ಈ ದಿನ ಸಂಪಾದಕೀಯ | ಬುದ್ದಿ ಕಲಿಯದ ಕಾಂಗ್ರೆಸ್‌ ಮತ್ತು ಗಲಭೆ ಹುಡುಕುವ ಬಿಜೆಪಿ

Date:

Advertisements
ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ ಕಾಂಗ್ರೆಸ್‌ ಪಕ್ಷ ಕೋಮುವಾದಿಗಳನ್ನು ಮಟ್ಟ ಹಾಕಲಿದೆ ಎಂಬ ನಿರೀಕ್ಷೆಯನ್ನು ಸುಳ್ಳು ಮಾಡಿದೆ. ಹಿಂದಿನ ಬಾರಿ ಮಾಡಿದ ತಪ್ಪುಗಳಿಂದ ಪಾಠ ಕಲಿತಿದ್ದಾರೆ, ಈ ಬಾರಿ ಕಿಡಿಗೇಡಿಗಳ ಬಾಲ ಕತ್ತರಿಸುತ್ತಾರೆ ಎಂಬ ನಂಬಿಕೆಯನ್ನು ಹುಸಿ ಮಾಡಿದ್ದಾರೆ 

ಉಡುಪಿಯ ಪ್ಯಾರಾ ಮೆಡಿಕಲ್‌ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಜುಲೈ18ರಂದು ಮಧ್ಯಾಹ್ನ ತರಗತಿ ಮುಗಿಸಿಕೊಂಡು ರೆಸ್ಟ್‌ ರೂಮಿಗೆ ಹೋಗಿದ್ದಾರೆ. ಅಲ್ಲಿ ಕುಚೇಷ್ಟೆಗಿಳಿದ ಅವರು ತಮ್ಮ ಗೆಳತಿ ಶೌಚಾಲಯದೊಳಗೆ ಇದ್ದಾಳೆ ಎಂದು ಊಹಿಸಿ ಮೊಬೈಲ್‌ನಲ್ಲಿ ವಿಡಿಯೊ ಮಾಡಲು ಮುಂದಾಗಿದ್ದಾರೆ. ಆದರೆ ಅಲ್ಲಿ ಇದ್ದಿದ್ದು ಬೇರೆ ವಿದ್ಯಾರ್ಥಿನಿ. ತನ್ನ ವಿಡಿಯೊ ಮಾಡುತ್ತಿರುವುದನ್ನು ಗಮನಿಸಿದ ಆಕೆ ಸಿಟ್ಟಾದಾಗ ವಿಷಯ ತಿಳಿಸಿದ ಈ ಮೂವರು ವಿದ್ಯಾರ್ಥಿನಿಯರು ಕ್ಷಮೆ ಕೋರಿ ಆಕೆಯ ಎದುರಲ್ಲೇ ವಿಡಿಯೊ ಡಿಲಿಟ್‌ ಮಾಡಿದ್ದಾರೆ.

ಈ ವಿಚಾರ ಆಡಳಿತ ಮಂಡಳಿಗೆ ಗೊತ್ತಾಗಿ ಮೊಬೈಲ್‌ ವಶಕ್ಕೆ ಪಡೆದು ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ. ಸಂತ್ರಸ್ತ ವಿದ್ಯಾರ್ಥಿನಿಯೂ ಅವರನ್ನು ಕ್ಷಮಿಸಿ ದೂರು ಕೊಡಲು ನಿರಾಕರಿಸಿದ್ದಾಳೆ. ಇದು ಒಂದು ಮಟ್ಟಿಗೆ ಬಗೆಹರಿದ ಸಮಸ್ಯೆ ಆದರೆ ಇದಕ್ಕಾಗಿಯೇ ಕಾದು ಕುಳಿತಿದ್ದ ಬಿಜೆಪಿಯವರ ಕಲ್ಪನಾ ಲಹರಿ ಕೆಲಸ ಮಾಡಿದೆ. ಅಲ್ಲೊಂದು ಹಿಡನ್‌ ಕ್ಯಾಮೆರಾ, ಸ್ನಾನದ ವಿಡಿಯೋ ಹಾಗೂ ಮುಸ್ಲಿಂ ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಹಂಚಿರುವುದು ಕಾಣಿಸಿದೆ! ಈ ಕಟ್ಟುಕತೆಯನ್ನೇ ಹಲವು ಮೇಧಾವಿಗಳು ಟ್ವೀಟ್‌ ಮಾಡಿದ್ದಾರೆ. ‘ಭಜನಾಮಂಡಳಿ’ಮಾಧ್ಯಮಗಳು ಕಲ್ಪನೆ ಕಟ್ಟುಕತೆಗಳ ಟ್ವೀಟುಗಳನ್ನೇ
ಇಪ್ಪತ್ತನಾಲ್ಕು ಗಂಟೆಯೂ ಚರ್ಚಿಸಿವೆ.

