ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸತಿ ನಿಲಯ ಮಂಜೂರು ಮಾಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇನೆಯ ತಾಳಿಕೋಟೆ ತಾಲೂಕು ಸಮಿತಿ ಮುಖಂಡರು ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದರು.
ಸಮಿತಿಯ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ, “ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಇಲ್ಲದಿರುವುದರಿಂದ ಎಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಆಗುತ್ತಿಲ್ಲ. ಆದಷ್ಟು ಬೇಗ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಮಂಜೂರು ಮಾಡಿ ವಿದ್ಯಾರ್ಥಿಗಳ ಪರ ನಿಲುವು ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಬಸವರಾಜ ಮದರ್ ಮಾತನಾಡಿ, “ತಾಳಿಕೋಟೆ ಪಟ್ಟಣದಲ್ಲಿ ಸುಮಾರು 25 ಕಾಲೇಜುಗಳಿವೆ. ನೂತನ ತಾಲೂಕಿನಲ್ಲಿ 58 ಹಳ್ಳಿಗಳಿವೆ. ಎಸ್.ಎಸ್.ಎಲ್.ಸಿ ಮುಗಿಸಿದ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಲು ವಸತಿ ಸೌಲಭ್ಯ ಇಲ್ಲದ ಕಾರಣ ದಿನಂಪ್ರತಿ ಹಳ್ಳಿಯಿಂದ ಹೋಗಿ ಬರಲು ತೊಂದರೆಯಾಗುತ್ತಿದೆ. ದುಡಿಯಲು ವಲಸೆ ಹೋದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ ಕಾರಣ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರರು ಆದಷ್ಟು ಬೇಗನೆ ಪಟ್ಟಣಕ್ಕೆ ಹೊಸ ವಿದ್ಯಾರ್ಥಿನಿಯರ ವಸತಿ ನಿಲಯ ಮಂಜೂರು ಮಾಡಿ ಬಡ ವಿದ್ಯಾರ್ಥಿನಿಯರಿಗೆ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ವಿವಿ ನೂತನ ಕುಲಪತಿಯಾಗಿ ಪ್ರೊ. ವಿಜಯಾ ಕೋರಿಶೆಟ್ಟಿ ನೇಮಕ
ಈ ಸಂದರ್ಭದಲ್ಲಿ ನಾಗರಾಜ ಗಜಕೋಶ, ಯಮನಪ್ಪ ನಾಯ್ಕೋಡಿ,ಪರಶುರಾಮ್ ತಳವಾರ್,ಭೀಮಾಶಂಕರ್ ಸೋನೋನೆ,ಮೈಬೂಬ್ ಅವಟಿ, ಪರಶುರಾಮ್ ನಾಲತವಾಡ, ಬಾಗಪ್ಪ ಕಟ್ಟಿಮನಿ, ಮಡು ಚಲವಾದಿ, ಶಶಿಕುಮಾರ್ ಚಲವಾದಿ,ಬಸವರಾಜ್ ತೋಟದ, ಸಾಬಣ್ಣ ಕಡದಾಳ,ಶಿವಪ್ಪ ಮಾದರ್ ಹಾಗೂ ಶೇಖಪ್ಪ ಕಟ್ಟಿಮನಿ ಇದ್ದರು.