ಬಿಜೆಪಿಗೆ ಇ.ಡಿ. ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ಅವರೇ ಯಾಕೆ ಬೇಕು?

Date:

Advertisements

ಸಂಜಯ್ ಮಿಶ್ರಾ, 1984ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ. ಅವರನ್ನು ಇಡಿ ನಿರ್ದೇಶಕರನ್ನಾಗಿ ಮುಂದುವರಿಸುವಲ್ಲಿ ಮೋದಿ ಸರ್ಕಾರವು ಮತ್ತೊಮ್ಮೆ ಸಫಲವಾಗಿದೆ. ಸುಪ್ರೀಂ ಕೋರ್ಟ್ ಅಂತಿಮ ಗಡುವು ವಿಧಿಸಿದ್ದರೂ, ಮನವಿಗಳ ಮೂಲಕ, ಸುಗ್ರೀವಾಜ್ಞೆ ಮೂಲಕ ಮೋದಿ ಸರ್ಕಾರ ಮತ್ತೆ ಮತ್ತೆ ಅವರ ಅಧಿಕಾರಾವಧಿ ವಿಸ್ತರಣೆ ಮಾಡುತ್ತಿರುವುದು ಯಾಕೆ ಎನ್ನುವುದಕ್ಕೆ ವಿಪಕ್ಷಗಳ ನಾಯಕರ ವಿರುದ್ಧ ಅವರು ನಡೆಸಿರುವ ವಿಚಾರಣೆಗಳೇ ಉತ್ತರ ಹೇಳುತ್ತಿವೆ.

‘ಎನ್‌ಡಿಎನಲ್ಲಿ 36 ಪಕ್ಷಗಳಿವೆ. ಇಡಿ, ಸಿಬಿಐ, ಐಟಿ ಇವಷ್ಟೇ ಬಿಜೆಪಿ ನೇತೃತ್ವದ ಎನ್‌ಡಿಎನ ಪ್ರಮುಖ ಮೂರು ಪಕ್ಷಗಳಾಗಿವೆ. ಉಳಿದಂತೆ ಅಲ್ಲಿ ಇರುವ ಪಕ್ಷಗಳು ಯಾವುವು? ಕೆಲವು ಪಕ್ಷಗಳಿಗೆ ಒಬ್ಬ ಸಂಸದನೂ ಇಲ್ಲ’ ಎಂದು ಉದ್ಧವ್ ಠಾಕ್ರೆ ಮೊನ್ನೆ ತಾನೇ ಹೇಳಿದ್ದರು. ಅದಾದ ಎರಡ್ಮೂರು ದಿನಗಳಲ್ಲೇ ಅದನ್ನು ಪುಷ್ಟೀಕರಿಸುವಂಥ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಸರ್ಕಾರವು ಹಠ ಹಿಡಿದು ಜಾರಿ ನಿರ್ದೇಶನಾಲಯ (ಇ.ಡಿ.) ಮುಖ್ಯಸ್ಥರ ಅಧಿಕಾರಾವಧಿಯನ್ನು ಮತ್ತೆ ವಿಸ್ತರಿಸಿಕೊಂಡಿದೆ. ಕೇಂದ್ರದ ಇಚ್ಛೆಗೆ ಅನುಗುಣವಾಗಿ ಇಡಿ ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ಸೇವಾವಧಿಯನ್ನು ಸೆಪ್ಟೆಂಬರ್ 15ರವರೆಗೆ ಸುಪ್ರೀಂ ಕೋರ್ಟ್ ವಿಸ್ತರಿಸಿದೆ.

ಸಂಜಯ್ ಮಿಶ್ರಾ ಅವರ ಬಗ್ಗೆ ಬಿಜೆಪಿ ಅಷ್ಟೊಂದು ಒಲವು ತೋರುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗಳೂ ಕೂಡ ಹುಟ್ಟಿಕೊಂಡಿವೆ. ಅವರು ಇಡಿ ಮುಖ್ಯಸ್ಥರಾದ ನಂತರ ಏನೇನು ಮಾಡಿದರು ಎನ್ನುವುದರಲ್ಲಿಯೇ ಈ ಪ್ರಶ್ನೆಗೆ ಉತ್ತರವಿದೆ.