ಪೊಲೀಸರ ಗಮನಕ್ಕೆ ಈ ವಿಚಾರವನ್ನು ತಂದಾಗ ಅವರೂ ಮೊಬೈಲ್‌ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷಿಸಿದಾಗ ಸ್ವಾಭಾವಿಕವಾಗಿಯೇ ಕಟ್ಟುಕತೆಯ ವಿಡಿಯೋ ಸಿಕ್ಕಿಲ್ಲ. ಫಾರ್ವರ್ಡ್‌ ಆಗಿರುವ ಕುರುಹು ಇಲ್ಲ. ಆಡಳಿತ ಮಂಡಳಿ ಮತ್ತು ಎಸ್‌ ಪಿ ಅವರು ಈ ಸಂಗತಿಯನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ನಂತರವೂ ಬಿಜೆಪಿಯವರು ತೃಪ್ತರಾಗಿಲ್ಲ. ಅವರ ಒತ್ತಡಕ್ಕೆ ಮಣಿದ ಪೊಲೀಸ್‌ ಇಲಾಖೆ ಜು.26ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲ ಜು.26ರಂದು ಸಂಜೆಯೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ಉಡುಪಿಗೆ ಬಂದು ಎಸ್‌ ಪಿ ಮತ್ತು ಡಿಸಿ ಅವರ ಜೊತೆ ಚರ್ಚಿಸಿ ಈ ಪ್ರಕರಣ ಗಂಭೀರ ಅಲ್ಲ, ಕ್ಯಾಮೆರಾ ಅಡಗಿಸಿ ಇಟ್ಟಿರಲಿಲ್ಲ ಎಂಬುದನ್ನು ಮಾಧ್ಯಮಗಳಿಗೆ ತಿಳಿಸಿದ್ದರು.

Advertisements

ಜು. 27ರಂದು ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ ನಂತರ ನೀಡಿದ ಖುಷ್ಬೂ ಹೇಳಿಕೆ ಅತ್ಯಂತ ಜವಾಬ್ದಾರಿಯಿಂದ ಕೂಡಿತ್ತು. ಪ್ರಕರಣಕ್ಕೆ ಕೋಮು ಬಣ್ಣ ಬಳಿದು, ರಾಡಿ ಎಬ್ಬಿಸಲು ಹೊರಟ ಬಿಜೆಪಿಯವರ ಕಪಾಳಕ್ಕೆ ಬಾರಿಸಿದಂತಿತ್ತು. ಖುಷ್ಬೂ ಬಿಜೆಪಿ ಸೇರಿದ ನಂತರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿದ್ದಾರೆ ಎಂಬುದನ್ನು ಬಿಜೆಪಿಯವರೇ ಮರೆತಂತಿದೆ. ಬಿಜೆಪಿ ನಾಯಕರು ಸಮಾಧಾನಗೊಂಡಿಲ್ಲ. ಇಂದು(ಜು.28) ಉಡುಪಿಯಲ್ಲಿ ಬೃಹತ್‌ ಪ್ರತಿಭಟನೆ
ನಡೆಸಿ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್‌ ವಿರುದ್ಧ ಕೂಗಲಾಗಿರುವ ಘೋಷಣೆಗಳು ಕೀಳು ಅಭಿರುಚಿಯವು.

ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ ಕಾಂಗ್ರೆಸ್‌ ಪಕ್ಷ ಕೋಮುವಾದಿಗಳನ್ನು ಮಟ್ಟ ಹಾಕಲಿದೆ ಎಂಬ ನಿರೀಕ್ಷೆಯನ್ನು ಹುಸಿ ಮಾಡಿದೆ. ಹಿಂದಿನ ಬಾರಿ ಮಾಡಿದ ತಪ್ಪುಗಳಿಂದ ಪಾಠ ಕಲಿತಿದ್ದಾರೆ, ಈ ಬಾರಿ ಕಿಡಿಗೇಡಿಗಳ ಬಾಲ ಕತ್ತರಿಸುತ್ತಾರೆ ಎಂಬ ನಂಬಿಕೆಯನ್ನು ಹುಸಿ ಮಾಡಿದ್ದಾರೆ. ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ, ಕಾನೂನು ಕೈಗೆತ್ತಿಕೊಂಡರೆ ಬಜರಂಗದಳ ನಿಷೇಧ ಮಾಡುವ ಅಬ್ಬರದ ಹೇಳಿಕೆಗಳನ್ನು ನೀಡಿದ್ದ ಕೆಲವು ಮಂತ್ರಿಗಳು ಈಗ ತಣ್ಣಗಾಗಿದ್ದಾರೆ. ಸ್ವತಃ ಗೃಹಸಚಿವ ಪರಮೇಶ್ವರ್‌ ಕೂಡಾ ಸಮಾಜಘಾತಕರ ಮೇಲೆ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದರು.

ಪರಮೇಶ್ವರ್‌ ಹಿಂದೆಯೂ ಗೃಹಸಚಿವರಾಗಿ ಕೆಲಸ ಮಾಡಿದವರು. ಅವರ ಕಾರ್ಯವೈಖರಿ ಆಗಲೂ ಟೀಕೆಗೆ ಗುರಿಯಾಗಿತ್ತು. ಈಗ ಮತ್ತೆ ಗೃಹಸಚಿವರ ಬಗ್ಗೆ ಅಪಸ್ವರ ಬರಲು ಉಡುಪಿಯ ಘಟನೆ ಕಾರಣವಾಗಿದೆ. ಸಂಘಿಗಳು ತಮ್ಮ ಅಜೆಂಡಾವನ್ನು ಜಾರಿಗೊಳಿಸುವಲ್ಲಿ ಒಂದಿಂಚೂ ಹಿಂದೆ ಸರಿದಿಲ್ಲ. ಉಡುಪಿಯ ಪ್ರಕರಣದಲ್ಲಿ ಎಲ್ಲ ತನಿಖೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ಹೇಳಿದ ಮೇಲೂ, ಆರೋಪಿತರ ಮೇಲೆ ಸ್ವಯಂಪ್ರೇರಿತ ದೂರ ದಾಖಲಾದ ಮೇಲೂ ಬಿಜೆಪಿಯವರು ಪ್ರತಿಭಟನೆ ನಡೆಸುವ ಅಗತ್ಯ ಏನಿತ್ತು?

