ಬೇರೆ ರಾಷ್ಟ್ರಗಳಿಗೆ ಯಾವುದೇ ನಿರ್ಬಂಧ ಹೇರದಿದ್ದರೂ ಕಳೆದೆರಡು ತಿಂಗಳಿನಿಂದ ಭಾರತಕ್ಕೆ ಚೀನಾ ರಸಗೊಬ್ಬರ ಪೂರೈಕೆ ಮಾಡುತ್ತಿಲ್ಲ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಭಾರತವು ಚೀನಾದಿಂದ ಶೇ.80ರಷ್ಟು ವಿಶೇಷ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತದೆ. ಇವುಗಳು ಹಣ್ಣು, ತರಕಾರಿ ಹಾಗೂ ಇನ್ನಿತರ ಲಾಭದಾಯಕ ಕೃಷಿಗಳ ಇಳುವರಿ ಹೆಚ್ಚಿಸುತ್ತದೆ. ಚೀನಾದ ಈ ನಡೆ ಈಗಾಗಲೇ ಡಿಎಪಿ ಹಾಗೂ ಯೂರಿಯಾದ ಕೊರತೆ ಎದುರಿಸುತ್ತಿರುವ ರೈತರಿಗೆ ಇನ್ನಷ್ಟು ಹಾನಿಮಾಡುವುದಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ನರೇಂದ್ರ ಮೋದಿಯವರೇ, ವರದಿಗಳ ಪ್ರಕಾರ ಭಾರತದ ಉತ್ಪಾದನಾ ವಲಯದಿಂದ ಚೀನಾ ತನ್ನ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಚೀನಾದ ಕಂಪನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಲು ಡೋಕ್ಲಾಂ ಹಾಗೂ ಗಲ್ವಾನ್ ಅನ್ನು ಮರೆಯಲಾಯಿತು. ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆ (ಪಿಎಲ್‌ಐ) ಯೋಜನೆಯ ಲಾಭ ಪಡೆಯಲು ಚೀನಾ ನಾಗರಿಕರಿಗೆ ಸುಲಭವಾಗಿ ವಿಸಾ ನೀಡಲಾಯಿತು ಎನ್ನುವುದು ನಿಜವಲ್ಲವೇ?” ಎಂದು ಕುಟುಕಿದ್ದಾರೆ.
ಇದನ್ನು ಓದಿದ್ದೀರಾ? ಟೆಸ್ಟ್ ಕ್ರಿಕೆಟ್ | ದ್ವಿಶತಕ ಬಾರಿಸಿ ಹೊಸ ದಾಖಲೆ ಬರೆದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್
“ನಿಮ್ಮ ಸರ್ಕಾರದ ಚೀನಾ ಗ್ಯಾರಂಟಿಗೆ ಯಾವುದೇ ಎಕ್ಸ್‌ಪೈರಿ ದಿನಾಂಕ ಇಲ್ಲ. ಗಲ್ವಾನ್‌ನಲ್ಲಿ 20 ವೀರ ಯೋಧರ ಬಲಿದಾನದ ಬಳಿಕವೂ ನೀವು ಚೀನಾಗೆ ಕ್ಲಿನ್ ಚಿಟ್ ನೀಡಿದ್ದೀರಿ. ಇಂದು ಚೀನಾ ಅದರ ಪೂರ್ಣ ಲಾಭ ಪಡೆಯುತ್ತಿದೆ. ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಅಟೋಮೊಬೈಲ್, ಇ.ವಿ, ರಕ್ಷಣೆ ಹಾಗೂ ಭಾರಿ ಭದ್ರತೆ ಇರುವ ಕರೆನ್ಸಿಗಳ ಮುದ್ರಣಕ್ಕೆ ಅತಿ ಅಗತ್ಯವಿರುವ ಅಪರೂಪದ ಲೋಹಗಳನ್ನು ಭಾರತಕ್ಕೆ ರಫ್ತು ಮಾಡಲು ಚೀನಾ ನಿರ್ಬಂಧ ಹೇರಿದೆ. ಮೋದಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ” ಎಂದು ದೂರಿದ್ದಾರೆ.
