ನಾಯಕ ಶುಭಮನ್ ಗಿಲ್ ದಾಖಲೆಯ ದ್ವಿಶತಕ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಎರಡನೇ ದಿನ ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 587 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಎರಡನೇ ಚಹಾ ವಿರಾಮದ ಬಳಿಕ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಒತ್ತಡಕ್ಕೆ ಸಿಲುಕಿದೆ. ಟೀಮ್ ವೇಗದ ಬೌಲರ್ ಆಕಾಶ್ ದೀಪ್ 2, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದು ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದ್ದಾರೆ. ಇಂಗ್ಲೆಂಡ್ ಎರಡನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ. ಮೂರನೇ ದಿನಕ್ಕೆ ಜೋ ರೂಟ್(18) ಹಾಗೂ ಹ್ಯಾರಿ ಬ್ರೂಕ್(30) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಗುರುವಾರ 5 ವಿಕೆಟ್‌ಗೆ 310 ರನ್‌ಗಳಿಂದ ಮೊದಲ ಇನಿಂಗ್ಸ್ ಆಟ ಮುಂದುವರೆಸಿದ ಭಾರತ, 587 ರನ್‌ಗಳಿಗೆ ಆಲೌಟ್ ಆಯಿತು.
ಇದನ್ನು ಓದಿದ್ದೀರಾ? ಮೂವರು ಸ್ಟಾರ್ ಆಟಗಾರರ ದಾಖಲೆ ಮುರಿಯುವ ಹೊಸ್ತಿಲಲ್ಲಿ ಯಶಸ್ವಿ ಜೈಸ್ವಾಲ್
211 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಕ್ಕೆ ನಾಯಕ ಶುಭಮನ್ ಗಿಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಉತ್ತಮ ಆಟವಾಡಿದರು. ಗುರುವಾರ ಬ್ಯಾಟಿಂಗ್ ಆರಂಭಿಸಿದ ಜಡೇಜಾ ಹಾಗೂ ಗಿಲ್ ಕಲಾತ್ಮಕ ಆಟವನ್ನು ಪ್ರದರ್ಶಿಸಿದರು. ಈ ಜೋಡಿ ಆರನೇ ವಿಕೆಟ್‌ಗೆ 279 ಎಸೆತಗಳಲ್ಲಿ 203 ರನ್ ಗಳಿಸಿತು. ರವೀಂದ್ರ ಜಡೇಜಾ 137 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 89 ರನ್ ಸಿಡಿಸಿ ಔಟ್ ಆದರು.
ಇನ್ನು ಆಲ್‌ರೌಂಡರ್ ರೂಪದಲ್ಲಿ ಸ್ಥಾನ ಪಡೆದ ವಾಷಿಂಗ್ಟನ್ ಸುಂದರ್ ತಮ್ಮ ಘನತೆಗೆ ತಕ್ಕ ಆಟವನ್ನು ಆಡಿದರು. ಈ ಜೋಡಿ 189 ಎಸೆತಗಳಲ್ಲಿ 144 ರನ್ ಸೇರಿಸಿತು. ಈ ವೇಳೆ ವಾಷಿಂಗ್ಟನ್ ಸುಂದರ್ 42 ರನ್ ಗಳಿಸಿ ತಮ್ಮ ಆಟ ಮುಗಿಸಿದರು.
ಹಲವು ದಾಖಲೆಗಳನ್ನು ಬರೆದ ಶುಭಮನ್ ಗಿಲ್
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಇಂಗ್ಲೆಂಡ್ ಬೌಲರ್‌ಗಳನ್ನು ಮನ ಬಂದಂತೆ ಕಾಡಿದರು. ಇವರು ಎಚ್ಚರಿಕೆಯ ಬ್ಯಾಟಿಂಗ್ ಮಾಡಿ 387 ಎಸೆತಗಳಲ್ಲಿ 30 ಬೌಂಡರಿ, 3 ಸಿಕ್ಸರ್ ನೆರವಿನಿಂದ 269 ರನ್ ಬಾರಿಸಿವುದರೊಂದಿಗೆ ಹಲವು ದಾಖಲೆಗಳನ್ನು ಬರೆದರು.
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ 24ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಟೀಮ್ ಇಂಡಿಯಾದ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿತ್ತು. ಇವರು 1979ರಲ್ಲಿ 221 ರನ್ ಬಾರಿಸಿದ್ದರು.
ಇಂಗ್ಲೆಂಡ್ ನೆಲದಲ್ಲಿ ದ್ವಿಶತಕ ಬಾರಿಸಿದ ಮೊದಲ ಏಷ್ಯಾದ ಬ್ಯಾಟರ್ ಎಂಬ ಹಿರಿಮೆ ಸಹ ಇವರದ್ದಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್‌ನಲ್ಲಿ ಸಚಿನ್ ತೆಂಡೂಲ್ಕರ್ ಬಾರಿಸಿದ 193 ರನ್ ಗರಿಷ್ಠವಾಗಿತ್ತು.
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 250ಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ ಆರನೇ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಇದಕ್ಕೂ ಮೊದಲು, ವೀರೇಂದ್ರ ಸೆಹ್ವಾಗ್ ಒಟ್ಟು 4 ಬಾರಿ, ಆದರೆ ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಕರುಣ್ ನಾಯರ್ ಮತ್ತು ವಿರಾಟ್ ಕೊಹ್ಲಿ ತಲಾ ಒಮ್ಮೆ ಈ ಸಾಧನೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ 4 ದಾಖಲೆಗಳನ್ನು ಮುರಿದರು.150 ರನ್‌ಗಳ ಗಡಿ ತಲುಪಿದ ತಕ್ಷಣ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಅತಿ ಹೆಚ್ಚು ಸ್ಕೋರ್ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ 2018 ರಲ್ಲಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ 149 ರನ್‌ಗಳ ಇನಿಂಗ್ಸ್ ಆಡಿದ್ದ ಕೊಹ್ಲಿ ಹೆಸರಿನಲ್ಲಿತ್ತು.
ಇಂಗ್ಲೆಂಡ್‌ನಲ್ಲಿ ಭಾರತೀಯ ನಾಯಕನಾಗಿ ಅತಿದೊಡ್ಡ ಇನಿಂಗ್ಸ್ ಆಡಿದ ದಾಖಲೆಯನ್ನೂ ಗಿಲ್ ನಿರ್ಮಿಸಿದರು. ಇದರ ಜೊತೆಗೆ ನಾಯಕನಾಗಿ ಕೊಹ್ಲಿ ಆಡಿದ 149 ರನ್‌ಗಳ ಇನಿಂಗ್ಸ್ ದಾಖಲೆಯನ್ನೂ ಗಿಲ್ ಮುರಿದರು. ತಮ್ಮ ದ್ವಿಶತಕ ಪೂರೈಸಿದ ಗಿಲ್, 235 ರನ್‌ಗಳನ್ನು ದಾಟಿದ ತಕ್ಷಣ, ಕೊಹ್ಲಿಯ ಮೂರನೇ ದಾಖಲೆಯನ್ನು ಸಹ ಮುರಿದರು.ನಾಯಕನಾಗಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಸ್ಕೋರ್ ದಾಖಲೆಯನ್ನು ಸಹ ಮುರಿದರು.