ಹಿಜಾಬ್‌ ಗಲಭೆಯ ಮುಖ್ಯ ಸೂತ್ರಧಾರಿ ಯಶ್‌ಪಾಲ್‌ ಸುವರ್ಣ ಏಕಾಏಕಿ ಬಿಜೆಪಿಯ ದೊಡ್ಡ ನಾಯಕನಾಗಿ ಟಿಕೆಟ್‌ ಕೂಡಾ ಗಿಟ್ಟಿಸಿಕೊಂಡು ಗೆದ್ದು ಶಾಸಕರಾಗಿದ್ದಾರೆ. ಮೊದಲ ಅಧಿವೇಶನದಲ್ಲಿಯೇ ಸದನದಲ್ಲಿ ಅನುಚಿತವಾಗಿ ನಡೆದುಕೊಂಡು ಕಲಾಪದಿಂದ ಅಮಾನತಾಗಿದ್ದಾರೆ. ಉಡುಪಿಯ ಬೀದಿಯಲ್ಲಿ ಎಬಿವಿಪಿ ಹುಡುಗರ ಜೊತೆ ಸೇರಿಕೊಂಡು ಪೊಲೀಸರನ್ನು ತಳ್ಳಾಡಿ ಪುಂಡಾಟ ಮೆರೆದಿದ್ದಾರೆ. ಇಂದಿನ ಪ್ರತಿಭಟನೆಯ ಸಂದರ್ಭದಲ್ಲಿ ಜಿ ಪರಮೇಶ್ವರ್‌ ಕುಟುಂಬದ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಟ್ಟಿದ್ದಾರೆ.

ಕೇವಲ ಒಂದು ತಿಂಗಳ ಹಿಂದೆ ತೀರ್ಥಹಳ್ಳಿಯ ಯುವಕ ಹಲವು ಯುವತಿಯರ ಜೊತೆ ಸಲುಗೆ ಬೆಳೆಸಿ ಅವರ ನಗ್ನ ದೇಹದ ಚಿತ್ರೀಕರಣ ಮಾಡಿ ನಂತರ ಬ್ಲ್ಯಾಕ್‌ ಮೇಲ್‌ ಮಾಡಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ. ಆತ ಹಿಂದೂ, ಮೇಲಾಗಿ ಆ ಹೆಣ್ಣುಮಕ್ಕಳೂ ಹಿಂದೂ ಧರ್ಮದವರೇ. ಆದರೆ ಬಿಜೆಪಿಯವರು ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ಮಾಡಲೇ ಇಲ್ಲ. ಯಾಕೆಂದರೆ ಆತ ಎಬಿವಿಪಿಯ ಮುಖಂಡನೇ ಆಗಿದ್ದ! ಮಣಿಪುರದ ವಿಚಾರದಲ್ಲೂ ಬಿಜೆಪಿಗರದ್ದು ಮೌನ. ಬ್ರಿಜ್‌ಭೂಷಣ್‌ ವಿರುದ್ಧವೂ ಪ್ರತಿಭಟನೆ ಇಲ್ಲ. ಯಾವುದೇ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಗಳಿದ್ದರೆ ಮಾತ್ರ ಉಗ್ರ ಪ್ರತಿಭಟನೆ ಕಾಯಂ.

ಜಿ ಪರಮೇಶ್ವರ್‌ ಅವರಿಗೆ ಗೃಹಖಾತೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಉಡುಪಿಯ ಪೇಜಾವರ ಶ್ರೀಗಳು ಪರಮೇಶ್ವರ್‌ ಮನೆಗೆ ಭೇಟಿ ನೀಡಿರುವುದು ಭಾರೀ ಟೀಕೆಗೆ ಗುರಿಯಾಗಿತ್ತು. ಹಿಂದುತ್ವದ ಕಾರ್ಯಕರ್ತರ ರಕ್ಷಣೆಗೆ ಅಭಯ ಕೇಳಲು ಬಂದಿದ್ದರಾ ಎಂಬ ಮಾತುಗಳೂ ಕೇಳಿ ಬಂದಿದ್ದವು. ದಲಿತರಾಗಿದ್ದರೂ ಬುದ್ಧ- ಬಸವ- ಅಂಬೇಡ್ಕರ್‌ ಅನುಯಾಯಿ ಎಂದು ಹೇಳಿಕೊಳ್ಳುತ್ತ ಸನಾತನ ಆಚಾರ ವಿಚಾರಗಳಿಗೆ ಗಂಟು ಬಿದ್ದಿರುವ ಇವರ ನಡೆ ಹಲವು ಸಲ ಟೀಕೆಗೆ ಗುರಿಯಾಗಿತ್ತು. ತಮ್ಮ ಮನೆ ಕಚೇರಿಗಳಲ್ಲಿ ಬ್ರಾಹ್ಮಣರಿಂದ ಹೋಮ ಹವನ ಮಾಡಿಸುವ ವಿಚಾರವೂ ಚರ್ಚೆಗೆ ಒಳಗಾಗಿತ್ತು. ಪರಮೇಶ್ವರ್‌ ಮಾತ್ರವಲ್ಲ ಕಾಂಗ್ರೆಸ್‌ನ ಹಲವು ನಾಯಕರು ಸೆಕ್ಯುಲರ್‌ ಎಂದು ಹೇಳಿಕೊಳ್ಳುತ್ತಲೇ ಹುಸಿ ಹಿಂದುತ್ವವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂಬುದು ಬಹಿರಂಗ ಸತ್ಯ.

