ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಠಾಕ್ರೆ ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ 20 ವರ್ಷಗಳ ನಂತರ ಸಾರ್ವಜನಿಕ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ‘ಮರಾಠಿ-ಭಾಷಾ’ ಮತ್ತು ‘ಮರಾಠಿ-ಮಾನೂಸ್’ (ಮರಾಠಿ ಜನ) ಹೆಸರಿನಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಇಬ್ಬರೂ ಒಗ್ಗೂಡಿದ್ದಾರೆ. ಅವರು ಜೊತೆಗೂಡಿರುವುದು, ಮಹಾರಾಷ್ಟ್ರದಲ್ಲಿ ಶೀಘ್ರವೇ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳನ್ನು ಸೂಚಿಸಿದೆ.
ಮಹಾರಾಷ್ಟ್ರ ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ತ್ರಿಭಾಷಾ ನೀತಿಯನ್ನು ಹಿಂತೆಗೆದುಕೊಂಡಿದ್ದನ್ನು ಸ್ವಾಗತಿಸಿ ಮತ್ತು ಭಾಷಾ ಹೋರಾಟಗಾರರನ್ನು ಗೂಂಡಾಗಳು ಎಂದಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೇಳಿಕೆ ಖಂಡಿಸಿ ಶನಿವಾರ, ಮುಂಬೈನ ವರ್ಲಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಮತ್ತು ಎಂಎನ್‌ಎಸ್ ಅಧ್ಯಕ್ಷ ರಾಜ್ ಹಾಗೂ ಆದಿತ್ಯ (ಉದ್ಧವ್ ಮಗ) ಮತ್ತು ಅಮಿತ್ (ರಾಜ್ ಮಗ) ಪರಸ್ಪರ ಜೊತೆಯಾಗಿ ವೇದಿಕೆಗೆ ಬಂದರು. ಅವರು ಜೊತೆಯಾಗಿ ವೇದಿಕೆ ಏರಿದ್ದು ರಾಜಕೀಯ ವಲಯಕ್ಕೆ ಬಲವಾದ ಸಂದೇಶವನ್ನು ರವಾನಿಸಿದೆ.
ಕಾರ್ಯಕ್ರಮದಲ್ಲಿ ಉದ್ಧವ್ ಮತ್ತು ರಾಜ್ ಭಾಷಣ ಮಾಡಿದ ನಂತರ, ಕಾರ್ಯಕ್ರಮದಲ್ಲಿ ನೆರೆದಿದ್ದವರು, “ಠಾಕ್ರೆ ಬ್ರ್ಯಾಂಡ್ ಜೊತೆಗೂಡಿದೆ” ಎಂದು ಹರ್ಷೋದ್ಗಾರ ಮಾಡಿದರು.
“ಒಂದು ವಿಷಯ ಸ್ಪಷ್ಟವಾಗಿದೆ. ನಾವು ನಮ್ಮ ನಡುವಿನ ಅಂತರವನ್ನು ತೊಡೆದುಹಾಕಿದ್ದೇವೆ… ನಾವು ಒಟ್ಟಿಗೆ ಇರುತ್ತೇವೆ. ಅದಕ್ಕಾಗಿ, ಒಟ್ಟಿಗೆ ಬಂದಿದ್ದೇವೆ” ಎಂದು ಉದ್ಧವ್ ಘೋಷಿಸಿದ್ದಾರೆ.
“ಇಂದು, 20 ವರ್ಷಗಳ ನಂತರ, ಉದ್ಧವ್ ಮತ್ತು ನಾನು ಒಟ್ಟಿಗೆ ಬಂದಿದ್ದೇವೆ. ಬಾಳಾಸಾಹೇಬ್ ಅವರು ಸಾಧಿಸಲು ಸಾಧ್ಯವಾಗದ್ದನ್ನು, ದೇವೇಂದ್ರ ಫಡ್ನವೀಸ್ ಮಾಡಿದರು. ಅದು ನಮ್ಮಿಬ್ಬರನ್ನೂ ಒಟ್ಟಿಗೆ ತರುವ ಕೆಲಸ” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ರಾಜ್ ಛೇಡಿಸಿದರು.
“ವಿಧಾನಸೌಧದಲ್ಲಿ ನಿಮಗೆ (ಬಿಜೆಪಿ-ಫಡ್ನವೀಸ್) ಅಧಿಕಾರವಿರಬಹುದು, ರಸ್ತೆಗಳಲ್ಲಿ ನಮಗೆ ಅಧಿಕಾರವಿದೆ” ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ಉದ್ಧವ್ ಮತ್ತು ರಾಜ್ – ಇಬ್ಬರೂ ಒಗ್ಗೂಡಿ ಮುಂಬೈ ನಾಗರಿಕ ಸಂಸ್ಥೆಯಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿಯೂ ಅಧಿಕಾರವನ್ನು ಪಡೆಯುತ್ತೇವೆ” ಎಂದು ಹೇಳಿದರು.
ಮರಾಠಿ ಭಾಷೆಯ ಬಗ್ಗೆ ಯಾವುದೇ ರಾಜಿ ಇರುವುದಿಲ್ಲ ಎಂದ ಉದ್ಧವ್ ಮತ್ತು ರಾಜ್, ಹೊಸ ಶಿಕ್ಷಣ ನೀತಿಯಡಿಯಲ್ಲಿ ತ್ರಿಭಾಷಾ ನೀತಿಯನ್ನು ಖಂಡಿಸಿದರು.
“ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಜನರಿಗೆ ಮೂರನೇ ಭಾಷೆ ಯಾವುದು ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಇಂದು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲವೂ ಇಂಗ್ಲಿಷ್‌ನಲ್ಲಿದೆ. ಹಿಂದಿ ಬೇರೆ ಯಾವುದೇ ರಾಜ್ಯದಲ್ಲಿಲ್ಲ. ಮಹಾರಾಷ್ಟ್ರದಲ್ಲಿ ಮಾತ್ರ ಏಕೆ? ಮಹಾರಾಷ್ಟ್ರ ಎಚ್ಚರವಾದಾಗ, ಏನಾಗುತ್ತದೆ ಎಂಬುದನ್ನು ನೀವು ನೋಡಬೇಕಾಗುತ್ತದೆ” ಎಂದು ರಾಜ್ ಠಾಕ್ರೆ ಹೇಳಿದ್ದಾರೆ.