Advertisements

ಸಂಜಯ್‌ಕುಮಾರ್ ಮಿಶ್ರಾ, 1984ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಅಧಿಕಾರಿ. ಉತ್ತರ ಪ್ರದೇಶ ಮೂಲದ ಸಂಜಯ್ ಮಿಶ್ರಾ, ಲಕ್ನೋ ವಿಶ್ವವಿದ್ಯಾಲಯದಿಂದ ಬಯೋಕೆಮಿಸ್ಟ್ರಿಯಲ್ಲಿ ಪದವೀಧರರು. ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದವರು; ಆ ಇಲಾಖೆಯ ಮುಖ್ಯ ಆಯುಕ್ತರೂ ಆಗಿದ್ದರು. ಸೋನಿಯಾ ಗಾಂಧಿ ಕುಟುಂಬದ ಪಾತ್ರವಿದೆ ಎಂದು ಹೇಳಲಾದ ಗಾಂಧಿ ಕುಟುಂಬದ ಮಾಲೀಕತ್ವದಲ್ಲಿರುವ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುವ ‘ಯಂಗ್ ಇಂಡಿಯಾ’ ಸಂಸ್ಥೆಯ ಪ್ರಕರಣದ ತನಿಖೆಯನ್ನು ಮಾಡಿದವರು ಅವರೇ. ಅದೇ ಇಡಿ ಮುಖ್ಯಸ್ಥರಾಗಲು ಅವರಿಗೆ ಅರ್ಹತೆಯಾಯಿತು. ಕೇಂದ್ರ ಸರ್ಕಾರದಲ್ಲಿ ಹೆಚ್ಚುವರಿ ಕಾರ್ಯದರ್ಶಿಗೆ ಸಮನಾದ ಇಡಿ ನಿರ್ದೇಶಕ ಹುದ್ದೆಗೆ ಸಂಜಯ ಮಿಶ್ರಾ ಅವರನ್ನು ಕೇಂದ್ರ ಸರ್ಕಾರ 2018ರಲ್ಲಿ ನೇಮಿಸಿತ್ತು. ಅಲ್ಲಿಂದ ಅವರು ನಿಭಾಯಿಸಿದ್ದೆಲ್ಲವೂ ಘಟಾನುಘಟಿ ರಾಜಕಾರಣಿಗಳ ಪ್ರಕರಣಗಳೇ. ಅವರೆಲ್ಲರೂ ಬಿಜೆಪಿಯ ವಿರುದ್ಧ ಇರುವ ಪಕ್ಷಗಳಿಗೆ ಸೇರಿದವರು ಎನ್ನುವುದು ಇಲ್ಲಿ ಮುಖ್ಯವಾದ ಸಂಗತಿ.

ಸಂಜಯ್ ಮಿಶ್ರಾ ಇಡಿ ನಿರ್ದೇಶಕರಾಗಿ ಬಂದ ನಂತರ ಅವರ ಅಧಿಕಾರಾವಧಿಯ ವಿಷಯ ಹಲವು ಬಾರಿ ವಿವಾದಕ್ಕೆ ಗುರಿಯಾಗಿದೆ. ನವೆಂಬರ್ 19, 2018ರಲ್ಲಿ ಮೊದಲ ಬಾರಿಗೆ ಅವರು ಇಡಿ ಮುಖ್ಯಸ್ಥರಾಗಿ ಬಂದಾಗ ಅವರಿಗಿದ್ದ ಅಧಿಕಾರಾವಧಿ ಎರಡು ವರ್ಷ. ಆದರೆ, 2020ರಲ್ಲಿ ಅವರ ಅವಧಿ ಮುಗಿಯುವುದಕ್ಕೆ ಮುನ್ನವೇ ಕೇಂದ್ರ ಸರ್ಕಾರವು ಅವರ ನೇಮಕಾತಿ ಆದೇಶವನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ವಿಸ್ತರಿಸಿ, ಪರಿಷ್ಕರಿಸಿತು. ‘ಕಾಮನ್ ಕಾಸ್’ ಎನ್ನುವ ಸರ್ಕಾರೇತರ ಸಂಸ್ಥೆಯೊಂದು ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2021ರಲ್ಲಿ ಇದೇ ಕೊನೆಯ ಬಾರಿ ಎನ್ನುವ ಷರತ್ತಿನೊಂದಿಗೆ ಮಿಶ್ರಾ ಅವರ ಅಧಿಕಾರಾವಧಿಯನ್ನು ಮಾನ್ಯ ಮಾಡಿತು. ನಿರ್ದೇಶಕರೊಬ್ಬರು ತಮ್ಮ ಸೇವಾವಧಿಯಲ್ಲಿ ಎರಡು ವರ್ಷ ಹೆಚ್ಚುವರಿ ವಿಸ್ತರಣೆ ಪಡೆದಿರುವುದು ಜಾರಿ ನಿರ್ದೇನಾಲಯದ ಇತಿಹಾಸದಲ್ಲಿ ಅದೇ ಮೊದಲಾಗಿತ್ತು.

