊಡ್ಡ ಜಾಲವೇ ಇದೆ. ಸೈಬರ್ ವಂಚನೆಯ ಜಾಲವೆಂಬುದು ಸಮುದ್ರವಿದ್ದಂತೆ. ಅದರ ಮೂಲ-ಆಳ-ಅಗಲ ‌ಹುಡುಕುವುದು ಕಷ್ಟದ ಕೆಲಸ. ಅದರ ಮೇಲೆ ಹಿಡಿತ ಸಾಧಿಸಿ, ನೀವು ಕಳೆದುಕೊಂಡದ್ದನ್ನು ಮರಳಿ ತರುವುದು ಸಾಹಸವೇ ಸರಿ.  

ಸಾಮಾನ್ಯವಾಗಿ ನಕಲಿ ಖಾತೆಗಳೆಂಬ ವಂಚನೆಯ ಬಲೆಗೆ ಬೀಳುವ ಮಿಕಗಳು- ವಿದ್ಯಾರ್ಥಿಗಳು, ವಲಸೆ ಕೂಲಿ ಕಾರ್ಮಿಕರು, ಬಡವರು. ಇವರಿಗೆ ಎರಡರಿಂದ ಐದು ಸಾವಿರದವರೆಗೆ ಹಣ ನೀಡುವ ಸೈಬರ್‌ ವಂಚಕರು, ಅವರಿಂದ ಆಧಾರ್‌ ದಾಖಲೆ ಸಂಗ್ರಹಿಸುತ್ತಾರೆ. ಇನ್ನು ಕೆಲವರು ಸಮೀಕ್ಷೆ ಹೆಸರಿನಲ್ಲಿ, ಜೆರಾಕ್ಸ್‌ ಮಳಿಗೆಗಳಿಂದ, ಗೂಗಲ್‌ನಲ್ಲಿ ಹುಡುಕಾಡುವುದರಿಂದ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಇದೇ ದಾಖಲೆಗಳನ್ನು ಮೊಬೈಲ್ ಸೇವಾ ಕಂಪನಿಗಳಿಗೆ ನೀಡಿ ಹೊಸ ಸಿಮ್‌ ಪಡೆಯಲಾಗುತ್ತದೆ. ಆ ನಂಬರ್‌ ಮತ್ತು ಆಧಾರ್‌ ದಾಖಲೆ ಬಳಸಿ ಬ್ಯಾಂಕ್‌ ಖಾತೆ ತೆರೆಯಲಾಗುತ್ತದೆ. ಈ ರೀತಿ ಖಾತೆ ತೆರೆಯಲು ಕೆಲ ಬ್ಯಾಂಕ್‌ಗಳು ಸಹಕರಿಸುತ್ತವೆ. ಈ ಕೃತ್ಯದಲ್ಲಿ ಬ್ಯಾಂಕ್‌ ಅಧಿಕಾರಿಗಳು ಕೂಡ ಶಾಮೀಲಾಗಿರುತ್ತಾರೆ.

ಈ ನಕಲಿ ಬ್ಯಾಂಕ್‌ ಖಾತೆಗಳನ್ನು ಮಾರುವ ದೊಡ್ಡ ಜಾಲವೇ ಇದೆ. ಈ ಖಾತೆಗಳನ್ನು ಖರೀದಿಸುವ ಸೈಬರ್‌ ವಂಚಕರು, ಹಲವು ರೀತಿಯಲ್ಲಿ ವಂಚನೆಗೊಳಗಾಗುವ ವ್ಯಕ್ತಿಗಳಿಂದ ಈ ನಕಲಿ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ. ಬಳಿಕ ಈ ಮೊತ್ತವನ್ನು ಬಿನಾನ್ಸ್‌ ಪ್ಲಾಟ್‌ಫಾರಂ ಹಾಗೂ ಕ್ರಿಪ್ಟೋ ಕರೆನ್ಸಿಗೆ ಬದಲಾವಣೆ ಮಾಡಿಕೊಳ್ಳುತ್ತಾರೆ. ಡಿಜಿಟಲ್‌ ವ್ಯಾಲೆಟ್‌ಗಳ ಮುಖಾಂತರ ಜಾಲದ ಕಿಂಗ್‌ಪಿನ್‌ಗೆ ಕಳುಹಿಸುತ್ತಾರೆ. ಆ ತಕ್ಷಣವೇ ಬ್ಯಾಂಕ್‌ ಖಾತೆಯನ್ನು ಖೈದು ಮಾಡುತ್ತಾರೆ. ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡು ಸಿಮ್‌ ಸುಳಿವು ಆಧರಿಸಿ ತನಿಖೆ ನಡೆಸಿದಾಗ- ವಿದ್ಯಾರ್ಥಿಗಳು, ವಲಸೆ ಕೂಲಿ ಕಾರ್ಮಿಕರು, ಬಡವರೆಂಬ ಅಮಾಯಕರು ಸಿಕ್ಕಿಬೀಳುತ್ತಾರೆ.