ಅದೇನೇ ಇದ್ದರೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಸದ್ಯ ಸಮಾಜಘಾತಕ ಚಟುವಟಿಕೆ, ಪ್ರಚೋದನಕಾರಿ ಹೇಳಿಕೆ, ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಗೆ ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ರಾಜ್ಯದಲ್ಲಿ ಶಾಂತಿ ನೆಲೆಸಿದಂತಾಗುತ್ತದೆ.

ಉಡುಪಿಯ ಪ್ರಕರಣದಲ್ಲಿ ‘ಫೇಕ್‌’ ಸುದ್ದಿ ಹರಿಯಬಿಟ್ಟ ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಅಷ್ಟೇ ಅಲ್ಲ, ವಾರದ ಕಾಲ ತಣ್ಣಗಿದ್ದ ಈ ಪ್ರಕರಣವನ್ನು ದೇಶದ ಮಟ್ಟದಲ್ಲಿ ಹಬ್ಬಿಸಿದ್ದು ರಶ್ಮಿ ಸಮಂತ್‌ ಎಂಬ ಮಹಿಳೆಯ ಟ್ವೀಟ್‌. ಜನಾಂಗೀಯ ದ್ವೇಷದ ಟ್ವೀಟ್‌ ಮೂಲಕ ವಿಶ್ವದಲ್ಲೇ ಸುದ್ದಿಯಾಗಿದ್ದ ಆಕೆಯ ಟ್ವೀಟ್‌ನ ಪ್ರತಿ ಪದವೂ ಸುಳ್ಳಿನಿಂದಲೇ ತುಂಬಿತ್ತು. ಆದರೆ ಸುಳ್ಳು ವಿಡಿಯೋ ಅಪ್‌ಲೋಡ್‌ ಮಾಡಿದ ವ್ಯಕ್ತಿ ಮತ್ತು ಅದನ್ನು ಪ್ರಸಾರ ಮಾಡಿದ ಒಂದು ಡಿಜಿಟಲ್‌ ಮಾಧ್ಯಮದ ಮೇಲಷ್ಟೇ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ರಶ್ಮಿ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ವಿಡಿಯೋ ಹರಿಯಬಿಟ್ಟಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವೇ ಒಪ್ಪಿಕೊಂಡ ಮೇಲೂ ಆಕೆ ಆ ಟ್ವೀಟ್‌ಗಳನ್ನು ಅಳಿಸಿಲ್ಲ. ಮೇಲಾಗಿ ಅದೇ ಎಳೆಯನ್ನು ಸಮರ್ಥಿಸಿ ಕೆಲವು ಯುಟ್ಯೂಬ್‌ ಚಾನೆಲ್‌, ಹಿಂದಿ, ಇಂಗ್ಲಿಷ್‌ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡ ಮೂರು ಕೋತಿಗಳಂತೆ ಕುಳಿತಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X