ಈ ಸುದ್ದಿ ಓದಿದ್ದೀರಾ: ಕಳೆದ 5 ವರ್ಷಗಳಲ್ಲಿ ಐಐಟಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಮೊಟಕುಗೊಳಿಸಿದ 25 ಸಾವಿರ ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳು

ಇದರ ನಂತರ ಕೇಂದ್ರ ಸರ್ಕಾರವು ಇಡಿ ಹಾಗೂ ಸಿಬಿಐ ಮುಖ್ಯಸ್ಥರ ಹುದ್ದೆಗಳನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರದ ಬಳಿಯೇ ಇರುವಂತೆ ಸುಗ್ರೀವಾಜ್ಞೆಯೊಂದನ್ನು ತಂದಿತು. ಕೇವಲ ಮಿಶ್ರಾ ಅವರನ್ನು ಉಳಿಸಿಕೊಳ್ಳಲು ಮಾತ್ರವೇ ಸುಗ್ರೀವಾಜ್ಞೆ ತರಲಾಗಿದೆ ಎನ್ನುವ ಆರೋಪಗಳು ಆಗ ಕೇಳಿಬಂದಿದ್ದವು. ಇದು ಮತ್ತೆ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಹೋಯಿತು. ಮಿಶ್ರಾ ಅವರ ಅವಧಿಯ ಎರಡು ಮತ್ತು ಮೂರನೇ ವಿಸ್ತರಣೆಯು ಅಕ್ರಮ ಮತ್ತು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿತು. ಮಿಶ್ರಾ ಅವರು ಜುಲೈ 31ರವರೆಗೂ ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ಕೋರ್ಟ್ ಆಗ ಗಡುವು ನೀಡಿತ್ತು. 

ಆದಾಗ್ಯೂ ಮಿಶ್ರಾ ಅವರ ಸೇವಾವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಅದಕ್ಕೆ ಕೇಂದ್ರವು ಯಥಾಪ್ರಕಾರ ದೇಶದ ಹಿತಾಸಕ್ತಿಯ ಸಮರ್ಥನೆ ನೀಡಿತು. ‘ಭಾರತವು ಎಫ್‌ಎಟಿಎಫ್‌ (ಹಣಕಾಸು ಕ್ರಿಯಾ ಕಾರ್ಯಪಡೆ) ‘ಬೂದು ಪಟ್ಟಿ’ಯಲ್ಲಿ ಬೀಳಬೇಕು ಎಂದು ಕೆಲವು ನೆರೆಹೊರೆಯ ದೇಶಗಳು ಬಯಸಿವೆ. ಹೀಗಾಗಿ ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ಹುದ್ದೆಯ ವಿಸ್ತರಣೆ ಈಗ ಬಹಳ ಅವಶ್ಯಕವಾಗಿದೆ’ ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ನ್ಯಾಯಮೂರ್ತಿಗಳು, “ಹಾಗಾದರೆ ಬೇರೆ ಎಲ್ಲಾ ಅಧಿಕಾರಿಗಳು ಅಸಮರ್ಥರು ಎಂದು ಹೇಳುತ್ತಿದ್ದೀರಾ? ಒಬ್ಬ ಅಧಿಕಾರಿ ಮಾತ್ರ ಅದನ್ನು ಮಾಡಬಹುದೇ?” ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು.  

ಸಂಜಯ್ ಮಿಶ್ರಾ ಅವರ ಅಗತ್ಯವಿರುವುದು ದೇಶಕ್ಕಲ್ಲ, ಬಿಜೆಪಿಗೆ ಎನ್ನುವಂಥ ವಿಶ್ಲೇಷಣೆಗಳು, ಟೀಕೆಗಳು ಕೇಳಿಬಂದಿವೆ. ಇಡಿಯು ಕೇಂದ್ರದ ಅಧಿಕಾರ ದುರ್ಬಳಕೆಯ ಸಾಧನವಾಗಿದೆ ಎನ್ನುವ ವ್ಯಾಪಕ ಟೀಕೆ ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಈ ಹಿಂದೆ ಸಿಬಿಐ ವಿಚಾರಣೆ ನಡೆಸುತ್ತಿದ್ದಂಥ ಪ್ರಕರಣಗಳನ್ನು ಮೋದಿ ಅವರ ಅವಧಿಯಲ್ಲಿ ಇಡಿ ಕೈಗೆತ್ತಿಕೊಂಡಿತು.

ಸಂಜಯ್ ಮಿಶ್ರಾ ಇಡಿ ಮುಖ್ಯಸ್ಥರಾದ ನಂತರ ಅವರ ಮೊದಲ ಮತ್ತು ಮುಖ್ಯ ಗುರಿಯಾಗಿದ್ದು ಗಾಂಧಿ ಕುಟುಂಬ. ಗಾಂಧಿ ಕುಟುಂಬವನ್ನು ವಿಚಾರಣೆ ಹೆಸರಲ್ಲಿ ಹಿಂಡಿ ಹಿಪ್ಪೆ ಮಾಡಿತ್ತು ಇಡಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಗಂಡ ರಾಬರ್ಟ್ ವಾಧ್ರಾ ಅವರನ್ನು ಇಡಿ ಸತತ ವಿಚಾರಣೆ ನಡೆಸಿತ್ತು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಐದು ದಿನಗಳಲ್ಲಿ 42 ಗಂಟೆಗಳ ವಿಚಾರಣೆ ಎದುರಿಸಿದರೆ, ಸೋನಿಯಾ ಗಾಂಧಿ ಮೂರು ದಿನಗಳಲ್ಲಿ 13 ಗಂಟೆಗಳ ವಿಚಾರಣೆ ಎದುರಿಸಿದ್ದರು.

ಇವರಷ್ಟೇ ಅಲ್ಲ, ಕಾಂಗ್ರೆಸ್‌ ಮುಖಂಡ ಪಿ ಚಿದಂಬರಂ, ಕಾಂಗ್ರೆಸ್‌ ಬೆಂಬಲಿತ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕರ್ನಾಟದಕ ಡಿಸಿಎಂ ಡಿ ಕೆ ಶಿವಕುಮಾರ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್, ಮತ್ತೊಬ್ಬ ಮಂತ್ರಿ ನವಾಬ್ ಮಲ್ಲಿಕ್, ನ್ಯಾಷನಲ್ ಕಾನ್ಫರೆನ್ಸ್‌ ಮುಖಂಡರಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ತಮಿಳುನಾಡಿನ ಪ್ರಭಾವಿ ಸಚಿವ ಸೆಂಥಿಲ್ ಬಾಲಾಜಿ, ತೃಣಮೂಲ ಕಾಂಗ್ರೆಸ್‌ನ ಪಾರ್ಥ ಚಟರ್ಜಿ ಹೀಗೆ ವಿರೋಧ ಪಕ್ಷಗಳ ಹತ್ತಾರು ಮುಖಂಡರ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತಿತರ ಕಲಮುಗಳಡಿ ಪ್ರಕರಣಗಳು ದಾಖಲಾದವು. ಅವರೆಲ್ಲ ಹತ್ತಾರು ಬಾರಿ ಇಡಿ ಕಚೇರಿ ಅಲೆದರು, ವಿಚಾರಣೆ ಎದುರಿಸಿದರು. ಅನೇಕರು ವಿಚಾರಣೆಗೆ ಹೆದರಿಕೊಂಡು ಒಂದೋ ಬಿಜೆಪಿ ವಿರುದ್ಧ ಚಕಾರವೆತ್ತದಂತಾದರು. ಇಲ್ಲವೇ ಬಿಜೆಪಿ ಜೊತೆ ಸೇರಿಕೊಂಡರು. ಇಡಿಯಿಂದಾಗಿ ಬಿಜೆಪಿಗೆ ಸಾಕಷ್ಟು ರಾಜಕೀಯ ಬಲ ಒದಗಿತು ಎನ್ನುವ ವಿಶ್ಲೇಷಣೆಗಳು ಕೇಳಿಬಂದವು.

ಈ ಸುದ್ದಿ ಓದಿದ್ದೀರಾ: ಮಣಿಪುರ | ‘ನಮ್ಮ ಮಗಳನ್ನು ಹುಡುಕಿಕೊಡಿ, ಆಕೆ ಸತ್ತಿದ್ದರೆ, ಮೃತದೇಹವನ್ನಾದರೂ ಕೊಡಿ, ಅಂತ್ಯಸಂಸ್ಕಾರ ಮಾಡುತ್ತೇವೆ’

ಮಿಶ್ರಾ ಅವರು ತುಂಬಾ ‘ಸ್ಟ್ರಿಕ್ಟ್ ಆಫೀಸರ್’ ಎನ್ನುವ ಮಾತುಗಳನ್ನು ಕೆಲವರು ಹೇಳುತ್ತಾರೆ. ಆದರೆ, ಅವರ ಪ್ರಾಮಾಣಿಕತೆಯು ಕೇವಲ ಬಿಜೆಪಿ ವಿರೋಧಿಗಳ ವಿರುದ್ಧ ಮಾತ್ರವೇ ಕ್ರಮ ಜರುಗಿಸಲು ಸೀಮಿತವಾಗಿದೆ ಏಕೆ ಎನ್ನುವ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿಲ್ಲ.

ಲೋಕಸಭಾ ಚುನಾವಣೆ ಹತ್ತಿರ ಬರುವವರೆಗೂ ಸಂಜಯ್ ಮಿಶ್ರಾ ಅವರನ್ನು ಇಡಿ ಮುಖ್ಯಸ್ಥರನ್ನಾಗಿ ಉಳಿಸಿಕೊಳ್ಳುವುದು ಮೋದಿ ಸರ್ಕಾರದ ಇರಾದೆಯಾಗಿದೆ ಎನ್ನುವ ಮಾತುಗಳಿವೆ. ಆದರೆ, ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಕೇಂದ್ರಕ್ಕೆ ಹಲವು ಬಾರಿ ಎಚ್ಚರಿಕೆ ಹಾಗೂ ವಿನಾಯಿತಿ ನೀಡಿರುವುದರಿಂದ ಇನ್ನು ಮುಂದೆ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಿಸಲಾಗದು ಎನ್ನಲಾಗುತ್ತಿದೆ. ಸೆಪ್ಟೆಂಬರ್ 15ರ ನಂತರ ಇಡಿಗೆ ಹೊಸ ನಿರ್ದೇಶಕರು ಬರುವರೆ ಇಲ್ಲ ಮಿಶ್ರಾ ಅವರು ಮತ್ತೆ ಯಾವುದಾದರೂ ಮಾರ್ಗದ ಮೂಲಕ ಅಧಿಕಾರಾವಧಿ ವಿಸ್ತರಣೆ ಪಡೆದು ಮತ್ತೊಂದು ದಾಖಲೆ ಮಾಡುವರೇ ಎನ್ನುವುದನ್ನು ನೋಡಬೇಕು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X