ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮ ಪಂಚಾಯತಿಯ ಅಧಿಕಾರಿಗಳು ಮನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಾಣ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮವೆಸಗಿದ್ದಾರೆ ಎಂಬುದು ಸಾಬೀತಾಗಿದೆ. ಅವ್ಯವಹಾರ ನಡೆಸಿದ ಪಂಚಾಯತಿ ಅಧಿಕಾರಿ (ಪಿಡಿಒ), ತಾಂತ್ರಿಕ ಸಹಾಯಕ ಅಭಿಯಂತರರು ಮತ್ತು ಅಂದಿನ ಅಧ್ಯಕ್ಷರಿಗೆ ದಂಡ ವಿಧಿಸಿ ಜಿಲ್ಲಾ ಪಂಚಾಯತಿ ಓಂಬಡ್ಸ್‌ಮನ್ ತೀರ್ಪು ನೀಡಿದ್ದಾರೆ.
2020-21ನೇ ಸಾಲಿನಲ್ಲಿ ಮನರೇಗಾ ಅಡಿ ಕೊಟ್ಟಿಗೆ ನಿರ್ಮಾಣ ಮಾಡಿರುವುದಾಗಿ ರೈತರೊಬ್ಬರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಪಂಚಾಯತಿ ಅಧಿಕಾರಿ ಮತ್ತು ಅಂದಿನ ಅಧ್ಯಕ್ಷರು ಅಕ್ರಮ ಎಸಗಿದ್ದರು. ಸಾಮಾಜಿಕ ಕಾರ್ಯಕರ್ತರ ಶ್ರಿನಿವಾಸಗೌಡ ಪಾಟಿಲ್ ಅವರು ಆರ್‌ಐಟಿ ಮೂಲಕ ಅಕ್ರಮವನ್ನು ಬಯಲಿಗೆಳೆದಿದ್ದರು. ಅಲ್ಲದೆ, ಜಿಲ್ಲಾ ಪಂಚಾಯತಿಗೆ ದೂರು ನೀಡಿದ್ದರು. ಈ ಬಗ್ಗೆ ಈದಿನ.ಕಾಮ್ ಕೂಡ ಸುದ್ದಿ ಮಾಡಿ, ಮೇಲಧಿಕಾರಿಗಳ ಗಮನ ಸೆಳೆದಿತ್ತು.
ಪ್ರಕರಣದ ತನಿಖೆ ನಡೆಸಿದ ಓಂಬಡ್ಸ್‌ಮನ್ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ವರದಿ ನೀಡಿದ್ದಾರೆ. ಅಕ್ರಮ ಎಸಗಿದ್ದ ಪಿಡಿಒ ಎಂ.ಡಿ ಬಡಿಗೇರ ಮತ್ತು ತಾಂತ್ರಿಕ ಸಹಾಯಕ ಅಭಿಯಂತರರಿಗೆ ತಲಾ 6,417ರೂಪಾಯಿ ಹಾಗೂ ಅಂದಿನ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ ರಾ ಲಮಾಣಿ ಅವರಿಗೆ 6,416 ರೂಪಾಯಿ ದಂಡ ವಿಧಿಸಿದ್ದಾರೆ.
ಅಕ್ರಮದ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸಗೌಡ ಪಾಟಿಲ್, “ಗ್ರಾಮ ಪಂಚಾಯಿತಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಎಸಗಿದ್ದರು. ಅವರಿಗೆ ಶಿಕ್ಷೆ ವಿಧಿಸಿರುವುದು ಸಂತೋಷವಾಗಿದೆ” ಎಂದು ಹೇಳಿದ್ದಾರೆ.