ಸೈಬರ್ ಕ್ರೈಂ ಎನ್ನುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಅಡಿಯಲ್ಲಿ ಬರುವ ಅಪರಾಧ. ಅಕ್ರಮವಾಗಿ ಹಣ ಗಳಿಸಲು ಎಸಗುವ ಸೈಬರ್ ಅಪರಾಧ. ಲಭ್ಯವಿರುವ ಮಾಹಿತಿಯ ಆಧಾರದಲ್ಲಿ, ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ(I4C)ದ ವರದಿಯ ಪ್ರಕಾರ, 2024ರಲ್ಲಿ ಭಾರತದಲ್ಲಿ 19 ಲಕ್ಷಕ್ಕೂ ಹೆಚ್ಚು ಸೈಬರ್ ಅಪರಾಧ ದೂರುಗಳು ದಾಖಲಾಗಿವೆ. CloudSEK ವರದಿಯ ಪ್ರಕಾರ, 2025ರಲ್ಲಿ ಭಾರತದಲ್ಲಿ ಸೈಬರ್ ಅಪರಾಧದಿಂದಾಗಿ 20 ಸಾವಿರ ಕೋಟಿ ನಷ್ಟವಾಗಬಹುದೆಂದು ಅಂದಾಜಿಸಲಾಗಿದೆ.

2024ರಲ್ಲಿ ಕರ್ನಾಟಕದಲ್ಲಿ ಒಟ್ಟು 22,445 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಇದು ತಿಂಗಳಿಗೆ ಸರಾಸರಿ 1,870, ದಿನಕ್ಕೆ ಸುಮಾರು 62 ಪ್ರಕರಣಗಳು. ಅದು ಕೂಡ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು ಮಾತ್ರ.

ಮೇಲಿನ ಅಂಕಿಅಂಶಗಳನ್ನು ಗಮನಿಸಿದ ಪರಿಣಿತರು 2025ರಲ್ಲಿ, ವಿಶೇಷವಾಗಿ ಮಾಲ್‌ವೇರ್, ರ್‍ಯಾನ್ಸಮ್‌ವೇರ್ ಮತ್ತು ಕ್ರಿಪ್ಟೋ ದಾಳಿಗಳು ಹೆಚ್ಚಾಗುವ ಸೂಚನೆ ನೀಡಿದ್ದಾರೆ. ಆ ದಾಳಿಗಳಿಂದ ಬ್ಯಾಂಕಿಂಗ್, ಶೇರ್ ಮಾರ್ಕೆಟ್, ಇ-ಕಾಮರ್ಸ್, ಆರ್ಥಿಕ ಸೇವಾ ಕ್ಷೇತ್ರಗಳಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಧಿಕಾರಸ್ಥರು ಅನ್ನ ತಿನ್ನುವವರೇ ಆದರೆ, ಭೂ ಸ್ವಾಧೀನ ಕೈಬಿಡಲಿ

ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೈಬರ್ ಕ್ರೈಮ್ ಕೂಡ ಮತ್ತೊಂದು ಬಗೆಯ ಕ್ರೈಮ್ ಎಂದೇ ಭಾವಿಸಿವೆ; ಈಗಿದ್ದ ಪೊಲೀಸ್ ಇಲಾಖೆಗೇ ಹೆಚ್ಚುವರಿ ಜವಾಬ್ದಾರಿ ವಹಿಸಿ, ಕೈ ತೊಳೆದುಕೊಂಡಿವೆ. ಆದರೆ, ಸೈಬರ್ ವಂಚಕರು ತಂತ್ರಜ್ಞಾನದಷ್ಟೇ ಮುಂದಿದ್ದಾರೆ. ಐಟಿ-ಬಿಟಿ ಕಂಪನಿಗಳು, ಸರ್ಕಾರ, ಪೊಲೀಸ್- ಎಷ್ಟೇ ಎಚ್ಚರಿಕೆ ವಹಿಸಿದರೂ ತಡೆಗಟ್ಟುವುದು, ನಿಯಂತ್ರಿಸುವುದು ದಿನದಿಂದ ದಿನಕ್ಕೆ ಸವಾಲಾಗುತ್ತಿದೆ.

ಏತನ್ಮಧ್ಯೆ, ಹೆಚ್ಚುತ್ತಿರುವ ಸೈಬರ್ ಅಪರಾಧವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ‘ಕರ್ನಾಟಕ ಸೈಬರ್ ಸೆಕ್ಯುರಿಟಿ ಪಾಲಿಸಿ-2024’ ಜಾರಿಗೆ ತಂದಿದೆ. ಸೈಬರ್ ಸೆಕ್ಯುರಿಟಿ ನೀತಿಯ ಜೊತೆಗೆ ಸಿಸ್ಕೋ ಸಹಯೋಗದೊಂದಿಗೆ ‘ಸೈಬರ್ ಸೆಕ್ಯುರಿಟಿ’ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದಷ್ಟೇ ಸಾಲದು, ಸೈಬರ್ ಅಪರಾಧದ ಗಂಭೀರತೆಯನ್ನು ಅರಿತು, ಬಹುದೊಡ್ಡ ಸಂಖ್ಯೆಯಲ್ಲಿ ಸೈಬರ್ ಪ್ರವೀಣರು ಅಥವಾ ಸೈಬರ್ ತಜ್ಞರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಅವರು ಅಗತ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆ ಕುರಿತು ಮಕ್ಕಳು, ಹಿರಿಯರಲ್ಲಿ ಜಾಗೃತಿ ಮೂಡಿಸಬೇಕು. ಜನಸಾಮಾನ್ಯರೂ ಜಾಗೃತರಾಗಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X