ಒಂದೆರೆಡು ದಿನಗಳ ಹಿಂದೆ ಅಮೆರಿಕ, ಕೆನಡಾ ದೇಶಗಳ ಸೂಪರ್ ಮಾರ್ಕೆಟ್ಗಳಲ್ಲಿ ಭಾರತೀಯ ಸಮುದಾಯದವರು ಅಕ್ಕಿ ಖರೀದಿಸಲು ಮುಗಿ ಬೀಳುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಡೆ ವೈರಲ್ ಆಗಿತ್ತು. ವಿದೇಶಗಳ ಬಹುತೇಕ ದಿನಸಿ ಅಂಗಡಿಗಳಲ್ಲಿ ಒಂದು ಕುಟುಂಬಕ್ಕೆ ಸೀಮಿತ ಇಂತಿಷ್ಟು ಕೆಜಿ ಅಕ್ಕಿ ಎಂಬ ನಾಮಫಲಕವನ್ನು ಅಂಟಿಸಿರುವ ಸುದ್ದಿಗಳು ಕೂಡ ಪ್ರಕಟಗೊಂಡಿದ್ದವು. ಜಾಗತಿಕ ಮಟ್ಟದಲ್ಲಿ ಏಕಾಏಕಿ ಸಂಭವಿಸಿದ ಇವೆಲ್ಲ ಘಟನೆಗಳಿಗೆ ಕಾರಣ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತುಗಳ ಮೇಲೆ ಜುಲೈ 20 ರಂದು ಭಾರತ ನಿಷೇಧ ವಿಧಿಸಿದ್ದರಿಂದ ಅಕ್ಕಿಯನ್ನು ಹೆಚ್ಚಾಗಿ ಅವಲಂಬಿಸಿದ್ದ ವಿದೇಶದಲ್ಲಿ ನೆಲಸಿರುವ ಭಾರತೀಯ ಸಮುದಾಯದವರಿಗೆ ಆಘಾತವನ್ನು ಉಂಟುಮಾಡಿದೆ.
ಭಾರತದಿಂದ ವಿಶ್ವದ ಹಲವು ರಾಷ್ಟ್ರಗಳಿಗೆ ಉದ್ಯೋಗ ಹಾಗೂ ಶಿಕ್ಷಣದ ನಿಮಿತ್ತ ವಲಸೆ ಹೋಗಿ ಜೀವನ ನಡೆಸುತ್ತಿರುವವರಿಗೆ ಅನ್ನವೆ ಪ್ರಮುಖ ಆಹಾರ. ದಕ್ಷಿಣ ಭಾರತದವರಂತೂ ಅನ್ನವನ್ನು ಬಿಟ್ಟು ಬೇರೆ ಆಹಾರವನ್ನು ಹೆಚ್ಚಾಗಿ ಸೇವಿಸುವುದಿಲ್ಲ. ಇದಕ್ಕಾಗಿ ಅಕ್ಕಿಯ ಅವಲಂಬನೆ ಇಲ್ಲಿಂದ ವಿದೇಶಗಳಿಗೆ ತೆರಳಿದವರಿಗೆ ಮುಖ್ಯವಾಗಿದೆ. ಇಷ್ಟಕ್ಕೂ ಭಾರತವು ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತುಗಳ ಮೇಲೆ ಏಕೆ ನಿಷೇಧ ಹೇರಿತು ಹಾಗೂ ಇದರಿಂದ ಮುಂದಾಗುವ ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮುಂಗಾರು ಕೊರತೆ, ಬೆಲೆ ನಿಯಂತ್ರಣದ ಲೆಕ್ಕಾಚಾರ
ದೇಶದಲ್ಲಿ ಈ ಬಾರಿ ಮುಂಗಾರು ತಡವಾಗಿ ಶುರುವಾಗಿದೆ. ಇದರಿಂದ ಉತ್ಪಾದನೆಯಲ್ಲಿ ಕುಸಿತ ಉಂಟಾಗುವ ಭೀತಿ ಮೂಡಿದೆ. ಮುಂಗಾರಿನ ಆಗಮನ ವಿಳಂಬವಾಗಿರುವುದರಿಂದ ಜೂನ್ ಮಧ್ಯದವರೆಗೂ ಮಳೆ ಕೊರತೆ ಉಂಟಾಗಿದೆ. ಜೂನ್ ಕೊನೆಯ ವಾರದಿಂದ ಕೆಲವೆಡೆ ಸುರಿಯುತ್ತಿರುವ ಭಾರಿ ಮಳೆಯು ಈ ಅಭಾವವನ್ನು ಸರಿದೂಗಿಸಿದ್ದರೂ ಇದರಿಂದ ಭತ್ತದ ಬೆಳೆಗಳಿಗೆ ವಿಪರೀತ ಹಾನಿಯುಂಟಾಗಿದೆ.
ಭಾರತದಲ್ಲಿ ಹೆಚ್ಚಿನ ಭಾಗಗಳಲ್ಲಿ ವರ್ಷಕ್ಕೆ ಎರಡು ಬೆಳೆ ಭತ್ತ ಬೆಳೆಯಲಾಗುತ್ತದೆ. ಜೂನ್ನಿಂದ ಬಿತ್ತನೆಗೆ ಬರುವ ಬೆಳೆಯ ಒಟ್ಟಾರೆ ಉತ್ಪಾದನೆಯಲ್ಲಿ ಶೇ 80ಕ್ಕೂ ಅಧಿಕ ಉತ್ಪಾದನೆ ನೀಡುತ್ತದೆ. 2022-23ನೇ ಸಾಲಿನಲ್ಲಿ ಭಾರತದ ಅಕ್ಕಿ ಉತ್ಪಾದನೆ 135.5 ಮಿಲಿಯನ್ ಟನ್ನಷ್ಟಿತ್ತು. ಚಳಿಗಾಲದ ತಿಂಗಳುಗಳಲ್ಲಿ ಕೇಂದ್ರ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಭತ್ತವನ್ನು ಹೆಚ್ಚಾಗಿ ಎರಡನೇ ಬೆಳೆ ಬೆಳೆಯಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಬ್ಯಾಂಕ್ ದಿವಾಳಿಯಾದರೆ, ನೀವು ಎಷ್ಟೇ ಕೋಟಿ ರೂಪಾಯಿ ಇಟ್ಟಿದ್ದರೂ ನಿಮಗೆ ಸಿಗುವುದು ಎಷ್ಟು ಗೊತ್ತಾ?
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್, ಒಡಿಶಾ, ಬಿಹಾರ ಮತ್ತು ಛತ್ತೀಸ್ಗಢ ರಾಜ್ಯಗಳು ದೇಶದ ಪ್ರಮುಖ ಭತ್ತ ಉತ್ಪಾದಿಸುವ ರಾಜ್ಯಗಳು. ಸದ್ಯ ಈ ರಾಜ್ಯಗಳಲ್ಲಿ ಮಳೆ ಕೊರತೆ ಹಾಗೂ ನೆರೆಯಿಂದಾಗಿ ಭತ್ತದ ಇಳುವರಿ ಕುಂಠಿತವಾಗಿದೆ. ಈ ಕಾರಣಗಳಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಾಸ್ಮತಿ ಅಲ್ಲದ ಅಕ್ಕಿ ಲಭ್ಯವಾಗುವಂತೆ ನೋಡಿಕೊಳ್ಳುವುದು, ದೇಶದ ಆಹಾರ ಭದ್ರತೆ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕುವುದು ರಫ್ತು ನಿಷೇಧದ ಹಿಂದಿನ ಉದ್ದೇಶವಾಗಿದೆ ಎನ್ನಲಾಗುತ್ತಿದೆ.
ಪ್ರಸ್ತುತ ನಿಷೇಧದಿಂದಾಗಿ ದೇಶೀಯ ಮಾರುಟಕ್ಟೆಗೆ 40-50 ಲಕ್ಷ ಟನ್, ಅಂದರೆ ಕಳೆದ ಹಣಕಾಸು ವರ್ಷದಲ್ಲಿ ರಫ್ತು ಮಾಡಲಾದ ಶೇ. 20ರಷ್ಟು ಅಕ್ಕಿಯು ದೇಶೀಯ ಮಾರುಕಟ್ಟೆಗೆ ಸರಬರಾಜಾಗುತ್ತದೆ. ಈ ಮೂಲಕ ಅಕ್ಕಿ ಚಿಲ್ಲರೆ ಮಾರಾಟ ಬೆಲೆಯು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತಿದೆ.
ಮುಂಗಾರು ತಡವಾದ ಕಾರಣದಿಂದ ಭಾರತದಲ್ಲಿ ಅಕ್ಕಿಯ ಬೆಲೆಗಳು ಕಳೆದ ಮೂರು ತಿಂಗಳಲ್ಲಿ ಶೇ 20-30ರಷ್ಟು ಮತ್ತು ಕಳೆದ 10-12 ದಿನಗಳಲ್ಲಿ ಶೇ 10ರಷ್ಟು ಏರಿಕೆಯಾಗಿವೆ. ಕಳೆದ ವರ್ಷದ ಚಳಿಗಾಲದ ಋತುವಿನಲ್ಲಿ ಅಕ್ಕಿ ಕೊಯ್ಲು ಕಳಪೆಯಾಗಿ ಇಳುವರಿ ಕಡಿಮೆಯಾಗಿದೆ. ಇವೆಲ್ಲ ಕಾರಣಗಳಿಂದ ಇಳುವರಿ ಕಡಿಮೆಯಾಗಿ ಅಕ್ಕಿ ಬೆಲೆ ಏರಿಕೆಯಾಗಿದೆ.
ಆಹಾರ ಬೆಲೆ ಹಣದುಬ್ಬರ ಏರಿಕೆ
ಭಾರತದ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ 4.31ರಷ್ಟು ಇತ್ತು. ಜೂನ್ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟ ಶೇ 4.81ರಷ್ಟು ಹೆಚ್ಚಳ ಕಂಡಿದೆ. ಆಹಾರದ ಬೆಲೆ ಹಣದುಬ್ಬರವು ಹಿಂದಿನ ತಿಂಗಳಲ್ಲಿ ಶೇ 3ಕ್ಕಿಂತ ಕಡಿಮೆ ಇದ್ದುದು ಶೇ 4.5ಕ್ಕೆ ಏರಿಕೆಯಾಗಿದೆ. ಇದರಿಂದ ಧಾನ್ಯಗಳು, ದ್ವಿದಳ ಧಾನ್ಯಗಳು, ಹಾಲು ಮತ್ತು ಟೊಮ್ಯಾಟೊಗಳಂತಹ ಸಾಮಗ್ರಿಗಳ ಬೆಲೆಗಳು ಗಗನಕ್ಕೇರಿವೆ.
ಈ ಹಿಂದೆ 2007 ರಲ್ಲಿ ಆರ್ಥಿಕ ಹಿಂಜರಿತ ಉಂಟಾದಾಗ ಹಣದುಬ್ಬರದ ಸಮಸ್ಯೆ ಎದುರಿಸಲು ಈ ರೀತಿಯಾಗಿ ಅಕ್ಕಿಯ ರಫ್ತಿನ ಮೇಲೆ ಭಾರತ ನಿಷೇಧ ಹೇರಿತ್ತು. ಆಗ ವಿಶ್ವದ ಇತರ ದೇಶಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಉಂಟಾಗಿತ್ತು. ಆ ಸಂದರ್ಭದಲ್ಲಿ ಭಾರತದಂತೆ ಹಲವು ರಾಷ್ಟ್ರಗಳಲ್ಲಿ ಕೆಲ ನಿರ್ದಿಷ್ಟ ವಸ್ತುಗಳನ್ನು ತಮ್ಮ ದೇಶಗಳಿಂದ ರಫ್ತಾಗುವುದನ್ನು ನಿರ್ಬಂಧಿಸಿದ್ದರು. ಈ ಘಟನೆಯು ಕೂಡ ಜಗತ್ತಿನಾದ್ಯಂತ ಆಹಾರ ಭದ್ರತೆಯ ಮೇಲೆ ಪರಿಣಾಮ ಉಂಟು ಮಾಡಿತ್ತು.
ವಿಯೆಟ್ನಾಂ, ಥಾಯ್ಲೆಂಡ್ ಅವಲಂಬನೆ ಸಾಧ್ಯತೆ
ವಿಶ್ವದ ಅಕ್ಕಿ ರಫ್ತಿನ ಶೇ40 ಕ್ಕಿಂತ ಹೆಚ್ಚು ಪಾಲನ್ನು ಭಾರತ ಹೊಂದಿದ್ದು, 140ಕ್ಕೂ ಹೆಚ್ಚು ದೇಶಗಳಿಗೆ ಅಕ್ಕಿ ರಫ್ತು ಮಾಡುತ್ತದೆ. ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ. 2022ರಲ್ಲಿ ಭಾರತದ ರಫ್ತಿನ ಪ್ರಮಾಣ 55.4 ಮಿಲಿಯನ್ ಮೆಟ್ರಿಕ್ ಟನ್ಗಳಿಷ್ಟಿತ್ತು. ಸರ್ಕಾರವು ಬಾಸ್ಮತಿ ಅಕ್ಕಿ ಹಾಗೂ ಕುಚ್ಚಲಕ್ಕಿ ರಫ್ತಿನ ಮೇಲೆ ಯಾವುದೇ ನಿಷೇಧ ವಿಧಿಸಿಲ್ಲ. 2022ರಲ್ಲಿ ಈ ಅಕ್ಕಿಗಳ ರಫ್ತು ಕ್ರಮವಾಗಿ 4.4 ಮಿಲಿಯನ್ ಟನ್ ಮತ್ತು 7.4 ಮಿಲಿಯನ್ ಟನ್ ಇತ್ತು.
ಭಾರತವು ಬಾಸ್ಮತಿ ಅಲ್ಲದ ಅಕ್ಕಿಯನ್ನು ರಫ್ತು ನಿಷೇಧಿಸಿರುವುದರಿಂದ ಪಾಶ್ಚಿಮಾತ್ಯ ರಾಷ್ಟ್ರಗಳು ವಿಯೆಟ್ನಾಂ ಹಾಗೂ ಥಾಯ್ಲೆಂಡ್ ದೇಶಗಳ ಮೇಲೆ ಅವಲಂಬಿತವಾಗುವ ಸಾಧ್ಯತೆಯಿದೆ. ಅತಿ ಹೆಚ್ಚು ಭತ್ತ ಉತ್ಪಾದಿಸುವ 5 ಪ್ರಮುಖ ರಾಷ್ಟ್ರಗಳಲ್ಲಿ ವಿಯೆಟ್ನಾಂ ಮತ್ತು ಥಾಯ್ಲೆಂಡ್ ಕೊನೆಯ ಎರಡು ಸ್ಥಾನದಲ್ಲಿವೆ. ಜುಲೈ ತಿಂಗಳಲ್ಲಿ ಇವೆರೆಡು ರಾಷ್ಟ್ರಗಳಲ್ಲಿ ಭತ್ತದ ಕೊಯ್ಲು ಪ್ರಾರಂಭವಾಗಿವೆ. ಇನ್ನು ಕೆಲವು ದಿನಗಳಲ್ಲಿ ಜಾಗತಿಕ ಮಾರುಕಟ್ಟೆಗೆ ಈ ದೇಶಗಳ ಅಕ್ಕಿ ರವಾನೆಯಾಗಲಿದ್ದು, ಅಕ್ಕಿ ಸಮಸ್ಯೆ ಎದುರಿಸುತ್ತಿರುವ ವಿದೇಶಗಳಿಗೆ ವಿಯೆಟ್ನಾಂ ರಫ್ತು ಮಾಡುವ ಸಾಧ್ಯತೆಯಿದೆ.
ಭಾರತ ಅಕ್ಕಿ ನಿಷೇಧ ವಿಧಿಸಿದ ದಿನದಿಂದ ಆರ್ಥಿಕವಾಗಿ ಲಾಭ ಪಡೆದುಕೊಳ್ಳುವ ಸಲುವಾಗಿ ಇವೆರೆಡು ರಾಷ್ಟ್ರಗಳು ರಫ್ತು ಮಾಡುವ ಅಕ್ಕಿಯ ಬೆಲೆಯನ್ನು ಶೇ.5 ರಿಂದ 10 ರಷ್ಟು ಹೆಚ್ಚಿಸಿದೆ. ಅಕ್ಕಿಯನ್ನು ಹೆಚ್ಚು ಬಳಕೆ ಮಾಡುವ ವಿದೇಶಗಳ ಭಾರತೀಯ ಸಮುದಾಯ ಒಂದಷ್ಟು ದಿನ ಹೆಚ್ಚು ಹಣ ಕೊಟ್ಟು ಖರೀದಿಸಬೇಕಾಗಿದೆ. ಈ ಹಿನ್ನಲೆ ಜಾಗತಿಕ ಮಟ್ಟದಲ್ಲಿರುವ ಸದ್ಯದ ಅಕ್ಕಿಯ ಹಾಹಾಕಾರ ಮುಂದಿನ ದಿನಗಳಲ್ಲಿ ನಿವಾರಣೆಯಾಗಲಿದೆ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು.