ಭಾರತ ಹಾಗೂ ಇಂಗ್ಲೆಂಡ್ ನಡುವೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಗುರುವಾರ, ಟೀಂ ಇಂಡಿಯಾದ ನೂತನ ನಾಯಕ ಶುಭಮನ್ ಗಿಲ್ ದ್ವಿಶತಕ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಇಂಗ್ಲೆಂಡ್ನ ನೆಲದಲ್ಲಿ ದ್ವಿಶತಕ ದಾಖಲಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಅಲ್ಲದೇ, ಈ ಸಾಧನೆ ಮಾಡಿದ ಮೊದಲ ಏಷ್ಯಾದ ನಾಯಕ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ 25 ವರ್ಷದ ಗಿಲ್, ಮೊದಲ ದ್ವಿಶತಕ ಬಾರಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. 311 ಎಸೆತಗಳನ್ನು ಎದುರಿಸಿದ ನಾಯಕ, 21 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ ಈ ಸಾಧನೆ ಮಾಡಿದ್ದಾರೆ.
ಲೀಡ್ಸ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿತ್ತಾದರೂ ಈ ಪಂದ್ಯದಲ್ಲಿ ಗಿಲ್ ಶತಕ ಬಾರಿಸಿ, ಮಿಂಚಿದ್ದರು.
ಇದನ್ನು ಓದಿದ್ದೀರಾ? ಟ್ರಂಪ್ ಪತ್ನಿ ಮೆಲಾನಿಯಾ ಗಡಿಪಾರಿಗೆ ಆಗ್ರಹ: ಅರ್ಜಿಗೆ ಸಾವಿರಾರು ಮಂದಿ ಸಹಿ
ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ
ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಅವರು ನಾಯಕ ಶುಭ್ಮನ್ ಗಿಲ್ಗೆ ಅವರೊಂದಿಗಿನ ಜೊತೆಯಾಟದಲ್ಲಿ ಅರ್ಧ ಶತಕ ಪೂರೈಸಿ ಶತಕದ ಆಸುಪಾಸಿನಲ್ಲಿ ಎಡವಿ ಔಟಾದರು. ಶುಭಮನ್ ಗಿಲ್ ದ್ವಿಶತಕ ಬಾರಿಸಿ ಮುಂದುವರಿಯುತ್ತಿದ್ದರೆ, ವಾಷಿಂಗ್ಟನ್ ಸುಂದರ್ ಇವರಿಗೆ ಸಾಥ್ ನೀಡುತ್ತಿದ್ದಾರೆ. ಸದ್ಯ ಟೀಂ ಇಂಡಿಯಾ 125 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 496 ರನ್ ಪೇರಿಸಿದೆ.
