ಉಡುಪಿ ಜಿಲ್ಲೆಯ ಎಲ್ಲೂರು ಬಳಿ iರುವ ಅದಾನಿ ವಿದ್ಯುತ್ ಸ್ಥಾವರದಲ್ಲಿ (ಹಿಂದಿನ ಯುಪಿಸಿಎಲ್) ದುರ್ಘಟನೆ ಸಂಭವಿಸಿದ್ದು, ರಾಜಸ್ಥಾನ ಮೂಲದ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ.
ಶುಕ್ರವಾರ, ಸ್ಥಾವರದಲ್ಲಿದ್ದ ಕಬ್ಬಿಣದ ದೊಡ್ಡ ಬೀಮ್ ಕುಸಿದು ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕಾರ್ಮಿಕನನ್ನು ರಾಜಸ್ಥಾನ ಮೂಲದ ಕಾರ್ಮಿಕ ಮುಲಾರಾಮ್ (21) ಎಂದು ಗುರುತಿಸಲಾಗಿದೆ.
ಅದಾನಿ ಸ್ಥಾವರದೊಳಗೆ ಎಫ್‌ಜಿಡಿ ಸ್ಥಾವರದ ಕಾಮಗಾರಿ ಚಾಲ್ತಿಯಲ್ಲಿತ್ತು. ಬಹುತೇಕ ಶೇ.75 ಕಾಮಗಾರಿ ಮುಕ್ತಾಯಗೊಳ್ಳುತ್ತಾ ಬಂದಿದೆ. ಅದಾನಿ ಸಂಸ್ಥೆಯು `ಪವರ್ ಮೆಕ್’ ಕಂಪನಿಗೆ ಈ ಕುರಿತಾದ ಗುತ್ತಿಗೆಯನ್ನು ನೀಡಿತ್ತು. ಆದರೆ ಅರ್ಧಾಂಶ ಕಾಮಗಾರಿ ವೇಳೆ ಆ ಕಂಪೆನಿಯು ಕೇರಳದ `ಸುನ್ನಿ ಮತ್ತು ವೆಲ್ ಟೆಕ್’ ಎಂಬ ಸಂಸ್ಥೆಯನ್ನು ಪರ್ಯಾಯವಾಗಿ ಈ ಕಾರ್ಯಕ್ಕಾಗಿ ನೇಮಕ ಮಾಡಿತ್ತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖಾಸಗಿ ಬಸ್ ಪಲ್ಟಿ; 10ಕ್ಕೂ ಅಧಿಕ ಮಂದಿಗೆ ಗಾಯ
ಶುಕ್ರವಾರ ಮಧ್ಯಾಹ್ನದ ವೇಳೆ ಕ್ರೇನ್ ಮೂಲಕ ರೋಪ್ ಕಟ್ಟಿಕೊಂಡು ಸುರಕ್ಷತಾ ಕ್ರಮವಾಗಿ 5 ಮಂದಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಕ್ರೇನ್‌ನ ರೋಪ್ ತುಂಡಾಗಿ ಕಟ್ಟಡದ ಬೀಮ್ ಒಂದು ನೆಲಕ್ಕುರುಳಿದೆ. ನಾಲ್ವರು ರೋಪ್ ಸಮೇತ ನೆಲಕ್ಕುರುಳಿದ್ದರು. ಇವರಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮುಲಾರಾಮ್ ಎಂಬ ಕಾರ್ಮಿಕ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಮೂರು ಮಂದಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.