ಕೊಳತ್ತಮಜಲು ಅಬ್ದುಲ್ ರೆಹಮಾನ್ ಮತ್ತು ವಯನಾಡುವಿನ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ಒಪ್ಪಿಸುವಂತೆ ರಾಜ್ಯ ಸರ್ಕಾರವನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಎಸ್ ಆಗ್ರಹಿಸಿದರು.
ಎಸ್‌ಡಿಪಿಐ ದ.ಕ.ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಕೊಲೆಯಾದ ಇಬ್ಬರ ಕುಟುಂಬಕ್ಕೂ ತಲಾ ರೂ.50 ಲಕ್ಷ ಪರಿಹಾರ ನೀಡಬೇಕು. ಅಬ್ದುಲ್ ಮತ್ತು ಅಶ್ರಫ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳ ಬಂಧನಕ್ಕೆ ವಿಳಂಬ ಮಾಡುತ್ತಿರುವುದು ಮತ್ತು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಘೋಷಿಸದಿರುವುದು ಖಂಡಿನೀಯವಾಗಿದ್ದು, ಇದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ಮಾಡಲಾಗುವುದು” ಎಂದರು.
“ಅಬ್ದುಲ್ ರೆಹಮಾನ್ ಹತ್ಯೆಗೆ ಸಂಚು ನಡೆಸಿದವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಕೊಲೆಗೆ ಮುನ್ನ ಪ್ರಚೋದನೆ ನೀಡಿದ ಸಂಘ ಪರಿವಾರದ ಸಂಘಟನೆಯ ಭರತ್ ಕುಮ್ಮೇಲು ಮತ್ತು ಶ್ರೀಕಾಂತ್ ಶೆಟ್ಟಿಯನ್ನುಈವರೆಗೆ ಬಂಧನ ಮಾಡಿಲ್ಲ. ಇಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಲ್ಲಿ ಕೋಮುದ್ವೇಷ ಇಲ್ಲ. ಆತನ ಕೊಲೆಗೆ ಕಾರಣವನ್ನು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ಎನ್‌ಐಎಗೆ ಒಪ್ಪಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಆದರೆ ಅಬ್ದುಲ್ ರೆಹಮಾನ್ ಮತ್ತು ಅಶ್ರಫ್ ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಎನ್ನುವುದನ್ನು ಪೊಲೀಸರು ಈವರೆಗೊ ಬಹಿರಂಗಪಡಿಸಿಲ್ಲ” ಎಂದರು.
ಇದನ್ನೂ ಓದಿ: ಮಂಗಳೂರು | ಬಂಟ್ವಾಳ ತಾಲೂಕಿನ ಶಾಲೆ, ಕಾಲೇಜುಗಳಿಗೆ ಇಂದು ರಜೆ
ಈ ಎರಡೂ ಪ್ರಕರಣಗಳನ್ನು ಎನ್‌ಐಎಗೆ ಕೊಡಲು ಸಾಧ್ಯವಿಲ್ಲದಿದ್ದರೆ, ಕೊನೆಯ ಪಕ್ಷ ವಿಶೇಷ ತನಿಖಾ ತಂಡಕ್ಕೆ ನೀಡಲಿ. ವಿಶೇಷ ತನಿಖಾ ತಂಡದ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಯಬಹುದು, ನ್ಯಾಯಸಿಗಬಹುದು ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷ ಮೂನಿಷ್ ಅಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.