“ಮುಖ್ಯ ಕಾರ್ಯದರ್ಶಿ ಶಾಲಿನಿ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್ ರವಿಕುಮಾರ್ ವಿರುದ್ಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ನಿಯೋಗ ಮನವಿ ಸಲ್ಲಿಸಿದೆ.
ಗುರುವಾರ ಸಭಾಪತಿಗಳನ್ನು ಭೇಟಿಯಾದ ಸಲೀಂ ಅಹ್ಮದ್ ನಿಯೋಗವು, ಎನ್ ರವಿಕುಮಾರ್ ಹೇಳಿಕೆ ಸಾರ್ವಜನಿಕವಾಗಿ ಮತ್ತು ಮಾಧ್ಯಮ/ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಂಡಿದ್ದು, ಅಧಿಕಾರಿಕ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿ ವ್ಯಕ್ತಿತ್ವವನ್ನು ಅವಹೇಳನಗೊಳಿಸುವ ಕೆಲಸವಾಗಿದೆ. ಈ ರೀತಿಯ ಹೇಳಿಕೆಗಳು ಸರ್ಕಾರದ ಅತೀ ಉನ್ನತ ಪದವಿಯ ನಾಗರಿಕ ಸೇವಾಧಿಕಾರಿಗಳ ಧೈರ್ಯ ಮತ್ತು ಪ್ರಾಮಾಣಿಕತೆಗೆ ಚ್ಯುತಿ ತರುತ್ತದೆ” ಎಂದು ಮನವರಿಕೆ ಮಾಡಿತು.
ಎನ್ ರವಿಕುಮಾರ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿಧಾನ ಪರಿಷತ್‌ನ ನಿಯಮಗಳು ಹಾಗೂ ನೈತಿಕ ಮಾರ್ಗಸೂಚಿಗಳ ಪ್ರಕಾರ ರವಿಕುಮಾರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಸಭಾಪತಿಗಳನ್ನು ನಿಯೋಗ ಆಗ್ರಹಿಸಿತು.
“ತ್ವರಿತ ಕ್ರಮ ಕೈಗೊಂಡಲ್ಲಿ ಸಾರ್ವಜನಿಕ ಸೇವೆಯ ಗೌರವ ಮತ್ತು ಪರಿಷತ್ತಿನ ಪವಿತ್ರತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ. ಈ ನಡೆ ಸಂಸತ್ತಿನ ನೀತಿ ಸಂಹಿತೆಯ ನಿಯಮಗಳಿಗೆ ವಿರುದ್ಧವಾಗಿದ್ದು, ಮಹಿಳಾ ಅಧಿಕಾರಿಗಳಿಗೆ ಅಗೌರವ ಪ್ರದರ್ಶಿಸುವ ಪ್ರವೃತ್ತಿಯಾಗಿರುತ್ತದೆ. ವ್ಯಕ್ತಿಗತ ನಿಂದನೆ ಮಾಡುವ ಮೂಲಕ, ಸಮಾಜದಲ್ಲಿ ಕೀಳು ಅಭಿರುಚಿ ಎಬ್ಬಿಸುವ ಈ ಹೇಳಿಕೆ ವಿಧಾನ ಪರಿಷತ್ ಸದಸ್ಯನ ಸ್ಥಾನಕ್ಕೆ ಒಪ್ಪದಂತಹ ಹಾಗೂ ಪರಿಷತ್ತಿನ ಗೌರವವನ್ನು ಕುಗ್ಗಿಸುವ ಪ್ರವೃತ್ತಿಯಾಗಿರುತ್ತದೆ” ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಸಲೀಂ ಅಹಮದ್ ನಿಯೋಗದಲ್ಲಿ ಬಿ ಕೆ ಹರಿಪ್ರಸಾದ್, ಮಂಜುನಾಥ್ ಭಂಡಾರಿ, ನಾಗರಾಜ ಯಾದವ್, ಬಲ್ಕಿಸ್ ಬಾನು
ಮಲ್ಲಾಜಮ್ಮ, ರಾಮೋಜಿ ಗೌಡ, ಡಿಟಿ ಶ್ರೀನಿವಾಸ್ ಹಾಗೂ ರಮೇಶ್ ಬಾಬು ಇದ್ದರು.