ಪ್ರತಿಪಕ್ಷ ನೇತೃತ್ವದ ‘ಇಂಡಿಯಾ’ ಒಕ್ಕೂಟದ 21 ಸಂಸದರ ನಿಯೋಗವು ಎರಡು ದಿನಗಳ ಭೇಟಿಗಾಗಿ ಶನಿವಾರ (ಜುಲೈ 29) ಹಿಂಸಾಚಾರ ಪೀಡಿತ ಮಣಿಪುರ ರಾಜ್ಯಕ್ಕೆ ತೆರಳಿದೆ.
ಇಂಡಿಯಾ ಒಕ್ಕೂಟ ರಚನೆಯಾದ ನಂತರ ಪ್ರತಿಪಕ್ಷ ಸದಸ್ಯರ ಮೊದಲ ಭೇಟಿ ಇದಾಗಿದೆ. ಎರಡು ದಿನಗಳ ಭೇಟಿಯಲ್ಲಿ ವಿಪಕ್ಷ ನಾಯಕರು ಇಂಫಾಲ್ಗೆ ಬಂದಿಳಿದು ನಂತರ ಚುರಾಚಂದಪುರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿ ಅಲ್ಲಿ ಕುಕಿ, ಮೀತೀ ಸಮುದಾಯದ ಬುಡಕಟ್ಟು ಮುಖಂಡರು, ನಾಗರಿಕ ಸಮಾಜ ಮತ್ತು ಮಹಿಳಾ ಗುಂಪುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ನಿಯೋಗವು ಭಾನುವಾರ ಮಣಿಪುರದ ರಾಜ್ಯಪಾಲ ಅನುಸೂಯಾ ಉಯಿಕೆ ಅವರನ್ನು ಭೇಟಿ ಮಾಡಲಿದೆ.
ಕಾಂಗ್ರೆಸ್ನ ಗೌರವ್ ಗೊಗೊಯ್ ಅವರು “ಮಣಿಪುರಕ್ಕೆ ಹೋಗಿ ಸತ್ಯವನ್ನು ಕಂಡುಕೊಳ್ಳುತ್ತೇವೆ ಮತ್ತು ಆ ಸತ್ಯವನ್ನು ಸಂಸತ್ತಿನ ಮುಂದೆ ಮಂಡಿಸುತ್ತೇವೆ. ಮಣಿಪುರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ವಿಫಲವಾಗಿದೆ. ಆದ್ದರಿಂದ ನಾವು ಅಲ್ಲಿಗೆ ಹೋಗಿ ಏನು ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಅವಲೋಕಿಸುತ್ತೇವೆ” ಎಂದು ಹೇಳಿದರು.
ಆರ್ಜೆಡಿಯ ಮನೋಜ್ ಝಾ, “ಮಣಿಪುರದ ಜನರ ಮಾತುಗಳನ್ನು ಕೇಳಲು ಮತ್ತು ಅವರ ನೋವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಾಗಿ” ಹೇಳಿದರು.
ನಿಯೋಗದಲ್ಲಿ ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ಫುಲೋ ದೇವಿ ನೇತಮ್, ಕೆ ಸುರೇಶ್, ಟಿಎಂಸಿಯ ಸುಶ್ಮಿತಾ ದೇವ್, ಡಿಎಂಕೆಯ ಕನಿಮೋಳಿ, ಡಿ. ರವಿಕುಮಾರ್, ಆರ್ಜೆಡಿಯ ಮನೋಜ್ ಕುಮಾರ್ ಝಾ, ಜೆಡಿಯುನಿಂದ ರಾಜೀವ್ ರಂಜನ್ ಸಿಂಗ್, ಅನಿಲ್ ಪ್ರಸಾದ್ ಹೆಗ್ಡೆ, ಮೊಹಮ್ಮದ್ ಫೈಜಲ್ (ರಾಷ್ಟ್ರೀಯ ಕಾಂಗ್ರೆಸ್ ಪಕ್ಷ), ಜಯಂತ್ ಚೌಧರಿ (ರಾಷ್ಟ್ರೀಯ ಲೋಕದಳ), ಎನ್.ಕೆ. ಪ್ರೇಮಚಂದ್ರನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ) ಮತ್ತು ಟಿ. ತಿರುಮಾವಲವನ್ (ವಿಸಿಕೆ), ಸಿಪಿಐನ ಸಂತೋಷ್ ಕುಮಾರ್, ಸಿಪಿಐಎಂನ ಎ ಎ ರಹೀಮ್, ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್, ಐಯುಎಂಎಲ್ನ ಇ ಟಿ ಮೊಹಮ್ಮದ್ ಬಶೀರ್, ಎಎಪಿಯ ಸುಶೀಲ್ ಗುಪ್ತಾ, ಅರವಿಂದ್ ಸಾವಂತ್(ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ನಾಯಕರು ಇದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತದ ಅಕ್ಕಿ ರಫ್ತು ನಿಷೇಧ ಮತ್ತು ಜಾಗತಿಕ ಪರಿಣಾಮಗಳು
ಈ ತಿಂಗಳು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರ ಹಿಂಸಾಚಾರದ ವಿಷಯ ಸದನದಲ್ಲಿ ಗದ್ದಲಗಳಿಗೆ ಕಾರಣವಾಗಿದೆ. ವಿರೋಧ ಪಕ್ಷದ ಸಂಸದರು ಮಣಿಪುರದ ಬಗ್ಗೆ ಸುದೀರ್ಘ ಚರ್ಚೆಗೆ ಹಾಗೂ ಸದನದಲ್ಲಿ ಪ್ರಧಾನಿ ಮಾತನಾಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ನೋಟಿಸ್ ಕೂಡ ನೀಡಲಾಗಿದೆ.
ಲೋಕಸಭೆಯ ಸ್ಪೀಕರ್ ಅವಿಶ್ವಾಸ ನಿರ್ಣಯದ ಪ್ರಸ್ತಾವವನ್ನು ಅಂಗೀಕರಿಸಿದ್ದಾರೆ. ಆದರೆ ಅವಿಶ್ವಾಸ ಮತದ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ.